Advertisement

Sandalwood: ಅಥಿ ಐ ಲವ್‌ ಯು ಟ್ರೇಲರ್‌ ಬಿಡುಗಡೆ

04:01 PM Nov 01, 2023 | Team Udayavani |

ಲೋಕೇಂದ್ರ ಸೂರ್ಯ ಮತ್ತು ಸಾತ್ವಿಕಾ ರಾವ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಅಥಿ ಐ ಲವ್‌ ಯು’ ಸಿನಿಮಾದ ಮೊದಲ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು.

Advertisement

ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿಕಾಯೋಳು’ ಸಿನಿಮಾವನ್ನು ನಿರ್ದೇಶಿಸಿದ್ದ ಲೋಕೆಂದ್ರ ಸೂರ್ಯ ಈ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದು, ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಸೆವೆನ್‌ ರಾಜ್‌ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಟ್ರೇಲರ್‌ ಬಿಡುಗಡೆ ವೇಳೆ “ಅಥಿ ಐ ಲವ್‌ ಯು’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಾಯಕ ನಟ ಲೋಕೆಂದ್ರ ಸೂರ್ಯ, “ಈ ಸಿನಿಮಾ ಅಥಿ ಹಾಗೂ ವಸಂತ್‌ ಎಂಬ ಎರಡು ಪಾತ್ರಗಳ ಸುತ್ತ ನಡೆಯುತ್ತದೆ. ಇದು ಒಂದು ದಿನದಲ್ಲಿ ನಡೆಯುವ ಕಥೆ. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡ ದಿನ ರಾತ್ರಿ ವಾಪಸು ಬರುತ್ತಾನೆ. ಒಂದು ದಿನ ಇದಕ್ಕಿದಂತೆ ಗಂಡ ಮಧ್ಯಾಹ್ನ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಏನು ಮಾಡುತ್ತಿರುತ್ತಾಳೆ? ಎಂಬುದನ್ನು ತೆರೆಯ ಮೇಲೆ ನೋಡಬೇಕು. ನಮ್ಮ ಸಿನಿಮಾವನ್ನು ಮದುವೆಯಾದ ದಂಪತಿಗಳು ಹಾಗೂ ಪ್ರೀತಿ ಮಾಡುತ್ತಿರುವವರು ನೋಡಿ. ಸಿನಿಮಾದಲ್ಲಿ ಸಮಾಜಕ್ಕೆ ಒಂದೊಳ್ಳೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ. ಇಡೀ ಸಿನಿಮಾದಲ್ಲಿ ಎರಡೇ ಪಾತ್ರಗಳು ಮಾತ್ರ ನಿಮಗೆ ತೆರೆಯ ಮೇಲೆ ಕಾಣುವುದು. ಉಳಿದ ಪಾತ್ರಗಳು ಧ್ವನಿಯ ಮೂಲಕ ಸಿನಿಮಾಕ್ಕೆ ಜೀವ ತುಂಬಿದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

“ಸತಿಪತಿಯರ ಸಂಬಂಧದ ಕುರಿತಾದ ಕಥಾಹಂದರ ಹೊಂದಿರುವ ಈ ಸಿನಿಮಾ ಎಲ್ಲ ವರ್ಗದ ಆಡಿಯನ್ಸ್ ಗೆ ಇಷ್ಟವಾಗುತ್ತದೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಈ ಸಿನಿಮಾವನ್ನು ತೆರೆಗೆ ತರುತ್ತೇವೆ. ಸಿನಿಮಾ ಬಿಡುಗಡೆಯ ಸಮಯದಲ್ಲಿ ಥಿಯೇಟರ್‌ನಲ್ಲಿ ಗಂಡ ಟಿಕೆಟ್‌ ತೆಗೆದುಕೊಂಡರೆ ಹೆಂಡತಿಗೆ ಟಿಕೆಟ್‌ ಉಚಿತ ಹಾಗೂ ಹೆಂಡತಿ ಟಿಕೆಟ್‌ ತೆಗೆದುಕೊಂಡರೆ ಗಂಡನಿಗೆ ಉಚಿತವಾಗಿ ಸಿನಿಮಾ ತೋರಿಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ನಿರ್ಮಾಪಕ ಸೆವೆನ್‌ ರಾಜ್‌ ತಿಳಿಸಿದರು. ‌

“ಅಥಿ ಐ ಲವ್‌ ಯು’ ಸಿನಿಮಾದ ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸಿದ್ದಾರೆ. ಟ್ರೇಲರ್‌ ಬಿಡುಗಡೆ ವೇಳೆ ಹಾಜರಿದ್ದ ಸಿನಿಮಾದ ಕಲಾವಿದರು “ಅಥಿ ಐ ಲವ್‌ ಯು’ ಸಿನಿಮಾದ ಬಗ್ಗೆ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next