Advertisement

ಹಳ್ಳಿ ಸೊಗಡು ನೆನಪಿಸಿದ ಆಟಿಡೊಂಜಿ ಕೂಟ

01:19 AM Aug 12, 2019 | Lakshmi GovindaRaj |

ಬೆಂಗಳೂರು: ಅಲ್ಲಿ ಹಳ್ಳಿಗಾಡಿನ ಸೊಗಡು ಮೇಳೈಸಿತ್ತು. ತುಳುನಾಡಿನ ಜಾನಪದ ಕಲೆಗಳು ಅನಾವರಣಗೊಂಡಿತ್ತು. ಒಂದು ಕಡೆ ಹಿರಿಯರು ಚೆನ್ನೆಮನೆ ಆಟವಾಡಿ ಹಳ್ಳಿ ಸಂಸ್ಕೃತಿ ನೆನಪಿಸಿದರೆ ಮತ್ತೂಂದು ಕಡೆ ಯುವ ಸಮೂಹ ಲಗೋರಿ ಆಟವಾಡಿ ಸಂಭ್ರಮಿದರು. ಇಂತಹ ಅಪರೂಪದ ಸಂಭ್ರಮಕ್ಕೆ ಬೆಂಗಳೂರಿನ ತುಳುವೆರೆಂಕುಲ ಸಂಸ್ಥೆ, ಭಾನುವಾರ ವಿಜಯಾ ಬ್ಯಾಂಕ್‌ ಲೇ ಔಟ್‌ನಲ್ಲಿ ಹಮ್ಮಿಕೊಂಡಿದ್ದ “ಆಟಿಡೊಂಜಿ ಕೂಟ-2019′ ಸಾಕ್ಷಿಯಾಯಿತು. ಬೆಂಗಳೂರಿನ ವಿವಿಧಡೆಗಳಲ್ಲಿ ನೆಲೆಸಿರುವ ತುಳು ಬಾಂಧವರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಯಿತು.

Advertisement

ಬೆಳಗ್ಗೆಯಿಂದ ಸಂಜೆವರೆಗೂ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ತುಳುನಾಡಿನ ಸಾಂಸ್ಕೃತಿ ಸಿರಿವಂತಿಕೆಯನ್ನು ಮತ್ತೆ ನೆನಪಿಸಿತು. ಹಿರಿಯರಿಂದ ಹಿಡಿದು ಪುಟಾಣಿ ಮಕ್ಕಳು ಕೂಡ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಾಗತೀಕರಣದಿಂದಾಗಿ ಇಂದು ಅನೇಕ ರೀತಿಯ ಜಾನಪದ ಆಟಗಳು ಮಾಯವಾಗುತ್ತಿವೆ. ಇದರಲ್ಲಿ ಚೆನ್ನೆಮನೆ ಆಟ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಈ ಆಟವನ್ನು “ಆಟಿಡೊಂಜಿ ಕೂಟ’ ನೆನಪಿಸಿತು. ಹಿರಿಯರು ಆಟವಾಡುತ್ತಿದ್ದದನ್ನು ಪುಟಾಣಿ ಮಕ್ಕಳು ಆಸಕ್ತಿಯಿಂದ ಆಟವನ್ನು ವೀಕ್ಷಿಸಿ, ಆನಂದಿಸಿದರು.

ಖುಷಿಕೊಟ್ಟ ಲಗೋರಿಯಾಟ: ದೊಡ್ಡ ಸಂಖ್ಯೆಯಲ್ಲಿ ಯುವಕರು ಲಗೋರಿಯಾಟದಲ್ಲಿ ಕಾಣಿಸಿಕೊಂಡರು. ಬೆಂಗಳೂರಿನ ವಿವಿಧ ಕಡೆಗಳಲ್ಲಿ ನೆಲೆಸಿರುವ ಕರಾವಳಿ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಆಟದಲ್ಲಿ ಭಾಗವಹಿಸಿದ್ದರು. ಅಲ್ಲದೆ ಆಶುಭಾಷಣ, ಭಾಗತಿಕೆ ಹಾಡುವ ಸ್ಪರ್ಧೆ, ಮದಿಪು ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಜಾನಪ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಯುವಕರು ಪಾಲ್ಗೊಂಡಿದ್ದರು.

ಕಳೆತಂದ ಮಾನಿನಿಯರು: ಆಟಿಡೊಂಜಿ ಕೂಟದಲ್ಲಿ ಮಾನಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾನಪದ ಕ್ರೀಡಾ ಕೂಟಕ್ಕೆ ಮತ್ತಷ್ಟು ಕಳೆ ತಂದರು. ಯುವತಿಯರ ಜತೆಗೆ ಮಹಿಳೆಯರು ಕೂಡ ಲಗೋರಿ ಆಟದಲ್ಲಿ ಪಾಲ್ಗೊಂಡು ಕ್ರೀಡೆಯ ಸವಿಯುಂಡರು. ಹಗ್ಗಜಗ್ಗಾಟ, ರಂಗೋಲಿ ಸ್ಪರ್ಧೆ, ನಿಂಬೆ ಹಣ್ಣಿನ ಓಟ, ಸೂಜಿಗೆದಾರ ಪೋಣಿಸುವುದು ಸೇರಿಂದತೆ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗ್ರಾಮೀಣ ಕ್ರೀಡೆಗಳನ್ನು ಯುವ ಸಮೂಹಕ್ಕೆ ನೆನಪಿಸಿದರು.

ಮೈದಾ ಹಿಟ್ಟಿನಲ್ಲಿ ನಾಣ್ಯ ಹುಡುಕುವ ಸ್ಪರ್ಧೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಹಾರ ಪ್ರಿಯರು ಖಾದ್ಯ ಮೇಳದಲ್ಲಿ ಹಲಸಿನ ಕಡಬು, ಕೊಟ್ಟೆಕಡಬು, ಗೋಲಿಬಜೆ, ಪತ್ರವಡೆ, ನೀರ್‌ ದೋಸೆಗಳ ಸವಿಯುಂಡರು. ಮಧ್ಯಾಹ್ನ ನಡೆದ “ಕರ್ಣಾರ್ಜುನ ಕಾಳಗ’, ಯಕ್ಷಗಾನ ತಾಳಮದ್ದಳೆ ಯಕ್ಷಗಾನ ಪ್ರಿಯರನ್ನು ರಂಜಿಸಿತು.

Advertisement

ತುಳು ಭವನಕ್ಕೆ ನಿರ್ಮಾಣಕ್ಕೆ ಮನವಿ: ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್‌, ಬೆಂಗಳೂರಿನಲ್ಲಿ ಹಲವು ಸಂಖ್ಯೆಯಲ್ಲಿ ತುಳುವರಿದ್ದಾರೆ. ಆ ಹಿನ್ನೆಲೆಯಲ್ಲಿ ತುಳುವ ಭವನದ ಅವಶ್ಯಕತೆಯಿದ್ದು, ಸರ್ಕಾರ ತುಳು ಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ತುಳುನಾಡು ತನ್ನದ ಆದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ.

ಆ ನೆಲದ ಜಾನಪದ ಕಲೆಗಳನ್ನು ನಮ್ಮ ಯುವ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು. ಬೆಂಗಳೂರು ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಬಾ.ರಾಮಚಂದ್ರ ಉಪಾಧ್ಯ, ಬೆಂಗಳೂರು ತುಳುವರೆ ಚಾವಡಿ ಅಧ್ಯಕ್ಷ ಆಶಾನಂದ ಕುಲಶೇಖರ, ವಕೀಲೆ ಶಕುಂತಳಾ ಶೆಟ್ಟಿ, ವಿಜಯಕುಮಾರ್‌ ಕುಲಶೇಖರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಗರೀಕರಣದಿಂದಾಗಿ ಜಾನಪದ ಕಲೆಗಳು ಮರೆಯಾಗುತ್ತಿದ್ದು, ಅವುಗಳನ್ನು ನಮ್ಮ ಯುವ ಸಮೂಹಕ್ಕೆ ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
-ಪಳ್ಳಿ ವಿಶ್ವನಾಥ ಶೆಟ್ಟಿ, ತುಳುವೆರೆಂಕುಲು ಬೆಂಗಳೂರು ಸಂಸ್ಥೆ ಪ್ರ.ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next