Advertisement

ಅಟಕಾನಾ, ಬಟಕಾನಾ, ಲಟಕಾನಾ ಕೈ ಸಂಸ್ಕೃತಿ

09:42 AM Oct 30, 2017 | Team Udayavani |

ಬೀದರ: ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸದೇ ಕೈ ಬಿಡುವ ಕಾಂಗ್ರೆಸ್‌ ನದ್ದು “ಅಟಕಾನಾ, ಬಟಕಾನಾ, ಲಟಕಾನಾ’ (ಸಿಗಿಸಿ ಹಾಕುವುದು, ಅಲೆದಾಡಿಸುವುದು, ನೇತಾಡುವುದು) ಸಂಸ್ಕೃತಿ ಆಗಿದೆ. ಆದರೆ, ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಬಿಜೆಪಿ ಸರ್ಕಾರ ಇಂಥ ಸಂಸ್ಕೃತಿಗೆ ತಿಲಾಂಜಲಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸಕಾರ ಅರ್ಧಕ್ಕೆ ಕೈ ಬಿಟ್ಟಡ ಸಾವಿರಕ್ಕೂ ಹೆಚ್ಚು ರೈಲ್ವೆ, ನೀರಾವರಿ ಸೇರಿದಂತೆ ಹಲವು ಯೋಜನೆಗಳು ಇವೆ. ಇದುವೇ ಕಾಂಗ್ರೆಸ್‌ ಆಡಳಿತದ ಸಂಸ್ಕೃತಿ. ದೇಶದ ಹಿತಕ್ಕಾಗಿ ಈ ರೀತಿಯ ಕಾರ್ಯಶೈಲಿಯನ್ನು ಬಿಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು. 

ಸರ್ಕಾರದ ಶ್ರಮದ ಫಲವಾಗಿ ಇಂದು 9 ಲಕ್ಷ ಕೋಟಿ ರೂ. ಹಳೆ ಯೋಜನೆಗಳನ್ನು ಹಳಿಗೆ ತರಲಾಗಿದ್ದು, ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಒಂದು ಸಾವಿರ ರೂ. ಗಳಲ್ಲಿ ಆಬೇಕಾದ ಕೆಲಸಗಳು ಇಂದು 1 ಲಕ್ಷಕ್ಕೆ ಹೋಗಿದೆ. ಹಿಂದಿನ ಸರ್ಕಾರ ಇಂಥ ಕ್ರಿಮಿನಲ್‌ ನಿಷ್ಕಾಳಜಿತನ ತೋರಿದೆ. ಹಾಗಾಗಿಯೇ ಘೋಷಿತ ಯೋಜನೆಗಳು ಅಪೂರ್ಣಗೊಳ್ಳಲು ಕಾರಣವಾಗಿದೆ ಎಂದರು. 

ನಿಗದಿತ ಸಮಯದಲ್ಲಿ ನಿರ್ಧಾರಿತ ಗುರಿ ತಲುಪುವುದು ನಮ್ಮ ಉದ್ದೇಶ. ಜನಧನ ಖಾತೆ, ಶಾಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಶೌಚಾಲಯ ನಿರ್ಮಾಣವೇ ಇದಕ್ಕೆ ಸಾಕ್ಷಿ. ಅಷ್ಟೇ ಅಲ್ಲ 18 ಸಾವಿರ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಏಳೆಂಟು ವರ್ಷಗಳು ಬೇಕಾಬಹುದು ಎಂದು ಅಧಿಕಾರಿಗಳು ಅಂದಾಜಿಸಿದಾಗ, ಸಾವಿರ ದಿನಗಳಲ್ಲಿ ವಿದ್ಯುತ್‌ ಸಂಪರ್ಕ ನೀಡುವುದಾಗಿ ಘೋಷಿಸಿದ್ದೆ. ನಿಗದಿತ ದಿನಕ್ಕಿಂತ ಮೊದಲೇ ನಮ್ಮ ಲಕ್ಷವನ್ನು ಸಾಧಿಸಿದ ಹೆಮ್ಮೆ ಇದೆ ಎಂದು ಹೇಳಿದರು.

ರೈತರ ಹಿತಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೆ ತಂದು 90 ಅಪೂರ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ. ಇನ್ನೊಂದೆಡೆ ಹಿಂದೆ ವಿಮಾ ಯೋಜನೆಗಳು ರೈತರ ವಿಶ್ವಾಸವನ್ನೇ ಕಳೆದುಕೊಂಡಿದ್ದವು. ಕೃಷಿಕರಿಗೆ ವಿಶೇಷ ಪ್ಯಾಕೇಜ್‌ನ ಅವಶ್ಯಕತೆಯನ್ನು ಮನಗಂಡು ಜಾರಿಗೆ ತಂದ ಹೊಸ ಫಸಲು ಬಿಮಾ ಯೋಜನೆ ಇಂದು ರೈತರನ್ನು
ಉಳಿಸಿದೆ. ಕೊನೆ ಹಂತದ ಬಡ ವ್ಯಕ್ತಿಗೆ ಯೋಜನೆಗಳ ಲಾಭ ಸಿಗುವಂತಾಗಬೇಕು. ಆ ಕಾರ್ಯಕ್ಕೆ ಸರ್ಕಾರ ಬಲ ಕೊಡುತ್ತಿದೆ
ಎಂದರು.

Advertisement

ರೈಲು ಕಾಮಗಾರಿಗಳಿಗೂ ಸರ್ಕಾರ ವೇಗ ನೀಡಿದೆ. ಹಿಂದಿನ ಸರ್ಕಾರದ ಮೂರು ವರ್ಷದ ಅವಧಿಯಲ್ಲಿ 1,100 ಕಿ.ಮೀ.
ಹೊಸ ರೈಲು ಮಾರ್ಗ ಆಗಿರುತ್ತಿದ್ದರೆ, ಬಿಜೆಪಿ ಸರ್ಕಾರದ ಮೂರು ವರ್ಷಗಳ ಆಡಳಿತದಲ್ಲಿ 2,100 ಕಿ.ಮೀ. ಹಾಕಿದ್ದಾರೆ. ಇನ್ನೂ 1,300 ಕಿ.ಮೀ. ದ್ವಿಪಥ ರೈಲು ಮಾರ್ಗ ಆಗುತ್ತಿದ್ದರೆ, ಇಂದು 2,600 ಕಿ.ಮೀ. ಮಾಡಿ ತೋರಿಸಿದ್ದೇವೆ. ಆಧುನೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದರ ಪರಿಣಾಮ 4,300 ಕಿ.ಮೀ. ವಿದ್ಯುತ್‌ ಇಂಜಿನ್‌ ಸಂಚಾಲಿತ ಮಾರ್ಗ ಮುಗಿಸಲಾಗಿದೆ ಎಂದ ಪ್ರಧಾನಿ ಮೋದಿ, ಯೋಜನಾ ಅನುದಾನವನ್ನು ಸರಿದ ರೀತಿಯಲ್ಲಿ ವೆಚ್ಚ ಮಾಡಿದರೆ ಮಾತ್ರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು
ಎಂದು ಹೇಳಿದರು.

ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಪಿಯೂಷ ಗೋಯೇಲ್‌, ಅನಂತಕುಮಾರ, ರಮೇಶ ಜಿಗಜಿಣಗಿ, ಸದಾನಂದ ಗೌಡ, ಅನಂತಕುಮಾರ ಹೆಗಡೆ, ವಿಫಕ್ಷ ನಾಯಕರಾದ ಜಗದೀಶ ಶೆಟ್ಟರ, ಈಶ್ವರಪ್ಪ, ಸಂಸದ ಭಗವಂತ ಖೂಬಾ, ಶಾಸಕರಾದ ಪ್ರಭು ಚವ್ಹಾಣ, ರಘುನಾಥ ಮಲ್ಕಾಪುರೆ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮತ್ತಿತರರು ಪಾಲ್ಗೊಂಡಿದ್ದರು.

ವಿಮೋಚನಾ ಹೋರಾಟ, ಗೋರ್ಟಾ ಸ್ಮರಣೆ
ಬೀದರ: ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೈದ್ರಾಬಾದ ಕರ್ನಾಟಕ ವಿಮೋಚನೆಗಾಗಿ ನಡೆದ ಹೋರಾಟ ಮತ್ತು ಗೋರ್ಟಾದ ಹತ್ಯಾಕಾಂಡದ ಬಗ್ಗೆ ಸ್ಮರಿಸಿದ್ದು ವಿಶೇಷವಾಗಿತ್ತು. ಇಡೀ ಭಾರತ ಬ್ರಿಟಿಷ ಕಪಿಮುಷ್ಟಿಯಿಂದ ಬಿಡುಗಡೆ ಸಂಭ್ರಮ ಆಚರಣೆಯಲ್ಲಿದ್ದರೆ ಆ ಭಾಗ್ಯ ಬೀದರ ಸೇರಿ ಹೈ.ಕ. ಭಾಗದವರಿಗೆ ಇರಲಿಲ್ಲ. ನಿಜಾಮನ ಸಂತತಿ ಇದಕ್ಕೆ ಅಡ್ಡಿಯಾಗಿತ್ತು. ಗೃಹ ಸಚಿವರಾಗಿದ್ದ ಸರ್ದಾರ ವಲ್ಲಭಬಾಯಿ ಪಟೇಲ್‌ ಅವರ ದಿಟ್ಟತನದ ಆಡಳಿತದಿಂದ ಈ ಭಾಗವೂ ಸ್ವಾತಂತ್ರದ ಉಸಿರು ಅನುಭವಿಸುವಂತಾಯಿತು.

ವಿಮೋಚನೆಗಾಗಿ ಗೋರ್ಟಾದ ಅನೇಕರು ತಮ್ಮ ಜೀವನ ಬಲಿದಾನ ಮಾಡಿದ್ದಾರೆ. ಅವರ ಸ್ಮರಣೆಗಾಗಿ ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತರು ಹುತಾತ್ಮ ಸ್ಮಾರಕ ನಿರ್ಮಾಣ ಮಾಡುವುದು ಸ್ಮರಣೀಯ ಕಾರ್ಯ. ಇತಿಹಾಸವನ್ನು ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next