Advertisement

ಅದಮ್ಯ ಚೇತನದಿಂದ ಅಟಲ್‌ ನಮನ

12:05 PM Dec 26, 2018 | Team Udayavani |

ಬೆಂಗಳೂರು: ಅಟಲ್‌ ಬಿಹಾರಿ ವಾಜಪೇಯಿ ಅವರಂತಹ ಧೀಮಂತ ನಾಯಕರಿಂದ ದೀರ್ಘಾವಧಿ ಆಡಳಿತ ಪಡೆಯುವ ಭಾಗ್ಯ ಭಾರತಕ್ಕೆ ಸಿಗಲಿಲ್ಲ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

Advertisement

ಅದಮ್ಯ ಚೇತನ ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಳ್ಳಲಾದ ಅಟಲ್‌ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಾರಂಭದ ದಿನಗಳಲ್ಲಿ ವಾಜಪೇಯಿ ಹೆಚ್ಚು ಪರಿಶ್ರಮ ಹಾಕಿ ಪಕ್ಷವನ್ನು ಸಂಘಟಿಸಿದರು. ಅವರ ಅಂದಿನ ಪರಿಶ್ರಮದಿಂದಲೇ ಬಿಜೆಪಿ ಇಂದು ರಾಷ್ಟ್ರದ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ವಾಜಪೇಯಿ ಅವರ ಕಾಲಾವಧಿಯಲ್ಲಿ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಆರ್ಥಿಕ ಸಂಕಷ್ಟ, ಪಾಕಿಸ್ತಾನದ ಭಯೋತ್ಪಾದಕತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಾಡಿದ ಸಾಲ, 22 ಪಕ್ಷಗಳಲ್ಲಿನ ಅಸಮಾಧಾನ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೇ  ಕಾಶ್ಮಿರದಿಂದ ಕನ್ಯಾಕುಮಾರಿ ಸಂಪರ್ಕಿಸುವ ರಸ್ತೆ ನಿರ್ಮಿಸಿದರು.

ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಿದರು. ಭಾರತದಿಂದ ಪಾಕಿಸ್ತಾನಕ್ಕೆ ಬಸ್‌ ಸಂಚಾರ ಸೇವೆ ಆರಂಭಿಸಿದರು.  ಪೋಕ್ರಾನ್‌ ಅಣ್ವಸ್ತ್ರ ಪರೀಕ್ಷೆ ಸೇರಿದಂತೆ ದೇಶಕ್ಕೆ ಅನುಕೂಲವಾಗುವ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿದರು ಎಂದು ಹೇಳಿದರು.

1998ರಲ್ಲಿ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ (ಎಡಿಎ)ಯ ಭಾರತದ ಮೊದಲ ಯುದ್ಧ ವಿಮಾನ ತಯಾರಿಕೆ ಯೋಜನೆಯಲ್ಲಿ ನಾನು ಕೂಡ ಕಾರ್ಯ ನಿರ್ವಹಿಸುತ್ತಿದೆ. 18 ವರ್ಷಗಳಿಂದ ನಡೆಯುತ್ತಿದ್ದ ಈ ಯೋಜನೆಗೆ ಎಲ್‌ಸಿಎ ಎಂದು ಕರೆಯಲಾಗುತ್ತಿತ್ತು. ದೇಶದ ಮೊದಲ ಯುದ್ಧ ವಿಮಾನಕ್ಕೆ ಏನೆಂದು ಹೆಸರಿಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು. 

Advertisement

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರಿಗೂ ಯುದ್ಧ ವಿಮಾನಕ್ಕೆ ಏನೆಂದು ಹೆಸರಿಡಬಹುದೆಂದು ತಿಳಿದಿರಲಿಲ್ಲ. ಮೊದಲ ಯುದ್ಧ ವಿಮಾನಕ್ಕೆ ಹೆಸರಿಡಲು ಸಲಹಾ ಸಮಿತಿ ನೇಮಿಸಬೇಕಿತ್ತು. ಆದರೆ ವಾಜಪೇಯಿ ಅವರು ಸಮಿತಿ ಮಾಡಿರಲಿಲ್ಲ. ಭಾರತದ ಮೊದಲ ಯುದ್ಧ ವಿಮಾನದ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದಾಗ ವಾಜಪೇಯಿ ಅವರು ಬೆಳಗ್ಗಿನ ಉಪಹಾರಕ್ಕೆ ನನ್ನನ್ನು ಆಹ್ವಾನಿಸಿದ್ದರು. 

ವಾಜಪೇಯಿ, ನಾನು ಮತ್ತು ಅನಂತಕುಮಾರ್‌ ಮೂವರೇ ಉಪಹಾರ ಸೇವಿಸುತ್ತಿದ್ದಾಗ ವಾಜಪೇಯಿ ಅವರು ಈ ಯುದ್ಧ ವಿಮಾನಕ್ಕೆ ಏನೆಂದು ಹೆಸರಿಡೋಣ ತೇಜಸ್ವಿನಿ? ಎಂದು ನನ್ನ ಕೇಳಿದ್ದರು. ನನಗೆ ಹೆದರಿಕೆಯಿಂದ ಮಾತೇ ಬರಲಿಲ್ಲ. ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ವಾಜಪೇಯಿ ಅವರು ಆ ಯುದ್ಧ ವಿಮಾನಕ್ಕೆ ತೇಜಸ್‌ ಎಂದು ಕರೆದರು. ನನ್ನ ಹೆಸರು ತೇಜಸ್ವಿನಿ, ಆ ಯುದ್ಧ ವಿಮಾನದ ಹೆಸರು ತೇಜಸ್‌. ಇದು ನನ್ನ ಬದುಕಿನಲ್ಲಿ ಇದು ಅವಿಸ್ಮರಣಿಯ ಘಟನೆ ಎಂದು ತೇಜಸ್ವಿನಿ ಅನಂತಕುಮಾರ್‌ ಸ್ಮರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next