Advertisement
ಅಂಬಾವಿಲಾಸ ಅರಮನೆ ಅವರಣದಲ್ಲಿರುವ ಗಾಯತ್ರಿದೇವಿ ದೇವಾಸ್ಥಾನದ ಆವರಣದಲ್ಲಿ ಜಟ್ಟಿ ಸಮುದಾಯದ ಹಿರಿಯರ ಸಮ್ಮುಖದಲ್ಲಿ ನಾಲ್ವರು ಜಟ್ಟಿಗಳನ್ನು ಆಯ್ಕೆ ಮಾಡಲಾಯಿತು. ವಜ್ರಮುಷ್ಠಿ ಕಾಳಗದಲ್ಲಿ ಕೇವಲ ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ಚನ್ನಪಟ್ಟಣದ ಜಟ್ಟಿಗಳು ಮಾತ್ರ ಭಾಗವಹಿಸಲಿದ್ದಾರೆ.
Related Articles
Advertisement
ವಜ್ರಮುಷ್ಠಿ ಕಾಳಗ: ದಸರಾ ಮಹೋತ್ಸವದ ಕೊನೆಯ ದಿನದಂದು ನಡೆಯುವ ವಿಜಯದಶಮಿಯ ಜಂಬೂಸವಾರಿಗೂ ಮುನ್ನ ಅರಮನೆ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದೆ. ನಾಡು ಮತ್ತು ರಾಜವಂಶಸ್ಥರ ಒಳಿತಿಗಾಗಿ ನಡೆಯುವ ವಜ್ರಮುಷ್ಟಿ ಕಾಳಗವನ್ನು ಈ ಹಿಂದೆ ಸ್ಪರ್ಧೆಯ ರೀತಿಯಲ್ಲಿ ನಡೆಸಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಡೆಯುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಪರಂಪರೆಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ವಜ್ರಮುಷ್ಠಿ ಕಾಳಗದಲ್ಲಿ ಮುಖಾಮುಖೀಯಾಗುವ ಜಟ್ಟಿಗಳ ತಲೆಯಿಂದ ರಕ್ತ ಚಿಮ್ಮುತ್ತಿದ್ದಂತೆ ಕಾಳಗ ಮುಕ್ತಾಯಗೊಳ್ಳಲಿದೆ. ಜಟ್ಟಿ ಕಾಳಗದಲ್ಲಿ ಸೆಣೆಸಾಡುವ ಜಟ್ಟಿಗಳು ರಾಜವಂಶಸ್ಥರು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ, ಚಾಮುಂಡೇಶ್ವರಿಗೆ ರಕ್ತ ನೀಡುತ್ತೇವೆಂಬ ಉದ್ದೇಶದಿಂದ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಾರೆ.
ಆಯ್ಕೆಯಲ್ಲಿ ವಿಳಂಬ: ಈ ಬಾರಿ ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನಿಂದ ಭಾಗವಹಿಸಲು ಮೂವರ ನಡುವೆ ಪೈಪೋಟಿ ಉಂಟಾದ ಹಿನ್ನೆಲೆಯಲ್ಲಿ ಜಟ್ಟಿಯ ಆಯ್ಕೆಯಲ್ಲಿ ಸ್ವಲ್ಪಮಟ್ಟಿನ ವಿಳಂಬವಾಯಿತು. ವಜ್ರಮುಷ್ಠಿ ಕಾಳಗದಲ್ಲಿ ಸ್ಪರ್ಧಿಸಲು ಮೈಸೂರಿನ ಮಾಧವ ಜಟ್ಟಿ, ಬಲರಾಮ ಜಟ್ಟಿ ಹಾಗೂ ಮಧು ಜಟ್ಟಿ ಅವರು ಆಸಕ್ತಿ ತೋರಿದರು.
ಆದರೆ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಜೋಡಿ ಕಟ್ಟುವಿಕೆಯಲ್ಲಿ ಕೆಲಕಾಲ ವಿಳಂಬವಾಯಿತು. ಆದರೆ ಸಮುದಾಯದ ಹಿರಿಯರ ತೀರ್ಮಾನದಂತೆ ಅಂತಿಮವಾಗಿ ಮಂಜುನಾಥ ಜೆಟ್ಟಿ ಅವರಿಗೆ ಮೈಸೂರಿನಿಂದ ಭಾಗವಹಿಸುವ ಅವಕಾಶ ಲಭಿಸಿತು.