ಕಾರ್ಕಳ : ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ ಬೆಟ್ಟುವಿನ 9ನೇ ವಯಸ್ಸಿನ ಬಾಲಕನೋರ್ವ ಕೋಣದ ಬಾಲ ಹಿಡಿದು ಓಡುವ ಮೂಲಕ ಕಂಬಳ ಓಟದ ಕಡೆ ಆಕರ್ಷಿತನಾಗಿದ್ದಾನೆ.
ಇಲ್ಲಿನ ಮಂಜಲ್ ಬೆಟ್ಟು ಸುಹಾಸ್ ಪ್ರಭು ಅಮೃತ ದಂಪತಿಗಳ ಪುತ್ರ ಅತಿಶ್ ಪ್ರಭು ಕಂಬಳ ಕ್ರೀಡಾ ಕಡೆ ಆಕರ್ಷಣೆಗೊಂಡು ಕೋಣದ ಜೊತೆ ಓಟ ನಡೆಸುವ ತಾಲೀಮು ನಡೆಸುತ್ತಿದ್ದಾನೆ.
ಇತ್ತೀಚೆಗೆ ಕಂಬಳ ಓಟದಲ್ಲಿ ಪ್ರಸಿದ್ದಿಗೆ ಬಂದ ಕಂಬಳ ಓಟಗಾರ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ ಅವರು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದರು. ಅವರನ್ನೆ ಮಾಡೆಲ್ ಆಗಿ ಅನುಸರಿಸಿರುವ ಈ ಬಾಲಕ ಕೂಡ ಕಂಬಳದಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸು ಹೊತ್ತಿದ್ದಾನೆ.
ತಂದೆ ಸುಹಾಸ್ ಪ್ರಭು ಕ್ರಷಿಕರು ಜತೆಗೆ ನಾಟಿ ವೈದ್ಯರು ಇವರು ಕೂಡ ಕಂಬಳ ಸ್ಪರ್ಧೆಗೆ ಕೋಣಗಳ ಜೊತೆ ತೆರಳುತ್ತಾರೆ. ಇತ್ತೀಚೆಗೆ ನಡೆದ ಕಂಬಳ ಓಟದಲ್ಲಿ ಪಾಲ್ಗೊಂಡಿದ್ದರು. ಇವರ ಮನೆಯಲ್ಲಿ ಈಗ ಮೂರು ಕೋಣಗಳಿದ್ದು ಅತಿಶ್ ಪ್ರಭುಗೆ ಕೋಣಗಳೆಂದರೆ ಇಷ್ಟ..ಕೋಣಗಳನ್ನು ತೊಳೆಯಲು ಹುಡುಗ ಕರೆದೊಯ್ಯುತಿದ್ದ, ಹಾಗೆ ಬರುವಾಗ ಕೋಣಗಳ ಜೊತೆ ಓಡುವುದನ್ನು ಕೆಲ ದಿನಗಳಿಂದ ಮೈಗೂಡಿಸಿಕೊಂಡಿದ್ದಾನೆ. ಇಷ್ಟು ಮಾತ್ರವಲ್ಲದೆ ಕಂಬಳ ಓಟಗಾರರಂತೆ ಉಡುಗೆ ತೊಡುಗೆಗಳನ್ನು ಧರಿಸುತ್ತಾನೆ. ಈತನ ಕಂಬಳ ಪ್ರೀತಿಗೆ ಹೆತ್ತವರು ಕೂಡ ಸಂತೋಷ ಪಡುತ್ತಿದ್ದಾರೆ.