Advertisement
ಪಕ್ಷ ಸಂಘಟನೆಗಾಗಿ ರಾಷ್ಟ್ರ ಪ್ರವಾಸ ಆರಂಭಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು 1980ರಲ್ಲಿ ವಿಜಯಪುರ ನಗರಕ್ಕೆ ಮಧ್ಯರಾತ್ರಿ 12 ಗಂಟೆಗೆ ಆಗಮಿಸಿದರೂ ಅವರ ಭಾಷಣ ಕೇಳಲು ಲಕ್ಷಾಂತರ ಜನರು ನೆರೆದಿದ್ದರು. ನಗರದ ದರ್ಬಾರ ಮೈದಾನದಲ್ಲಿ ಪ್ರಖರ ಭಾಷಣ ಮಾಡಿದ್ದ ವಾಜಪೇಯಿ ಅವರನ್ನು ಸಂಘಟಟನೆಯ ನೇತೃತ್ವ ವಹಿಸಿದ್ದ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಯುವ ಪಡೆ ಸ್ವಾಗತಿಸಿತ್ತು. ಪಕ್ಷದ ಸಂಘಟನೆ ಕಾರ್ಯಕ್ರಮದಲ್ಲಿ ಭಾಷಣದ ಬಳಿಕ ಜನಸಂಘದ ಜಿಲ್ಲಾಧ್ಯಕ್ಷರಾಗಿದ್ದ ಡಾ|ಮನೋಹರ ಧೋಂಡಿಬಾ ಮಹೇಂದ್ರಕರ ಅವರ ಮನೆಗೆ ಭೇಟಿ ನೀಡಿದ್ದರು.
Related Articles
ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸಿದ್ಧರಾಮೇಶ್ವರರಿಗೆ ಪೂಜೆ ಸಲ್ಲಿಸಿದ್ದರು. ನಮ್ಮ ಮನೆಗೂ ಭೇಟಿ ನೀಡಿ ಉಪಹಾರ ಸೇವಿಸಿದ್ದರು ಎಂದು ಬಸನಗೌಡ ಪಾಟೀಲ ಯತ್ನಾಳ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ. ಇದಾದ ಬಳಿಕ ನಾನು ವಿಜಯಪುರ ಕ್ಷೇತ್ರದಿಂದ ಎರಡು ಬಾರಿ ಸಂಸದನಾಗಿ ಮಾತ್ರವಲ್ಲ ವಾಜಪೇಯಿ ಅವರು ತಮ್ಮ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವನನ್ನಾಗಿ ಮಾಡಿ, ಜವಳಿ ಹಾಗೂ ರೈಲ್ವೆ ಖಾತೆ ಸಚಿವರನ್ನಾಗಿ ಮಾಡಿ ನನ್ನಂಥ ಯುವಕನನ್ನು ರಾಜಕೀಯವಾಗಿ ಬೆಳೆಸಿದ್ದರು. ಸರಳ ಸಜ್ಜನಿಕೆ ಅವರು ನಿಗರ್ವಕ್ಕೆ ಮತ್ತೂಂದು ಹೆಸರಾಗಿದ್ದರು, ಕಿರಿಯ ನಾಯಕರನ್ನು ಅತ್ಯಂತ ಸೌಜನ್ಯದಿಂದ ನೋಡಿಕೊಳ್ಳುತ್ತಿದ್ದರು.
Advertisement
ಸಂಪುಟದ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯಾ ನೀಡಿದ್ದರು. ಯಾವುದೇ ಸಚಿವರ ಖಾತೆಯಲ್ಲಿ ಎಂದಿಗೂ ಅವರು ಹಸ್ತಕ್ಷೇಪ ಮಾಡುತ್ತಿರಲಿಲ್ಲ ಗುಣಗಾನ ಮಾಡಿ ಕಂಬನಿ ಮಿಡಿದಿದ್ದಾರೆ ಯತ್ನಾಳ. ಇನ್ನೋರ್ವ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ಕೂಡ ಅಟಲ್‌ಜೀ ಅವರನ್ನು ತಾವು ಭೇಟಿ ಮಾಡಿದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದು, 1994 ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ವಿಜಯಪುರಕ್ಕೆ ಬಂದಿದ್ದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನೇ ಕೈ ಹಿಡಿದು ಕಾರಿನಿಂದ ಇಳಿಸಿಕೊಂಡು, ಬಸನಗೌಡ ಯತ್ನಾಳ ಅವರ ಹಳೆಯ ಮನೆಗೆ ಉಪಹಾರಕ್ಕೆ ಕರೆದೊಯ್ದಿದ್ದೆ. ಜನಾರ್ಧನ ಪತಂಗೆ ಹಾಗೂ ಷಣ್ಮುಖ ಮಡಿವಾಳ ಕೂಡ ನನ್ನೊಂದಿಗೆ ಇದ್ದರು ಎಂಬುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರನ್ನು ಅತ್ಯಂತ ಹತ್ತಿರದಿಂದ ನೋಡಿದ ಆ ಕ್ಷಣ ನನ್ನ ಜೀವಿತಾವಧಿಯ ಅದ್ಭುತ ಅವಿಸ್ಮರಣೀಯ ಘಳಿಗೆ ಎಂದು ಸ್ಮರಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಎರಡು ಖಾತೆ ನಿಭಾಯಿಸಿದ್ದೆ. ಎರಡು ಬಾರಿ ಸಂಸದನಾಗಿ ಅವರೊಂದಿಗೆಲೋಕಸಭೆಯಲ್ಲಿ ಆಸೀನನಾಗಿದ್ದೆ ಎಂಬುದೇ ನನ್ನ ಜೀವಿತಾವಧಿಯ ಅವಿಸ್ಮರಣೀಯ ಕ್ಷಣ. ಅವರನ್ನು ಕಳೆದುಕೊಂಡು ಭಾರತ ಮಾತ್ರವಲ್ಲ ವಿಶ್ವವೇ ಓರ್ವ ಸಜ್ಜನ ರಾಜಕೀಯ ನಾಯಕನನ್ನು ಕಳೆದುಕೊಂಡು ಬಡವಾಗಿದೆ.
ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಶಾಸಕರು (ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು)