ಮೆಕ್ಸಿಕೋ ಸಿಟಿ: ಅಮೆರಿಕ ಹಾಗೂ ಮೆಕ್ಸಿಕೋ ಗಡಿಯಲ್ಲಿರುವ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 40 ಮಂದಿ ಮೃತರಾಗಿದ್ದಾರೆ.
28 ಮಂದಿ ಗಾಯಗೊಂಡಿದ್ದಾರೆ. ಸಿಯುಡಾಡ್ ಜುವೆರಾಜ್‌ನಲ್ಲಿರುವ ಕೇಂದ್ರದಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದ್ದು, ದೇಶದಲ್ಲಿ ಈವರೆಗೆ ಘಟಿಸಿದ ಅತಿದೊಡ್ಡ ದುರಂತ ಇದಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳು ಪ್ರಯತ್ನಿಸಿದರೂ ಈ ಮಟ್ಟದ ಸಾವು ನೋವು ವರದಿಯಾಗಿದೆ.
ವಲಸಿಗರು ತಮ್ಮನ್ನು ಗಡೀಪಾರು ಮಾಡಬಹುದೆನ್ನುವ ಭೀತಿಯಿಂದ ಹಾಸಿಗೆಗಳು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.
ಬೆಂಕಿ ಕಾಣಿಸಿಕೊಂಡು ಹೊಗೆ ದಟ್ಟನೆ ಕಂಡರೂ ಭದ್ರತಾ ಸಿಬ್ಬಂದಿ ಸೆಲ್ ಗಳನ್ನು ತೆರೆಯುವ ಬದಲು ದೂರ ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Related Articles
ವಲಸಿಗರನ್ನು ಸಣ್ಣ ಸೆಲ್ ನಲ್ಲಿ ಹಾಕಲಾಗಿದೆ. ಇಡೀ ದಿನ ಅವರಿಗೆ ಕುಡಿಯಲು ನೀರು ಸಿಗುತ್ತಿರಲಿಲ್ಲ ಎನ್ನುವ ಕಾರಣದಿಂದ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ವಾಟೆಮಾಲಾ, ಹೊಂಡುರಾಸ್, ಎಲ್ ಸಾಲ್ವಡಾರ್, ವೆನೆಜುವೆಲಾ, ಕೊಲಂಬಿಯಾ ಮತ್ತು ಈಕ್ವೆಡಾರ್ ದೇಶದ ಪ್ರಜೆಗಳು ಮೃತ ಹಾಗೂ ಗಾಯಗೊಂಡವರು ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಮಧ್ಯ ಹಾಗೂ ದಕ್ಷಿಣ ಅಮೆರಿಕದ 68 ಮಂದಿ ಕೇಂದ್ರದಲ್ಲಿದ್ದರು. ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.