Advertisement

ಸಾಗರ ಸುರಕ್ಷೆಗೆ ಒತ್ತು: ಪ್ರಧಾನಿ ನರೇಂದ್ರ ಮೋದಿ

11:43 PM Aug 09, 2021 | Team Udayavani |

ಹೊಸದಿಲ್ಲಿ: “ಸಾಗರ ಮಾರ್ಗಗಳ ಮೂಲಕ ಯಾವುದೇ ದೇಶಕ್ಕೆ ಮಾರಕವಾಗುವಂಥ ಸನ್ನಿವೇಶಗಳನ್ನು  ಮುಲಾಜಿಲ್ಲದೆ ಹತ್ತಿಕ್ಕಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವ ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

Advertisement

ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದ್ದಾರೆ. “ಸಮುದ್ರ ಮಾರ್ಗಗಳ ಸುರಕ್ಷತೆಯ ಬಲವರ್ಧನೆಗೆ ಬೇಕಿರುವ ಅಂತಾರಾಷ್ಟ್ರೀಯ ಸಹಕಾರ’ ಎಂಬ ವಿಚಾರದಡಿ ನಡೆದ ವಿಡಿಯೋ ಸಂವಾದದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, “ಸಮಾಜ ಘಾತುಕ ಶಕ್ತಿಗಳಿಂದ ಸಮುದ್ರ ಮಾರ್ಗಗಳ ದುರುಪಯೋಗವನ್ನು ತಪ್ಪಿಸಿಕೊಳ್ಳಬೇಕು. ಸಮುದ್ರಕ್ಕೆ ಹೊಂದಿಕೊಂಡಂತಿರುವ ಎಲ್ಲ ರಾಷ್ಟ್ರಗಳಿಗೆ ಏಕಸ್ವರೂಪದ ಸುರಕ್ಷ ಕವಚ ನಿರ್ಮಾಣವಾಗಬೇಕು. ಜತೆಗೆ ಸಮುದ್ರದ ಮೂಲಕ ನೈಸರ್ಗಿಕವಾಗಿ ಬಂದೊದಗುವ ಕಂಟಕಗಳನ್ನು ಪರಿಹರಿಸಲು ಸಂಬಂಧಿಸಿದ ಎಲ್ಲ ದೇಶಗಳು ಪರಸ್ಪರ ಸಹಾಯ- ಸಹಕಾರ ನೀಡಬೇಕು’ ಎಂದು ವಿಶ್ವ ಸಮುದಾಯಕ್ಕೆ ಮನವಿ ಮಾಡಿದರು.

ಯುಎನ್‌ಎಸ್‌ಸಿಯಲ್ಲಿ ಸಮುದ್ರ ಮಾರ್ಗಗಳ ಸುರಕ್ಷತೆಯ ಬಗ್ಗೆ ಸದಸ್ಯ ರಾಷ್ಟ್ರಗಳ ನಡುವೆ ಸಂವಾದ ನಡೆದಿದ್ದು ಇದೇ ಮೊದಲು. ಭಾಷಣದಲ್ಲಿ, ಸಾಗರ ಮಾರ್ಗಗಳ ಸುರಕ್ಷತೆಯ ಬಗ್ಗೆ ಮಾತನಾಡಿದ ಮೋದಿ, “ಸಮುದ್ರ ಮಾರ್ಗಗಳ ಮೂಲಕ ಸರಬರಾಜಾಗುವ ನಕಲಿ ಮಾಲುಗಳ ನಿಗ್ರಹ, ಕಡಲ್ಗಳ್ಳರ ಹಾವಳಿ ನಿಗ್ರಹಗಳ ಅವಶ್ಯಕತೆಯನ್ನು ಒತ್ತಿ ಹೇಳಿದರು. ಇಂಥ ಸಮಸ್ಯೆಗಳ ನಿರ್ವಹಣೆಗೆ ಸೂಕ್ತ ಮೂಲಸೌಕರ್ಯ ಸೃಷ್ಟಿಸುವುದು ಇಂದಿನ ತುರ್ತು ಅವಶ್ಯಕತೆಗಳಲ್ಲೊಂದಾಗಿದೆ. ಸಮುದ್ರಗಳಿಗೆ ಹೊಂದಿಕೊಂಡಂತಿರುವ ದೇಶಗಳ ಸುಸ್ಥಿರತೆ, ಸಾಗರೋತ್ತರ ವ್ಯವಹಾರಗಳನ್ನು ನಿಭಾಯಿಸುವ ಶಕ್ತಿಯನ್ನು ಪರಿಗಣಿಸಿ ಈ ಸೌಕರ್ಯಗಳನ್ನು ಸೃಷ್ಟಿಸಬೇಕು’ ಎಂದರು.

ಅಂತಾರಾಷ್ಟ್ರೀಯ ನ್ಯಾಯಾಧಿಕರಣಕ್ಕೆ ಆಗ್ರಹ: ಸಮುದ್ರ ಮಾರ್ಗಗಳ ವ್ಯವಹಾರಗಳಿಗೆ ಸಂಬಂಧಿಸಿ ವಿವಿಧ ರಾಷ್ಟ್ರಗಳ ನಡುವೆ ಏರ್ಪಡುವ ವಿವಾದ ಬಗೆಹರಿಸುವ ಸಲುವಾಗಿ ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಸ್ಥಾಪನೆಗೆ ಮೋದಿ ಆಗ್ರಹಿಸಿದರು. ಸಾಗರ ವ್ಯವಹಾರಗಳ ವ್ಯಾಜ್ಯಗಳ ಇತ್ಯರ್ಥಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕಾನೂನುಗಳು ರೂಪುಗೊಳ್ಳಬೇಕು ಎಂದೂ ಆಶಿಸಿದರು.

ಕಾನೂನು ತೊಡಕು ನಿವಾರಣೆಗೆ ಆಗ್ರಹ: “ಸಾಗರ ಮುಖೇನ ವ್ಯವಹಾರಗಳಿಂದ ಜಗತ್ತಿನ ಆರ್ಥಿಕತೆ ಮತ್ತಷ್ಟು ಮಜಬೂತಾಗಿ ಬೆಳೆಯುವ ಸಾಧ್ಯತೆಗಳು ದಟ್ಟವಾಗಿವೆ.  ಈ ಮಾದರಿಯ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬೇಕಿದೆ. ಜೊತೆಗೆ ಸಮುದ್ರಾಧಾರಿತ ವ್ಯವಹಾರಗಳಿಗೆ ಇರುವ ಕಾನೂನಾನ್ಮಕ ನಿಬಂಧನೆಗಳನ್ನು ಆದಷ್ಟೂ ತೆಗೆದುಹಾಕಬೇಕು. ಸೀಮಿತ ನಿಬಂಧನೆಗಳಿದ್ದರೆ ಮಾತ್ರ ಆರ್ಥಿಕಾಭಿವೃದ್ಧಿ ಸಾಧ್ಯ’ ಎಂದು ಮೋದಿ ವಿವರಿಸಿದರು.

Advertisement

“ಸಾಗರ್‌’ ಅನುಷ್ಠಾನಕ್ಕೆ ಸಲಹೆ  :

ಸಮುದ್ರ ಮಾರ್ಗಗಳ ಮೂಲಕ ಅಭಿವೃದ್ಧಿಗೆ ಪೂರಕವಾಗುವಂಥ ಹೊಸ ಪರಿಕಲ್ಪನೆಯಾದ “ಸಾಗರ್‌’ (ಸೆಕ್ಯೂರಿಟಿ ಆ್ಯಂಡ್‌ ಗ್ರೋತ್‌ ಫಾರ್‌ ಆಲ್‌ ಇನ್‌ ದ ರೀಜನ್‌) ಎಂಬ ಹೊಸ ಪರಿಕಲ್ಪನೆಯನ್ನು ಪ್ರಧಾನಿ ಮೋದಿ, ಭದ್ರತಾ ಮಂಡಳಿಯ ಮುಂದಿಟ್ಟರು. “ಸಾಗರ್‌ ಎಂಬುದು ಸುರಕ್ಷಿತ, ಸುಸ್ಥಿರ ಸಾಗರ ಮಾರ್ಗಗಳ ಬಹುಪಯೋಗಿ ಕುರಿತ ಚರ್ಚಾ ವೇದಿಕೆಯಾಗಿದ್ದು, ಇದರಲ್ಲಿ ಸಂಬಂಧಿಸಿದ ಎಲ್ಲ ರಾಷ್ಟ್ರಗಳೂ ಒಗ್ಗೂಡುವುದರಿಂದ ಪರಸ್ಪರ ಸಹಕಾರ, ವಿಶ್ವಾಸದಿಂದ ಮುನ್ನಡೆಯಬೇಕು ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಬಹುದು’ ಎಂದು ಸಲಹೆ ನೀಡಿದರು.

ಮೋದಿ “ಪಂಚ ಸೂತ್ರ’ :

1.ಸಮುದ್ರ ಮಾರ್ಗಗಳ ಮೂಲಕ, ಹಲವಾರು ದೇಶಗಳ ನಡುವೆ ನಡೆಯುವ ವ್ಯವಹಾರಗಳಿಗೆ ಕಾನೂನಾತ್ಮಕ ಅಡೆ-ತಡೆಗಳು ಹೆಚ್ಚಿದ್ದಷ್ಟೂ ಜಾಗತಿಕ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಅತಿಯಾದ ಕಾನೂನು ನಿರ್ಬಂಧಗಳನ್ನು ತೆಗೆದುಹಾಕಬೇಕು.

  1. ಸಮುದ್ರಾಧಾರಿತ ವ್ಯವಹಾರಗಳ ವಿವಾ ದಗಳನ್ನು ಪರಿಹರಿಸಲು ಅಂತಾ ರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸಬೇಕು. ಅವುಗಳಡಿ ಯಲ್ಲೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು.
  2. ಚಂಡಮಾರುತ ಹಾಗೂ ಇನ್ನಿತರ ಸಮುದ್ರ ಮೂಲ ಕಂಟಕಗಳ ನಿರ್ವಹಣೆಗೆ ಪ್ರಾಂತೀಯ ಮಟ್ಟದ ಸಹಕಾರ ಅತ್ಯಗತ್ಯ. ಇದಕ್ಕೆ ಎಲ್ಲ ದೇಶಗಳೂ ಒಪ್ಪಿಗೆ ನೀಡಬೇಕು.
  3. ಸಮುದ್ರದ ಪರಿಸರ ಹಾಗೂ ಸಮುದ್ರ ಸಂಪನ್ಮೂಲಗಳನ್ನು ಕಾಪಾಡುವುದಕ್ಕೆ ಎಲ್ಲರೂ ಬದ್ಧರಾಗಿರಬೇಕು.
  4. ಜವಾಬ್ದಾರಿಯುತ ಸಾಗರೋತ್ತರ ಸಂವಹನಕ್ಕೆ ಎಲ್ಲ ದೇಶಗಳೂ ಕೈ ಜೋಡಿಸಬೇಕು.
Advertisement

Udayavani is now on Telegram. Click here to join our channel and stay updated with the latest news.

Next