Advertisement

ಡೈಲಿ ಡೋಸ್‌: ಇದು ಚುನಾವಣೆ ಸಮಯ…ಕಾಲರ್‌ ಹಿಡಿದರೂ ಖುಷಿಯಲ್ಲಿ…

09:05 PM Mar 17, 2023 | Team Udayavani |

ಚುನಾವಣೆ ಹತ್ತಿರ ಬಂತೆ‌ಂದರೆ, ಮೊದಲಿಗೆ ಹಾಲಿ ಶಾಸಕರ ಹಾಗೂ ಆ ಪಕ್ಷದ ಬೆಂಬಲಿಗರು ದುರ್ಬೀನು ಹಿಡಿದುಕೊಂಡು “ಎಲ್ಲಿ ಸಮಸ್ಯೆ ಇದೆ? ಯಾವೂರಿಗೆ ನೀರು ಬರುವುದಿಲ್ಲ? ಎಲ್ಲಿ ರಸ್ತೆ ಸರಿ ಇಲ್ಲ” ಎಂದು ಮೂಲೆ ಮೂಲೆಯನ್ನೂ ಬಿಡದೆ ಹುಡುಕುತ್ತಾರೆ. ಆಯಾ ಏರಿಯಾದ (ವಾರ್ಡಿನ) ಪಾರ್ಟಿ ಮುಖ್ಯಸ್ಥನನ್ನೂ ಜತೆಗೇ ಕರೆದುಕೊಂಡು “ಎಲ್ಲಪ್ಪ ಸಮಸ್ಯೆ ಇದೆ, ಇದ್ದರೆ ಹೇಳಿಬಿಡು, ನಾಳೆ ಸಾಹೇಬ್ರು ಬರುವಾಗ ಹೆಚ್ಚು ಕಡಿಮೆ ಆದರೆ ನಿನ್ನನ್ನೇ ಫಿಟ್‌ ಮಾಡೋದು” ಎಂದು ಹೆದರಿಸುತ್ತಾರೆ.

Advertisement

ಇಲ್ಲಿಗೆ ಮುಗಿಯದು. “ಏನ್‌ ತಾಯಿ, ಏರಿಯಾದಲ್ಲಿ ಏನೂ ಸಮಸ್ಯೆ ಇಲ್ವಲ್ಲ?” ಎಂದು ಕೆಲವರ ಮನೆ ಬಾಗಿಲು ಬಡಿದು ಬಡಿದು ಕೇಳುತ್ತಾರೆ. ಅವರು ಇಲ್ಲಪ್ಪ ಎಂದರೆ, “ಕುಡಿಯುವ ನೀರು ಬರ್ತಾ ಇದೆಯಾ? ಚರಂಡಿ ಪ್ರಾಬ್ಲಿಮ್‌ ಇದೆಯಾ? ಬೀದಿ ಲೈಟು ಓಕೆನಾ” ಎಂದು ರೊಬೋಟ್‌ನಂತೆ ಕೇಳುತ್ತಾರೆ. ಎಲ್ಲ ಮುಗಿದೂ ಸಾಹೇಬ್ರಿಗೆ “ಹವಾಮಾನ ವರದಿ” ಸಲ್ಲಿಕೆಯಾಗುತ್ತದೆ.

ಸೈಕ್ಲೋನ್‌, ಗುಡುಗು, ಸಿಡಿಲು ಸಾಧ್ಯತೆ ಇಲ್ಲ ಎಂದಾದರೆ, ಸಾಹೇಬ್ರು ರಸ್ತೆಗಿಳಿಯುತ್ತಾರೆ. “ನಿಮ್ಮ ಆಶೀರ್ವಾದ ಬೇಕೇಬೇಕು” ಎಂದು ಕೈ ಮುಗಿಯುತ್ತಾ, ಮಧ್ಯೆ ಮಧ್ಯೆ “ಸಹವಾಸ ಬೇಡಪ್ಪಾ” ಎಂದು ನಿಂತವರನ್ನೂ ಹೆಸರಿಡಿದು “ರಾಜು ಅವ್ರೇ ಚೆನ್ನಾಗಿದ್ದೀರಾ?” ಎಂದು ಕಾಲರ್‌ ಹಿಡಿದು ಕುಶಲ ವಿಚಾರಿಸುವಂತೆ ಮಾತನಾಡಿಸಿಕೊಂಡು ಸಾಗುತ್ತಾರೆ.

“ಅಲ್ಲಯ್ಯ, ಐದು ವರ್ಷದಲ್ಲಿ ಪ್ರಾಬ್ಲಿಮ್‌ ಹಿಡಿದು 50 ಬಾರಿ ಹೋದಾಗಲೂ ಹೆಸರೇ ನೆನಪಾಗಿರಲಿಲ್ಲ” ಎಂದು ರಾಜು ಅಂಥವರು ಪೇಚಿಗೆ ಸಿಲುಕುತ್ತಾರೆ.
ಕರ್ಣನಿಗೆ ಸಂಕಷ್ಟ ಕಾಲದಲ್ಲಿ ಕಲಿತದ್ದು ಮರೆತು ಹೋಗಲಿ ಎನ್ನೋ ಶಾಪ ಇದ್ದರೆ, ನಮ್ಮ ಸಾಹೇಬ್ರಿಗೆ ಕಷ್ಟ ಕಾಲದಲ್ಲಿ ಮರೆ ತದ್ದೂ ನೆನಪಾಗಲಿ ಎನ್ನುವ ವರ ಇದೆ”ಎನ್ನುತ್ತಾ ಬೆಂಬಲಿಗ ಮುಗುಳ್ನಕ್ಕು ಮೆರವಣಿಗೆಯನ್ನು ಹಿಂಬಾಲಿಸುತ್ತಾನೆ !

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next