Advertisement

ಸೂಗೂರೇಶ್ವರ ಸ್ವಾಮಿ ಭಕ್ತರಿಗೆ ಎಟಿಎಂ ಸಮಸ್ಯೆ!

01:01 PM Jul 09, 2018 | Team Udayavani |

ರಾಯಚೂರು: ಈ ಭಾಗದ ಪ್ರಮುಖ  ದೇವಸ್ಥಾನಗಳಲ್ಲೊಂದಾದ ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ ಭಕ್ತರಿಗೆ ಎಟಿಎಂ ಸಮಸ್ಯೆ ಕಾಡುತ್ತಿದೆ. ದೇವಸ್ಥಾನದ ಆಸುಪಾಸು ಎಲ್ಲಿಯೂ ಎಟಿಎಂಗಳೇ ಇಲ್ಲದ ಕಾರಣ ಭಕ್ತರು ಕಿ.ಮೀ. ಗಟ್ಟಲೇ ಅಲೆಯುವ ಪರಿಸ್ಥಿತಿ ಇದೆ. ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್‌ ಇರುವುದು ಇದೇ ಊರಲ್ಲಿ. ಸೂಗೂರೇಶ್ವರ ದೇವಸ್ಥಾನಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ.

Advertisement

ಇಲ್ಲಿಗೆ ರಾಜ್ಯ ಮಾತ್ರವಲ್ಲದೇ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ವಿಶೇಷ ಧಾರ್ಮಿಕ ದಿನಗಳಂದು ದೇವಸ್ಥಾನ ಭಕ್ತರಿಂದ ಕಿಕ್ಕಿರಿದಿರುತ್ತದೆ. ಹೀಗೆ ಬಂದ ಭಕ್ತರಿಗೆ ಏನಾದರೂ ಹಣದ ಅಗತ್ಯ ಬಿದ್ದರೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ. ಅಲ್ಲಿಂದ ಸುಮಾರು ಎರಡು ಕಿ.ಮೀ. ಅಂತರದಲ್ಲಿರುವ ಬಸ್‌ ನಿಲ್ದಾಣಕ್ಕೆ ಬರಬೇಕು, ಇಲ್ಲವೇ ಹೈದರಾಬಾದ್‌ ಮುಖ್ಯ ರಸ್ತೆಗೆ ಬರಬೇಕಿದೆ. 

ಸಾಮಾನ್ಯವಾಗಿ ದೊಡ್ಡ ದೊಡ್ಡ ದೇವಸ್ಥಾನಗಳ ಪ್ರಾಂಗಣದಲ್ಲಿಯೇ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್‌ಗಳು ಎಟಿಎಂಗಳ ವ್ಯವಸ್ಥೆ ಮಾಡಿರುತ್ತವೆ. ಆದರೆ, ಇಂಥ ದೊಡ್ಡ ದೇವಸ್ಥಾನದಲ್ಲಿ ಒಂದೇ ಒಂದು ಎಟಿಎಂ ಆರಂಭಿಸದಿರುವ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ತಂಗುವುದು ಜಾಸ್ತಿ: ಶ್ರೀ ಸೂಗೂರೇಶ್ವರ ಸ್ವಾಮಿಗೆ ಹರಕೆ ಹೊತ್ತ ಜನ ಅಮಾವಾಸ್ಯೆ ಸೇರಿ ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ಬಂದು ತಂಗುತ್ತಾರೆ. ರಾತ್ರಿ ಆಗಮಿಸಿ ದೇವಸ್ಥಾನದಲ್ಲಿಯೇ ವಾಸವಿದ್ದು, ಬೆಳಗ್ಗೆ ದರ್ಶನಾಶೀರ್ವಾದ ಪಡೆದು ಹೋಗುತ್ತಾರೆ. ಅಂಥವರು ಹಣವಿಲ್ಲದೇ ಬಂದಿದ್ದರೆ ಕಷ್ಟ ಎದುರಿಸದೆ ವಿಧಿಯಿಲ್ಲ. ಹಣ ಬೇಕೆಂದರೆ ಭಕ್ತರು ಎರಡು ಕಿ.ಮೀ. ಕ್ರಮಿಸಲೇಬೇಕು.

ಶ್ರಾವಣದಲ್ಲಿ ಭಕ್ತರು ಹೆಚ್ಚು: ಇನ್ನು ತಿಂಗಳಲ್ಲಿ ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣ ಬಂದರೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಭಕ್ತರು ನಾನಾ ಹರಕೆ ತೀರಿಸಲು ದೇವಸ್ಥಾನಕ್ಕೆ ಬರುತ್ತಾರೆ. ಶ್ರಾವಣ ಸೋಮವಾರ ಇಲ್ಲಿ ಸಣ್ಣ ಜಾತ್ರೆಯಂತೆಯೇ ಇರುತ್ತದೆ. 

Advertisement

ಇನ್ನು ಸ್ವಾಮಿಯ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಇಷ್ಟೆಲ್ಲ ಇದ್ದರೂ ಬ್ಯಾಂಕ್‌ಗಳು ಎಟಿಎಂ ಸ್ಥಾಪಿಸದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಬ್ಯಾಂಕ್‌ಗಳು ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಆಸುಪಾಸಿನಲ್ಲಿ ಎಟಿಎಂ ಸ್ಥಾಪಿಸಲಿ ಎಂಬುದು ಭಕ್ತರ ಒತ್ತಾಯವಾಗಿದೆ.

ನಮ್ಮ ಕುಟುಂಬದವರು ದೇವಸ್ಥಾನಕ್ಕೆ ಸಾಕಷ್ಟು ವರ್ಷಗಳಿಂದ ಬರುತ್ತೇವೆ. ಹಣದ ಅನಿವಾರ್ಯತೆ ಸೃಷ್ಟಿಯಾದರೆ ಇಲ್ಲಿ ಎಲ್ಲಿಯೂ ಎಟಿಎಂಗಳೇ ಸಿಗುವುದಿಲ್ಲ. ಸಾಕಷ್ಟು ದೂರ ಕ್ರಮಿಸಬೇಕಿದೆ. ಯಾವುದಾದರೂ ಬ್ಯಾಂಕ್‌ನವರು ಇಲ್ಲಿಯೇ ಎಟಿಎಂ ಸ್ಥಾಪಿಸಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು.
 ಹೆಸರು ಹೇಳಲಿಚ್ಚಿಸದ ಭಕ್ತರು

ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳಲ್ಲಿ ಎಟಿಎಂ ಸ್ಥಾಪಿಸಲಾಗುತ್ತದೆ. ಸೂಗೂರೇಶ್ವರ ದೇವಸ್ಥಾನದ ಬಳಿ ಎಟಿಎಂ ಇಲ್ಲದಿರುವ ಬಗ್ಗೆ ಗಮನಕ್ಕಿಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯರು ಅಥವಾ ಸಂಬಂಧಪಟ್ಟ ಆಡಳಿತ ಮಂಡಳಿಯವರು ಸ್ಥಳೀಯವಾಗಿ ಇರುವ ಬ್ಯಾಂಕ್‌ ಶಾಖೆಗೆ ಮನವಿ ನೀಡಿದಲ್ಲಿ ಅಳವಡಿಸಬಹುದು.
 ಮುರಳಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next