ನವದೆಹಲಿ: ಕೊರೊನಾ ಲಸಿಕೆಗಳ ವಿಚಾರದಲ್ಲಾದಂತೆ ಆಹಾರ ಧಾನ್ಯಗಳ ವಿಚಾರದಲ್ಲಿಯೂ ಬಲಾಡ್ಯ ದೇಶಗಳ ದುರಾಸೆಯಿಂದ ಬಡ ದೇಶಗಳು ನಲುಗುವಂತಾಗಬಾರದು ಎಂದು ಹೇಳುವ ಮೂಲಕ ಭಾರತ, ತಾನು ಇತ್ತೀಚೆಗೆ ಕೈಗೊಂಡಿದ್ದ ಗೋಧಿ ರಫ್ತು ನಿಷೇಧದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಈ ಸಮರ್ಥನೆ ಮೂಡಿಬಂದಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ. ಅಮೆರಿಕದ ಗೃಹ ಸಚಿವ ಅಂತೋನಿ ಬ್ಲಿಂಕನ್ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್, “”ಜಗತ್ತಿನ ಹಲವಾರು ಬಡ ರಾಷ್ಟ್ರಗಳು ಇಂದು ಬೆಲೆ ಹೆಚ್ಚಳ ಹಾಗೂ ಧಾನ್ಯಗಳ ಕೊರತೆಯಂಥ ಸಮಸ್ಯೆಯನ್ನು ಎದುರಿಸುತ್ತಿವೆ. ಧನಿಕ ರಾಷ್ಟ್ರಗಳು ತಮ್ಮಲ್ಲಿರುವ ಧಾನ್ಯಗಳನ್ನು ಹೇರಳವಾಗಿ ಸಂಗ್ರಹ ಮಾಡಿಕೊಳ್ಳುತ್ತಿದ್ದರೆ, ಬಡ ರಾಷ್ಟ್ರಗಳು ತುತ್ತು ಅನ್ನಕ್ಕಾಗಿ ದೈನ್ಯತೆಯಿಂದ ಕೈ ಚಾಚುತ್ತಿವೆ. ಇದನ್ನು ಗಮನಿಸಿರುವ ಇಡೀ ಜಗತ್ತಿಗೆ ಗೋಧಿಯನ್ನು ಹಂಚುವ ಬದಲು ಯಾರಿಗೆ ಅವಶ್ಯಕತೆಯಿದೆಯೋ ಅವರಿಗೆ ಗೋಧಿ ಸರಬರಾಜು ಮಾಡಲು ತೀರ್ಮಾನಿಸಿದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಭಾರತದ ಗೋಧಿ ರಫ್ತನ್ನು ನಿಷೇಧವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಇತ್ತೀಚೆಗೆ ನಡೆದಿದ್ದ “ಜಿ-7′ ಶೃಂಗಸಭೆಯಲ್ಲಿ ಟೀಕಿಸಿದ್ದವು. ಈ ಟೀಕೆಗಳಿಗೆ ಭಾರತ ಈಗ ಉತ್ತರ ನೀಡಿದೆ.