ಸನಾ: ಯಮನ್ ಕರಾವಳಿಯಲ್ಲಿ ವಲಸಿಗರ ದೋಣಿ ಮುಳುಗಿ ಕನಿಷ್ಠ 13 ಜನರು ಸಾವನ್ನಪ್ಪಿ, 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ ತಿಳಿಸಿದೆ.
ಯೆಮನ್ನ ತೈಜ್ ಗವರ್ನರೇಟ್ನ ಕರಾವಳಿಯಲ್ಲಿ ಮಂಗಳವಾರ ವಲಸಿಗರ ದೋಣಿ ಮುಳುಗಿದೆ ಎಂದು ಇಂಟರ್ನ್ಯಾಶನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ( IOM) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
25 ಇಥಿಯೋಪಿಯನ್ನರು ಮತ್ತು ಇಬ್ಬರು ಯೆಮನ್ ಪ್ರಜೆಗಳನ್ನು ಹೊತ್ತು ಜಿಬೌಟಿಯಿಂದ ಹೊರಟಿದ್ದ ಬೋಟ್ ಬಾನಿ ಅಲ್-ಹಕಮ್ ಉಪಜಿಲ್ಲೆಯ ದುಬಾಬ್ ಬಳಿ ಮುಳುಗಿದೆ. ಯೆಮನ್ ಕ್ಯಾಪ್ಟನ್ ಮತ್ತು ಅವರ ಸಹಾಯಕ ಸೇರಿದಂತೆ ಕಾಣೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸತ್ತವರಲ್ಲಿ ಹನ್ನೊಂದು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು IOM ತಿಳಿಸಿದೆ.
“ಈ ದುರಂತವು ಈ ಮಾರ್ಗದಲ್ಲಿ ವಲಸಿಗರು ಎದುರಿಸುತ್ತಿರುವ ಅಪಾಯಗಳಿಗೆ ಸಾಕ್ಷಿಯಾಗಿದೆ ಎಂದು ಯೆಮನ್ನಲ್ಲಿ IOM ನ ಕಾರ್ಯಾಚರಣೆಯ ಮುಖ್ಯಸ್ಥ ಮ್ಯಾಟ್ ಹ್ಯೂಬರ್ ಹೇಳಿದ್ದಾರೆ.
ಸಾವಿರಾರು ನಿರಾಶ್ರಿತರು ಮತ್ತು ವಲಸಿಗರು ಆಫ್ರಿಕಾದಿಂದ ಹೊರಟು, ಸಂಘರ್ಷ, ನೈಸರ್ಗಿಕ ವಿಪತ್ತುಗಳು ಅಥವಾ ಕಳಪೆ ಆರ್ಥಿಕ ನಿರೀಕ್ಷೆಗಳಿಂದ ಪಾರಾಗಲು ಮತ್ತು ತೈಲ-ಸಮೃದ್ಧ ಗಲ್ಫ್ ದೇಶಗಳನ್ನು ತಲುಪುವ ಪ್ರಯತ್ನ ಮಾಡುತ್ತಾರೆ. 2023 ರಲ್ಲಿ ಯೆಮನ್ನಲ್ಲಿ 97,200 ಕ್ಕೂ ಹೆಚ್ಚು ಮಂದಿಯ ಆಗಮನವನ್ನು ದಾಖಲಿಸಿದ್ದು, ಹಿಂದಿನ ವರ್ಷಗಳ ಸಂಖ್ಯೆಯನ್ನು ಮೀರಿಸಿದೆ.
ಯೆಮೆನ್ ತಲುಪುವ ಜನರು ತಮ್ಮ ಸುರಕ್ಷತೆಗೆ ಹೆಚ್ಚಿನ ಬೆದರಿಕೆಗಳನ್ನು ಎದುರಿಸುತ್ತಾರೆ. ಅನೇಕ ಜನರು ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ದೇಶಗಳಿಗೆ ಕಾರ್ಮಿಕರಾಗಿ ಅಥವಾ ಮನೆಕೆಲಸಗಾರರಾಗಲು ಪ್ರಯತ್ನಿಸುತ್ತಾರೆ.