Advertisement

ಕಾಲ ಕೆಳಗೆ, ತಲೆ ಮೇಲೆ…ಕಂಡಲ್ಲೆಲ್ಲಾ ಕಾಡುವ ಓಎಫ್ಸಿ!

12:23 PM Sep 17, 2018 | |

ಕೆಲವೆಡೆ ಹೆಬ್ಟಾವಿನಂತೆ ಮರಗಳ ಸುತ್ತಿಕೊಂಡು, ಹಲವು ರಸ್ತೆಗಳಲ್ಲಿ ರಂಗೋಲಿಯಂತೆ ಹರಡಿಕೊಂಡು, ಇನ್ನೂ ಕೆಲವು ಕಡೆ ಸಾಕ್ಷಾತ್‌ ಬೇತಾಳನ ರೀತಿ ಮರ, ಕಂಬಳಲ್ಲಿ ನೇತಾಡುವ ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳ (ಓಎಫ್ಸಿ) ಪರಿಚಯ ರಾಜಧಾನಿ ನಾಗರಿಕರಿಗೆ ಹೊಸತೇನಲ್ಲ. ನಗರದ ಜನತೆಗೆ ಹೋದಲ್ಲೆಲ್ಲಾ ಕಾಣುವ ಈ ಕೇಬಲ್‌ಗ‌ಳೆಲ್ಲಾ ಅಕ್ರಮವಾಗಿ ಹಾಕಿದವುಗಳೇ. ಆದರೆ ಈ ಅಕ್ರಮವನ್ನು ಕೇಳುವವರಿಲ್ಲ. ಕೆಲ ಏಜೆನ್ಸಿಗಳು 100 ಮೀ.ಗೆ ಅನುಮತಿ ಪಡೆದು 500 ಮೀ. ಕೇಬಲ್‌ ಅಳವಡಿಸಿದರೆ, ಇನ್ನೂ ಕೆಲವು ಯುಜಿಡಿ ಪೈಪ್‌ಲೈನಲ್ಲೇ ಕೇಬಲ್‌ ನುಸುಳಿಸುತ್ತಿವೆ. ಇದನ್ನು ತಡೆಯಬೇಕಿರುವ ಪಾಲಿಕೆ ಅಧಿಕಾರಿಗಳು ಮಾಫಿಯಾಗೆ ಹೆದರಿ ನಡುಗುತ್ತಿದ್ದಾರೆ!

Advertisement

ಬೇತಾಳನಂತೆ ಮರ, ಕಂಬ ಎಲ್ಲೆಂದರಲ್ಲಿ ನೇತಾಡುವ ಸಾವಿನ ಕುಣಿಕೆಗಳಿವು. ಹೆಬ್ಟಾವಿನಂತೆ ಮರಗಳನ್ನು ಸುತ್ತಿಕೊಂಡಿರುತ್ತವೆ. ರಂಗೋಲಿಯಂತೆ ಪಾದಚಾರಿ ಮಾರ್ಗಗಳಲ್ಲಿ ಹರಡಿಕೊಂಡಿರುತ್ತವೆ. ಯಾಮಾರಿದರೆ ನಿಮ್ಮನ್ನು ನೆಲಕ್ಕುರುಳಿಸಿ ಪ್ರಾಣಕ್ಕೆ ಸಂಚಕಾರ ತರುತ್ತವೆ! ಬೆಂಗಳೂರಿನ ಪಾದಚಾರಿ ಮಾರ್ಗಗಳು, ಮರಗಳು, ಟೆಲಿಕಾಂ ಹಾಗೂ ವಿದ್ಯುತ್‌ ಕಂಬಗಳಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್ಸಿ)ಗಳು ಹರಡಿಕೊಂಡಿರುವ ಪರಿಯಿದು.

ಅನಧಿಕೃತ ಒಎಫ್ಸಿ, ಟಿ.ವಿ ಕೇಬಲ್‌ಗ‌ಳು ಸಾರ್ವಜನಿಕ ಸ್ಥಳಗಳನ್ನು ಆವರಿಸಿಕೊಂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಕೆಲ ಕೇಬಲ್‌ಗ‌ಳನ್ನು ಮರಗಳ ಮೂಲಕ ತೆಗೆದುಕೊಂಡು ಹೋಗಲು ಅವಕಾಶ ನೀಡಿರುವುದನ್ನೇ ದುರ್ಬಳಕೆ ಮಾಡಿಕೊಂಡಿರುವ ಏಜೆನ್ಸಿಗಳು, ಬೇಕಾಬಿಟ್ಟಿ ಅಳವಡಿಸುತ್ತಿರುವ ಕೇಬಲ್‌ಗ‌ಳು ರಸ್ತೆಯಲ್ಲಿ ಇಳಿಬಿದ್ದು, ಅಪಘಾತಗಳಿಗೂ ಕಾರಣವಾಗುತ್ತಿವೆ.

ಇನ್ನು ಪಾದಚಾರಿ ಮಾರ್ಗಗಳಲ್ಲಿ ಅಡ್ಡಾದಿಡ್ಡಿ ಎಳೆದಿರುವ ಕೇಬಲ್‌ಗ‌ಳಿಂದ ಪಾದಚಾರಿಗಳು ಬಿದ್ದು ಕೈಕಾಲು ಮುರಿದುಕೊಂಡ ನಿದರ್ಶನಗಳು ಸಾಕಷ್ಟಿವೆ. ನಗರದಲ್ಲಿರುವ ಸುಮಾರು 14 ಸಾವಿರ ಕಿ.ಮೀ. ಉದ್ದದ ರಸ್ತೆಯಲ್ಲಿ ಟೆಲಿಕಾಂ ಸಂಸ್ಥೆಗಳು ಒಎಫ್ಸಿ ಕೇಬಲ್‌ಗ‌ಳನ್ನು ಅಳವಡಿಸಿವೆ. ಪಾಲಿಕೆಗೆ ಶುಲ್ಕ ಪಾವತಿಸಿ ನೆಲದಾಳದಲ್ಲಿ ಕೇಬಲ್‌ ಹಾಕಲು ಅನುಮತಿ ಪಡೆಯಬೇಕು ಎಂಬ ನಿಯಮವಿದ್ದರೂ, ಎಲ್ಲೆಂದರಲ್ಲಿ ಕೇಬಲ್‌ ಎಳೆಯಲಾಗಿದೆ.

ಒಎಫ್ಸಿ ಕೇಬಲ್‌ಗ‌ಳಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಹಾಗೂ ನಗರದ ಸೌಂದರ್ಯ ಹಾಳಾಗುವುದನ್ನು ತಪ್ಪಿಸಲು ಕೋಟ್ಯಂತರ ರೂ. ವೆಚ್ಚದಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ರಸ್ತೆಗಳಲ್ಲಿ ಒಎಫ್ಸಿ ಅಳವಡಿಕೆಗೆ ಪ್ರತ್ಯೇಕ ಡಕ್ಟ್ಗಳನ್ನೂ ನಿರ್ಮಿಸಲಾಗಿದೆ. ಆದರೆ, ಪ್ರತಿ ಮೀಟರ್‌ ಕೇಬಲ್‌ ಅಳವಡಿಕೆಗೆ ಪಾಲಿಕೆ ಶುಲ್ಕ ನಿಗದಿಪಡಿಸಿರುವ ಕಾರಣ, ಸಂಸ್ಥೆಗಳು ಡಕ್ಟ್ಗಳನ್ನು ಬಳಸುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಯೊಬ್ಬರು ದೂರಿದ್ದಾರೆ.

Advertisement

ಇತ್ತೀಚೆಗೆ ಕೆಲವೊಂದು ಸಂಸ್ಥೆಗಳು ಪಾಲಿಕೆಗೆ ತೆರಿಗೆ ಪಾವತಿಸಿ ತಾವು ಹೊಂದಿರುವ ಕೇಬಲ್‌ಗ‌ಳ ಮಾಹಿತಿ ನೀಡಲು ಮುಂದಾಗಿದ್ದರೂ, ಪೂರ್ಣ ಪ್ರಮಾಣದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪವಿದೆ. ಇನ್ನು ಬಹುತೇಕ ಕಂಪನಿಗಳು ಈವರೆಗೆ ಕೇಬಲ್‌ಗ‌ಳ ಮಾಹಿತಿ ನೀಡಿ ಪಾಲಿಕೆಗೆ ತೆರಿಗೆ ಪಾವತಿಸದೆ ಅಕ್ರಮವಾಗಿ, ಮನಸಿಗೆ ಬಂದಲ್ಲಿ ಕೇಬಲ್‌ಗ‌ಳನ್ನು ಅಳವಡಿಸುತ್ತಿವೆ.

ಒಎಫ್ಸಿಯಿಂದ ರಸ್ತೆಗುಂಡಿಗಳು: ನೆಲದಡಿಯಲ್ಲಿ ಹಾರಿಜೆಂಟಲ್‌ ಡೈರೆಕ್ಷನಲ್‌ ಡ್ರಿಲ್ಲಿಂಗ್‌ (ಎಚ್‌ಡಿಡಿ) ಯಂತ್ರದ ಮೂಲಕ ಒಎಫ್ಸಿ ಕೇಬಲ್‌ಗ‌ಳನ್ನು ಅಳವಡಿಸಲು ಕೆಲ ಏಜೆನ್ಸಿಗಳು ಅನುಮತಿ ಪಡೆದಿವೆ. ಆದರೆ, ಪಾಲಿಕೆಯಿಂದ 100 ಮೀಟರ್‌ಗೆ ಅನುಮತಿ ಪಡೆದು 500 ಮೀಟರ್‌ ಕೇಬಲ್‌ ಅಳವಡಿಸುತ್ತಿದ್ದಾರೆ. ಜತೆಗೆ ಕಾಮಗಾರಿ ಮುಗಿದ ನಂತರ ರಸ್ತೆ ಸರಿಪಡಿಸದಿರುವುದು ಪ್ರಮುಖ ರಸ್ತೆಗಳಲ್ಲಿ ಗುಂಡಿ ಬೀಳಲು ಕಾರಣವಾಗಿದೆ. ಅನಾಹುತ ಸಂಭವಿಸಿದಾಗ ಜನರು ಪಾಲಿಕೆಯನ್ನು ದೂರುತ್ತಾರೆ.

ತೆರಿಗೆ ವಂಚಿಸಲು ಸಾರ್ವಜನಿಕರಿಗೆ ತೊಂದರೆ: ಹಗುರವಾದ ಕೆಲವೊಂದು ಕೇಬಲ್‌ಗ‌ಳನ್ನು ಪೋಲ್‌ಗ‌ಳ ಮೂಲಕ ತೆಗೆದುಕೊಂಡು ಹೋಗಲು ಪಾಲಿಕೆಯಿಂದ ಅನುಮತಿ ನೀಡಲಾಗುತ್ತದೆ. ಆದರೆ, ಏಜೆನ್ಸಿಗಳು ಅಳವಡಿಸುವಂತೆ ಪ್ರತಿಯೊಂದು ಪೋಲ್‌ಗೆ ಪಾಲಿಕೆಯಿಂದ ಅನುಮತಿ ಪಡೆದು ನಿಗದಿತ ಶುಲ್ಕ ಪಾವತಿಸಬೇಕಿದೆ. ಹೀಗಾಗಿ ಪೋಲ್‌ಗ‌ಳನ್ನು ಅಳವಡಿಸದ ಏಜೆನ್ಸಿಗಳು ಮರಗಳ ಮೂಲಕ ಕೇಬಲ್‌ಗ‌ಳನ್ನು ತೆಗೆದುಕೊಂಡು ಹೋಗುತ್ತಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಕೇಬಲ್‌ಗ‌ಳನ್ನು ಕತ್ತರಿಸುತ್ತಿದ್ದು, ತುಂಡಾಗಿ ನೇತಾಡುವ ಕೇಬಲ್‌ಗ‌ಳು ರಸ್ತೆಯಲ್ಲಿ ಸಂಚರಿಸುವವರಿಗೆ “ಸಾವಿನ ಕುಣಿಕೆ’ಗಳಾಗಿ ಪರಿಣಮಿಸಿವೆ.

ಜೀವ ತೆಗೆದ ಒಎಫ್ಸಿ: ಕಳೆದ ವರ್ಷ ಆ.13ರಂದು ಕೆಂಗಲ್‌ ಹನುಮಂತಯ್ಯ ರಸ್ತೆಯಲ್ಲಿ ಗೋಪಾಲ್‌ ರಾವ್‌ ಎಂಬುವವರು ರಸ್ತೆ ದಾಟುವ ವೇಳೆಗೆ ರಸ್ತೆ ವಿಭಜದ ನಡುವೆ ಎಳೆದಿದ್ದ ಒಎಫ್ಸಿ ಕೇಬಲ್‌ ಗಮನಿಸದೆ, ಎಡವಿ ರಸ್ತೆಗೆ ಬಿದ್ದಿದ್ದರು. ಇದೇ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು. ಅದೇ ರೀತಿ ಕನ್ನಿಂಗ್‌ಹ್ಯಾಮ್‌ ರಸ್ತೆ ಸೇರಿದಂತೆ ಹಲವವೆಡೆ ಪಾದಚಾರಿಗಳು ಹಾಗೂ ಬೈಕ್‌ ಸವಾರರಿಗೆ ಒಎಫ್ಸಿ ಕೇಬಲ್‌ಗ‌ಳು ತಗುಲಿದ ಘಟನೆಗಳು ಸಂಭವಿಸಿವೆ.

ಏಜೆನ್ಸಿಗಳು ಅನುಸರಿಬೇಕಾದ ನಿಯಮಗಳೇನು?: ಪಾಲಿಕೆಯಿಂದ ಅನುಮತಿ ಪಡೆದ ಏಜೆನ್ಸಿಗಳು ಕೆಲಸ ಪ್ರಾರಂಭಿಸುವ ಮುನ್ನ ಸಂಬಂಧಿಸಿದ ವಲಯ ಅಧಿಕಾರಿಗಳಿಗೆ, ಪಾಲಿಕೆಯ ಮೂಲ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್‌ಗಳಿಗೆ ಲಿಖೀತ ಮಾಹಿತಿ ನೀಡಬೇಕು. ಕಾಮಗಾರಿಗೆ ಸಂಬಂಧಪಟ್ಟ ಕಾರ್ಯ ಯೋಜನೆಯನ್ನು ಸಂಬಂಧಪಟ್ಟ ವಾರ್ಡ್‌ ಇಂಜಿನಿಯರ್‌ ಗಮನಕ್ಕೆ ತಂದು, ಸಂಬಂಧಿಸಿದ ವಲಯ ಅಧಿಕಾರಿಗಳು ಅಥವಾ ರಸ್ತೆ ಮೂಲ ಸೌಕರ್ಯ ಇಂಜಿನಿಯರ್‌ಗಳ ಸಲಹೆ ಮೇರೆಗೆ ಮಣ್ಣು ಅಗೆಯಬೇಕು ಮತ್ತು ಕೇಬಲ್‌ ಅಳವಡಿಸಿದ ನಂತರ ರಸ್ತೆ ದುರಸ್ತಿ ಮಾಡಬೇಕೆಂಬ ನಿಯಮಗಳಿವೆ.

ಕೇಸುಗಳಿಗೆ ಇವರು ಜಗ್ಗುವುದಿಲ್ಲ: ನಗರದಲ್ಲಿ ಅನಧಿಕೃತವಾಗಿ ಒಎಫ್ಸಿ ಅಳವಡಿಸುವ ಏಜೆನ್ಸಿಗಳಿಗೆ ದುಬಾರಿ ದಂಡ ವಿಧಿಸಿ, ಕ್ರಿಮಿನಲ್‌ ಕೇಸು ದಾಖಲಿಸಿದರೂ ಏಜೆನ್ಸಿಗಳು ತಮ್ಮ ಜಗ್ಗುತ್ತಿಲ್ಲ. ಅನಧಿಕೃತ ಒಎಫ್ಸಿ ವಿರುದ್ಧ ಸಮರ ಸಾರಿ ನೂರಾರು ಮೀಟರ್‌ ಕೇಬಲ್‌ ಕತ್ತರಿಸಿ, ಏಜೆನ್ಸಿಗಳಿಗೆ ದುಬಾರಿ ದಂಡ ವಿಧಿಸಿದರೂ, ನಾಗರಿಕರಿಗೆ ತೊಂದರೆಯಾಗುವ ರೀತಿ ಕೇಬಲ್‌ಗ‌ಳನ್ನು ಅಳವಡಿಸುವ ಕಾರ್ಯ ಮುಂದುವರಿದಿದೆ.

ಪ್ರಶ್ನಿಸಿದರೆ ಸಿಬ್ಬಂದಿ ಮೇಲೆ ಹಲ್ಲೆ: ಅನಧಿಕೃತವಾಗಿ ಒಎಫ್ಸಿ ಕೇಬಲ್‌ ಅಳವಡಿಸುವವರು ರಾತ್ರಿ ವೇಳೆ ಕಾಮಗಾರಿ ನಡೆಸುತ್ತಾರೆ. ಈ ವೇಳೆ ಏಜೆನ್ಸಿಗಳು ಹತ್ತಾರು ಮಂದಿಯನ್ನು ನೇಮಿಸುತ್ತಿದ್ದು, ಕಾಮಗಾರಿ ತಡೆಯಲು ಬಂದವರ ಮೇಲೆ ಅವರು ಹಲ್ಲೆ ನಡೆಸುತ್ತಾರೆ. ನಗರದ ಪ್ರಮುಖ ಭಾಗಗಳಲ್ಲಿ ಇಂತಹ ಅನಧಿಕೃತ ಕೇಬಲ್‌ ಅಳವಡಿಕೆ ತಡೆಯಲು ಮುಂದಾದ ಪಾಲಿಕೆ ಸಿಬ್ಬಂದಿಗೆ ಹೊಡೆದು ಗಾಯಗೊಳಿಸಿರುವ ಹತ್ತಾರು ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಪಾಲಿಕೆಯಿಂದ ಹಲವು ಠಾಣೆಗಳಲ್ಲಿ ದೂರು ದಾಖಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಪಾಲಿಕೆಗೆ ವಂಚಿಸುವ ಏಜೆನ್ಸಿಗಳು: ನಗರದಲ್ಲಿ ಪ್ರಮುಖವಾಗಿ 17 ಒಎಫ್ಸಿ ಸೇವಾ ಸಂಸ್ಥೆಗಳು, ದೂರ ಸಂಪರ್ಕ, ದೂರದರ್ಶನ ಹಾಗೂ ಅಂತರ್ಜಾಲ ಸೇವೆಗಳನ್ನು ಒದಗಿಸುತ್ತಿವೆ. 6,140 ಕಿ.ಮೀ. ವ್ಯಾಪ್ತಿಯಲ್ಲಿ ಕೇಬಲ್‌ ಅಳಡಿಸಲು ಅನುಮತಿ ಪಡೆದಿರುವ ಸಂಸ್ಥೆಗಳು, ಅನಧಿಕೃತವಾಗಿ ನಗರಾದ್ಯಂತ ಸುಮಾರು 90 ಸಾವಿರ ಕಿ.ಮೀ.ಗೂ ಹೆಚ್ಚಿನ ಕೇಬಲ್‌ಗ‌ಳನ್ನು ಅಳವಡಿಸುವ ಮೂಲಕ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸಿದ್ದಾರೆ.

ಸಂಸ್ಥೆಗಳು ಮರಗಳಿಂದ ಮರಗಳ ಮೂಲಕ ತೆಗೆದುಕೊಂಡು ಹೋಗಿರುವ ಕೇಬಲ್‌ಗ‌ಳ ತೆರವು ಕಾರ್ಯ ನಡೆಸುವುದರಿಂದ ಇಂಟರ್‌ನೆಟ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆ ಉಂಟಾಗುತ್ತದೆ. ಏಜೆನ್ಸಿಗಳು ಸುಲಭವಾಗಿ ಆರೋಪವನ್ನು ಪಾಲಿಕೆ ಮೇಲೆ ಹಾಕುವುದರಿಂದ ಜನರು ಪಾಲಿಕೆಗೆ ಶಾಪ ಹಾಕುತ್ತಾರೆ. ಇನ್ನು ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ಸಿಬ್ಬಂದಿ ಕೇಬಲ್‌ಗ‌ಳನ್ನು ಅರ್ಧಕ್ಕೆ ಕತ್ತರಿಸುವುದು ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಸಮಿತಿ ವರದಿ ಜಾರಿಗೆ ತಾತ್ಸಾರ: 2012ರಲ್ಲಿ ರಚಿಸಲಾದ ಒಎಫ್ಸಿ ಸಮಿತಿ, ಅನಧಿಕೃತ ಒಎಫ್ಸಿ ಅಳವಡಿಕೆಯಿಂದ ಪಾಲಿಕೆಗೆ ಆಗುವ ನಷ್ಟ ಹಾಗೂ ಮರಗಳ ಮೂಲಕ ತೆಗೆದುಕೊಂಡು ಹೋಗುವ ಕೇಬಲ್‌ಗ‌ಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಉಲ್ಲೇಖೀಸಿ, ಇಂತಹ ಕೇಬಲ್‌ಗ‌ಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ವರದಿ ನೀಡಿದೆ. ವರದಿ ಸಲ್ಲಿಕೆಯಾಗಿ ಐದು ವರ್ಷಗಳು ಕಳೆದರೂ ಅದನ್ನು ಜಾರಿಗೊಳಿಸಲು ಪಾಲಿಕೆ ಮುಂದಾಗಿಲ್ಲ. 

ಒಳಚರಂಡಿ ಪೈಪುಗಳನ್ನೂ ಬಿಟ್ಟಿಲ್ಲ!: ನಗರದಲ್ಲಿ ಸುಮಾರು 2,500ರಿಂದ 3,000 ಕಿ.ಮೀ ಒಎಫ್ಸಿ ಕೇಬಲ್‌ ಒಳಚರಂಡಿ ಪೈಪ್‌ಗ್ಳಲ್ಲೇ ಹಾದು ಹೋಗಿರುವ ಅಂದಾಜಿದೆ. ಒಎಫ್ಸಿ ಕೇಬಲ್‌ ಅಳವಡಿಸುವ ಗುತ್ತಿಗೆದಾರರು, ಟೆಲಿಕಾಂ ಕಂಪನಿಗಳಿಂದ ಪ್ರತಿ ಮೀಟರ್‌ ಕೇಬಲ್‌ ಅಳವಡಿಸಲು ಇಂತಿಷ್ಟು ಹಣ ಪಡೆಯುತ್ತಾರೆ. ಹೈಡ್ರಾಲಿಕ್‌ ಡ್ರಿಲ್ಲಿಂಗ್‌ ಮೆಷಿನ್‌ಗಳಿಂದ ಕೇಬಲ್‌ ಅಳವಡಿಸದೆ, ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಯುಜಿಡಿ ಪೈಪ್‌ ಮಾರ್ಗಗಳನ್ನು ಬಳಸುತ್ತಾರೆ. ಈ ಬಗ್ಗೆ ದೂರುಗಳು ಬಂದಿದ್ದು, ಕೆಲವು ಕಡೆ ಮ್ಯಾನ್‌ಹೋಲ್‌ ಮುಚ್ಚುಳ ತೆರೆದು ಪರಿಶೀಲಿಸಿದಾಗ, ಯುಜಿಡಿ ಪೈಪ್‌ಗ್ಳ ಮೂಲಕವೇ ಕೇಬಲ್‌ಗ‌ಳು ಹಾದುಹೋಗಿರುವುದು ಪತ್ತೆಯಾಗಿದೆ ಎಂದು ಪಾಲಿಕೆಯ ಹಿರಿಯ ಸದಸ್ಯರು ಹೇಳುತ್ತಾರೆ.

ಮಾಫಿಯಾಗೆ ನಡುಗುವ ಅಧಿಕಾರಿಗಳು: ನಗರದಲ್ಲಿನ ಒಎಫ್ಸಿ ಮಾಫಿಯಾಗೆ ಬೆದರುವ ಪಾಲಿಕೆ ಅಧಿಕಾರಿಗಳು, ಅಕ್ರಮವಾಗಿ ಕೇಬಲ್‌ ಅಳವಡಿಸುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ರೋಪವಿದೆ. ಯಾವ ಏಜೆನ್ಸಿಗಳು ಅನಧಿಕೃತವಾಗಿ ಕೇಬಲ್‌ ಅಳವಡಿಸಿವೆ ಎಂಬ ಮಾಹಿತಿಯಿದ್ದರೂ, ಅತ್ಯಂತ ಪ್ರಭಾವಿಯಾಗಿರುವ ಮಾಫಿಯಾಗೆ ಹೆದರಿ ಕೇಬಲ್‌ ತೆರವುಗೊಳಿಸಲು ಮತ್ತು ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ತೋರುತ್ತಿಲ್ಲ ನ್ನಲಾಗಿದೆ.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next