ಕುಶಿನಗರ್(ಉತ್ತರಪ್ರದೇಶ): ಮದುವೆ ಮನೆಯಲ್ಲಿ ಹಳದಿ ಶಾಸ್ತ್ರ ನಡೆಯುವ ಸಂದರ್ಭದಲ್ಲಿ ಬಾವಿಯೊಳಗೆ ಬಿದ್ದು 13 ಮಂದಿ ಮಹಿಳೆಯರು ಸಾವನ್ನಪ್ಪಿರುವ ದುರಂತ ಘಟನೆ ಬುಧವಾರ (ಫೆ.16) ತಡರಾತ್ರಿ ಉತ್ತರಪ್ರದೇಶದ ಕುಶಿನಗರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಏನಿದು ದುರಂತ ಘಟನೆ:
ಮದುವೆ ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ನಡೆಯುತ್ತಿದ್ದ ವೇಳೆ ಮಹಿಳೆಯರು ಮತ್ತು ಯುವತಿಯರು ಬಾವಿಯ ಸುತ್ತ ಕಟ್ಟಿದ್ದ ರೈಲಿಂಗ್ ಬಳಿ ನಿಂತಿದ್ದು, ಕೆಲವರು ಬಾವಿಯ ಮೇಲಿನ ಸ್ಲ್ಯಾಬ್ ಮೇಲೆ ಕುಳಿತಿದ್ದರು. ಈ ಸಂದರ್ಭದಲ್ಲಿ ಭಾರ ತಾಳಲಾರದೆ ಸ್ಲ್ಯಾಬ್ ಕುಸಿದು 13 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಜಗತ್ತಿನ ಭಾರದ ಸ್ಟ್ರಾಬೆರಿ ಬೆಳೆದು ಗಿನ್ನೆಸ್ ದಾಖಲೆಗೆ ಭಾಜನರಾದ ಇಸ್ರೇಲ್ ವ್ಯಕ್ತಿ
ಕುಶಿನಗರದ ನೆಬುವಾ ನೌರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಸುಮಾರು 15 ಮಂದಿ ಮಹಿಳೆಯರನ್ನು ಗ್ರಾಮಸ್ಥರು ಮತ್ತು ಪೊಲೀಸರು ರಕ್ಷಿಸಿದ್ದರು. ಆದರೆ ಉಳಿದ 13 ಮಂದಿಯನ್ನು ಸಕಾಲದಲ್ಲಿ ರಕ್ಷಿಸಲು ಸಾಧ್ಯವಾಗದ ಪರಿಣಾಮ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಕುಶಿನಗರದ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಸ್ಥಳೀಯಾಡಳಿತ ಸಾಧ್ಯವಾದ ನೆರವು ನೀಡುವಂತೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಸಂತಾಪ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.