Advertisement

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯ ಮೊದಲ ಸಭೆಯಲ್ಲೇ ಮುಖಭಂಗ

07:31 AM Mar 09, 2019 | Team Udayavani |

ಮೈಸೂರು: ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಜೆಡಿಎಸ್‌ ಜೊತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದರೂ ತಳಮಟ್ಟದಲ್ಲಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಒಂದಾಗಿಲ್ಲ ಎಂಬುದು ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಅಕ್ಷರಶಃ ಜಗಜ್ಜಾಹೀರಾಯಿತು.

Advertisement

ಫೆ.23ರಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಜೊತೆಗಿದ್ದ ಬಿಜೆಪಿಯನ್ನು ಹೊರಗಿಟ್ಟು ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಜೆಡಿಎಸ್‌, ಮೊದಲ ಸಭೆಯಲ್ಲೇ ಅದರಲ್ಲೂ ಆಯವ್ಯಯ ಮಂಡನೆಗಾಗಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲೇ ಕೋರಂ ಇಲ್ಲದೆ ಮುಖಭಂಗ ಅನುಭವಿಸಬೇಕಾಯಿತು.

ಬೆಳಗ್ಗೆ 11ಗಂಟೆಗೆ ಬಜೆಟ್‌ ಸಭೆ ಕರೆಯಲಾಗಿತ್ತಾದರೂ 11.20 ಆದರೂ ಸಭೆ ಆರಂಭವಾಗುವ ಲಕ್ಷಣಗಳಿರಲಿಲ್ಲ. ಆ ಮಧ್ಯೆ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಅವರು ಬಜೆಟ್‌ ಪ್ರತಿ ಇದ್ದ ಸೂಟ್‌ಕೇಸ್‌ ಹಿಡಿದು ಸಭಾಂಗಣಕ್ಕೆ ಬಂದರಾದರೂ ಸಭೆ ನಡೆಸಲು ಕೋರಂ ಇಲ್ಲದ್ದರಿಂದ ಹತ್ತು ನಿಮಿಷ ಕಾದರೂ ನಿಗದಿತ ಸಂಖ್ಯೆ ಸೇರಲಿಲ್ಲ.

ಇದರಿಂದಾಗಿ ಸಭೆಯನ್ನೇ ಅರ್ಧಗಂಟೆ ಮುಂದೂಡಿ ಸದಸ್ಯರ ಮೊಬೈಲ್‌ಗ‌ಳಿಗೆ ಕರೆ ಮಾಡಿ ಕರೆಸುವ ಪ್ರಯತ್ನ ಮಾಡಲಾಯಿತು. ಅಷ್ಟೆಲ್ಲ ಹರ ಸಾಹಸಗಳ ನಂತರವೂ ಬಂದವರು 32 ಸದಸ್ಯರು ಮಾತ್ರ. ಕೋರಂಗೆ 38 ಸದಸ್ಯರ ಅಗತ್ಯವಿತ್ತು. ಹೀಗಾಗಿ ಅಧ್ಯಕ್ಷರು ಮಾ.11ಕ್ಕೆ ಸಭೆಯನ್ನು ಮುಂದೂಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಯ ವೆಂಕಟಸ್ವಾಮಿ, ಯಾವುದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಸಭೆ ಮುಂದೂಡಿದರೆ, ನೀತಿ ಸಂಹಿತೆ ಜಾರಿಯಾದರೆ ಬಜೆಟ್‌ ಮಂಡಿಸಲಾಗಲ್ಲ. ನಿಮ್ಮ ಸದಸ್ಯರನ್ನು ಹೇಗಾದರೂ ಕರೆಸಿ ಸಭೆ ಮಾಡಿ, ಬಜೆಟ್‌ ಮಂಡಿಸಿ ಎಂದು ಸಲಹೆ ನೀಡಿದರು.

Advertisement

ಆದರೆ, ಇದಕ್ಕೆ ಒಪ್ಪದ ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ, ನಮ್ಮ ಪಕ್ಷದ ಅನೇಕ ಸದಸ್ಯರು ಇಂದು ಬೆಂಗಳೂರಿಗೆ ಹೋಗಿದ್ದಾರೆ. ಹೀಗಾಗಿ ಸಭೆಗೆ ಬರಲಾಗಲ್ಲ. ಅಧ್ಯಕ್ಷರು ಮಾ.11ಕ್ಕೆ ಸಭೆ ಮುಂದೂಡಿ ಆದೇಶ ಮಾಡಿರುವುದರಿಂದ ಅದನ್ನು ಪ್ರಶ್ನಿಸುವಂತಿಲ್ಲ ಎಂದರು.

ಇದಕ್ಕೊಪ್ಪದ ವೆಂಕಟಸ್ವಾಮಿ, ಹೇಗಾದರೂ ಸದಸ್ಯರನ್ನು ಒಟ್ಟುಗೂಡಿಸಿ ಬಜೆಟ್‌ ಮಂಡಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು. ಇದರಿಂದಾಗಿ ಮಧ್ಯಾಹ್ನ 2ಗಂಟೆಗೆ ಸಭೆ ಮುಂದೂಡಿದರು. ಮತ್ತೆ ಮಧ್ಯಾಹ್ನ 2.25ಕ್ಕೆ ಸಭೆ ಸೇರಿದಾಗಲೂ 30ಕ್ಕಿಂತ ಹೆಚ್ಚಿನ ಸದಸ್ಯರೇನು ಸಭೆಯಲ್ಲಿ ಇರಲಿಲ್ಲ. ಆದರೆ, ಬೆಳಗ್ಗೆ ಬಂದಿದ್ದ ಅನೇಕ ಸದಸ್ಯರು ಹಾಜರಿ ಹಾಕಿ ಹೋಗಿದ್ದರಿಂದ ಅವರನ್ನೂ ಹಾಜರಿ ಎಂದು ಪರಿಗಣಿಸಿ ಕೋರಂ ಸರಿಪಡಿಸಿ ಬಜೆಟ್‌ ಮಂಡಿಸಲಾಯಿತು.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಜಿಪಂ ಅಧಿಕಾರ ಹಿಡಿದ 12 ದಿನಗಳ ನಂತರ ನಡೆದ ಮೊದಲ ಸಭೆ, ಅದರಲ್ಲೂ ಬಜೆಟ್‌ ಮಂಡನೆ ಸಭೆಗೇ ಕೋರಂ ಕೊರತೆ ಎದುರಾಗಿದ್ದು ಮುಖಭಂಗಕ್ಕೆ ಕಾರಣವಾಯಿತು. ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್‌- ಜೆಡಿಎಸ್‌ ಸದಸ್ಯರಲ್ಲಿ ಮೈತ್ರಿಯ ಖುಷಿ ಕಾಣದೆ ಬಿಗುವಿನಲ್ಲೇ ಕುಳಿತಿದ್ದರು.

ಮಹಿಳಾ ದಿನ ಆಚರಣೆ ಸಂಭ್ರಮ: ಬಜೆಟ್‌ ಮಂಡನೆಗಾಗಿ ಕರೆಯಲಾಗಿದ್ದ ಸಭೆಗೆ ಕೋರಂ ಎದುರಾದ ಹಿನ್ನೆಲೆಯಲ್ಲಿ ಜಿಪಂನ ಮಹಿಳಾ ಸದಸ್ಯರೆಲ್ಲಾ ಸೇರಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಬಂಧ ಕೇಕ್‌ ಕತ್ತರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next