ಉಡುಪಿ: ಪ್ರಸ್ತುತ ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ರಾಧಾ-ಕೃಷ್ಣ, ಸೀತಾ-ರಾಮ ಮತ್ತು ಊರ್ಮಿಳೆ-ಲಕ್ಷ್ಮಣರ ಪವಿತ್ರ ಅಮರ ಪ್ರೇಮವನ್ನು ತಿಳಿಸುವುದರ ಜತೆಗೆ ಭಾರತೀಯ ಸಂಸ್ಕೃತಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಬೇಕಿದೆ. ಇದರಿಂದ ಲವ್ ಜೆಹಾದ್‌ನಂತಹ ಪಿಡುಗನ್ನು ತಡೆಗಟ್ಟಬಹುದು ಎಂದು ಕಾರ್ಕಳದ ಉಪನ್ಯಾಸಕಿ, ವಾಗ್ಮಿ ಅಕ್ಷಯಾ ಗೋಖಲೆ ತಿಳಿಸಿದರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಬುಧವಾರ ಆರಂಭಗೊಂಡಿರುವ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
18 ವರ್ಷ ತುಂಬುತ್ತಿದ್ದಂತೆ ಹಿಂದೂ ಯುವತಿ ಲಕ್ಷ್ಮೀ, ರಜಿಯಾ ಆಗಿ ಮತಾಂತರವಾಗುವುದಕ್ಕೆ ಮೂಲ ಕಾರಣ ಪೋಷಕರು. ಶ್ರದ್ಧಾ 32 ತುಂಡುಗಳಾಗಿ ಫ್ರಿಡ್ಜ್ ನಲ್ಲಿ ಸೇರಿದರೂ ನಮ್ಮ ಯುವತಿಯರು ಲವ್ ಜೆಹಾದ್ ಬಲೆಗೆ ಸಿಲುಕುತ್ತಿದ್ದಾರೆ ಎಂಬುದಕ್ಕೆ ಕಾರಣ ಏನೆಂದು ಚಿಂತಿಸಬೇಕಾಗಿದೆ. ಮಕ್ಕಳಿಗೆ ಭಾರತದ ಸಂಸ್ಕೃತಿಯ ಬಗ್ಗೆ ಸ್ಥೂಲವಾದ ಪರಿಚಯವನ್ನು ಹೆತ್ತವರು ತಿಳಿಹೇಳಬೇಕಾಗಿದೆ. ನಾವು ಸರಿಯಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಹಿಂದೂ ಧರ್ಮದ ಬಗ್ಗೆ ದೃಢವಾದ ಹೆಮ್ಮ ಮತ್ತು ಅಗಾಧವಾದ ಅರಿವನ್ನು ಮಕ್ಕಳಲ್ಲಿ ತುಂಬಬೇಕು. ಭಾರತವನ್ನು ಮಾತೆಯ ರೂಪದಲ್ಲಿ ಪೂಜಿಸುತ್ತೇವೆ. ಪುರುಷ ಮತ್ತು ಪ್ರಕೃತಿ, ಶಿವ ಹಾಗೂ ಶಕ್ತಿ ಒಂದಾದರೆ ಮಾತ್ರ ಸಮಾಜವು ಪರಿಪೂರ್ಣವಾಗಲು ಸಾಧ್ಯ. ಪ್ರಸ್ತುತ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರೇ ಸಂಸ್ಕೃತಿಯಿಂದ ದೂರ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
Related Articles
ಎಲ್ಲವೂ “ಶಿವ’
ಉದ್ಘಾಟಿಸಿದ ಶೃಂಗೇರಿ ಪಾಠಶಾಲೆಯ ಪ್ರಚಾರಕ, ಯಾಗದ ಪ್ರಧಾನ ಅರ್ಚಕ ವಿನಾಯಕ ಉಡುಪ ಮಾತನಾಡಿ, ಭಗವಂತನು ಎಲ್ಲ ರೂಪಗಳಲ್ಲಿಯೂ ಇದ್ದಾನೆ ಎಂದು ಶಾಸ್ತ್ರ ತಿಳಿಸುತ್ತದೆ. “ಶಿವ’ ಎನ್ನುವ ಶಬ್ದದ ಅರ್ಥ ಎಲ್ಲವೂ, ಯಾವುದರಲ್ಲಿ ಸೇರಿಕೊಂಡಿದೆಯೋ ಅವನೇ ಶಿವ. ಈ ಪ್ರಪಂಚದಲ್ಲಿ ಭಗವಂತನ ಅಸ್ತಿತ್ವವನ್ನು ಹೊರತುಪಡಿಸಿ ಬೇರಾವುದಕ್ಕೂ ಸ್ವಾತಂತ್ರ್ಯವಿಲ್ಲ. ವೈದಿಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯೇ ದೇಶದ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಿದೆ ಮತ್ತು ವೈಶಿಷ್ಟ್ಯವೂ ಹೌದು ಎಂದು ತಿಳಿಸಿದರು.
ಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಜಿಲ್ಲಾ ಸಂಘಚಾಲಕ್ ನಾರಾಯಣ ಶೆಣೈ, ಸಹಕಾರಿ ಧುರೀಣರಾದ ಶಂಭು ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಮಂಜುನಾಥ ಉಪಾಧ್ಯ, ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರೀ, ಪ್ರಮುಖರಾದ ಎಂ. ಮುಕುಂದ ಪ್ರಭು, ಪಾಂಡುರಂಗ ಲಾಗ್ವಾಂಕರ್, ಮೊಕ್ತೇಸರರಾದ ದಿನೇಶ್ ಪ್ರಭು, ಶುಭಕರ ಸಾಮಂತ್, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್ ಮೊದಲಾದವರು ಉಪಸ್ಥಿತರಿದ್ದರು.
ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ನಿರೂಪಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿದರು.