ಕಲಬುರಗಿ: ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗೇಟಿನ ಇಂಡಿಯಾ-1 ಎಟಿಎಂ (ನಾಲ್ವಾರ)ಗೆ ಕನ್ನ ಹಾಕಿ ಸುಮಾರು 15 ಲಕ್ಷ ರೂ.ಗಳನ್ನು ದೋಚಿದ್ದ ಕಳ್ಳರಿಬ್ಬರನ್ನು ಬಂಧಿಸಿ, ಅವರಿಂದ 10.20 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‌ಪಿ ಎನ್. ಶಶಿಕುಮಾರ ತಿಳಿಸಿದ್ದಾರೆ.
ಜೂ.2-3 ರ ಮಧ್ಯರಾತ್ರಿ ನಾಲ್ವಾರ ಕುಂಬಾರಹಳ್ಳಿಯ ಎಟಿಎಂನಲ್ಲಿ ಆದ ಕಳ್ಳತನಕ್ಕೆ ಸಂಬಂಧಿಸಿದಂತೆ ಚಿಂಚೋಳಿ ತಾಲೂಕಿನ ಚಿಂತಕುಂಟಾದ ಜಗದೇವಪ್ಪ ಬುಗ್ಗಪ್ಪ ಬೋಯಿನ್, ಯಾದಗಿರಿ ತಾಲೂಕಿನ ಚಿಂತಕುಂಟಾದ ಜಗನ್ನಾಥ ಶಾಮರಾವ ಕೊಡದೂರ ಎನ್ನುವರನ್ನು ಬಂಧಿಸಲಾಗಿದೆ. ಶಿವಕುಮಾರ ಚಂದ್ರಪ್ಪ ಕೊಡದೂರ ಎನ್ನುವನು ಪರಾರಿಯಾಗಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು.
ಮೊದಲು ಸೆಕ್ಯುರಿಟಿ ಏಜೆನ್ಸಿಯಲ್ಲಿ ಗನ್‌ಮ್ಯಾನ್ ಎಂದು ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ತಿಂಗಳಿಂದ ಎಟಿಎಂಗೆ ಹಣ ತುಂಬುವ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದ ಯಾದಗಿರಿ ತಾಲೂಕಿನ ಚಿಂತಕುಂಟಾದ ಜಗದೇವಪ್ಪ ಬುಗ್ಗಪ್ಪಾ ಬೋಯಿನ್ ರಹಸ್ಯ ಪಾಸ್‌ವರ್ಡ್‌ಗಳನ್ನು ತಿಳಿದುಕೊಂಡು ತನ್ನ ಸಹಚರರೊಂದಿಗೆ ಸೇರಿ ಮಧ್ಯರಾತ್ರಿ ವೇಳೆ ಸಮಯದಲ್ಲಿ ಸಿಸಿಟಿವಿಯಲ್ಲಿ ಕಾಣಬಾರದೆಂದು ಛತ್ರಿ ಹಿಡಿದು 12 ಡಿಜಿಟ್‌ನ ಪಾಸ್‌ವರ್ಡ್ ಬಳಸಿ 14,96500 ರೂ. ದೋಚಿಕೊಂಡು ಪರಾರಿಯಾಗಿದ್ದರು. ಇವರು ವಿಲಾಸಿ ಜೀವನ ನಡೆಸಲು ಇಂತಹ ಕೃತ್ಯಕ್ಕೆ ಕೈ ಹಾಕಿದ್ದರು ಎಂದು ವಿವರಿಸಿದರು.
ಈ ಬಗ್ಗೆ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಪಿ ಎನ್.ಶಶಿಕುಮಾರ, ಹೆಚ್ಚುವರಿ ಎಸ್.ಪಿ. ಜಯಪ್ರಕಾಶ, ಶಹಾಬಾದ ಡಿಎಸ್‌ಪಿ ಬಸವರಾಜ ಕೆ., ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಶಂಕರಗೌಡ ವಿ. ಪಾಟೀಲ ನೇತೃತ್ವದಲ್ಲಿ ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿಗಳಾದ ಚನ್ನಮಲ್ಲಪ್ಪ, ಮೇಲಗಿರಿ, ಚಂದ್ರಶೇಖರ, ಅನ್ವರ್, ವೀರಭದ್ರ, ದತ್ತಾತ್ರೇಯ, ದೊಡ್ಡಪ್ಪ, ಬಸಲಿಂಗಪ್ಪಾ, ಕೊಟ್ರೇಶ, ನಾಗರಾಜ, ಅಶೋಕ, ಕಾಂತಪ್ಪಾ, ಲಕ್ಷ್ಮಣ, ಚನ್ನವೀರ ಹಾಗೂ ಯಾದವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಬಂಧಿತ ಆರೋಪಿಗಳಿಂದ 10.20 ಲಕ್ಷ ರೂ., ಛತ್ರಿ, ಬೈಕ್, ಮೊಬೈಲ್ ಮತ್ತು ಸುಮಾರು 11 ಎಟಿಎಂಗಳ ಪಾಸ್‌ವರ್ಡ್ ಬರೆದ ಪೇಪರ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.