Advertisement

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

06:58 PM Mar 30, 2023 | Team Udayavani |

ಇಂದೋರ್(ಮಧ್ಯಪ್ರದೇಶ): ರಾಮನವಮಿ ಆಚರಣೆ ವೇಳೆ ಸ್ಟೆಪ್ ವೆಲ್ (ಮೆಟ್ಟಿಲುಗಳ ಬಾವಿ) ಮೇಲೆ ಹಾಸಿದ್ದ ಸಿಮೆಂಟ್ ಹಾಸು ಕುಸಿದು ಬಿದ್ದ ಪರಿಣಾಮ ಹದಿಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರನ್ನು ರಕ್ಷಿಸಲಾಗಿದೆ.

Advertisement

ಗುರುವಾರ ರಾಮನವಮಿ ಆಚರಣೆಗಳು ನಡೆಯುತ್ತಿದ್ದ ವೇಳೆ ನಗರದ ಸ್ನೇಹ ನಗರ ಪ್ರದೇಶದಲ್ಲಿರುವ ಶ್ರೀ ಬಾಲೇಶ್ವರ ದೇವಸ್ಥಾನದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ನಂತರ ಹಲವಾರು ವಿಡಿಯೋಗಳು ದೇವಾಲಯದಲ್ಲಿ ನಡೆಸಲಾದ ರಕ್ಷಣಾ ಕಾರ್ಯಾಚರಣೆಯನ್ನು ತೋರಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ನರೋತಮ್ ಮಿಶ್ರಾ, ದುರ್ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 11 ಮೃತದೇಹಗಳನ್ನು (10 ಮಹಿಳೆ ಮತ್ತು ಒಬ್ಬ ಪುರುಷ) ಸ್ಥಳದಿಂದ ಹೊರತೆಗೆಯಲಾಗಿದ್ದು, ಹಲವರನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಇಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ.

ಮಾಹಿತಿಯ ಪ್ರಕಾರ, ದೇವಸ್ಥಾನದ ಒಳಗೆ ಭಕ್ತರು ಬಾವಿಯ ಮೇಲೆ ನಿಂತಿದ್ದಾಗ ಬಾವಿಯ ಹೊದಿಕೆ ಕುಸಿದಿದೆ. ಬಾವಿಯೊಳಗೆ ಇನ್ನೂ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.

ಘಟನೆಯ ಸಮಯದಲ್ಲಿ ಸುಮಾರು ಎರಡು ಡಜನ್ ಜನರು ಮೆಟ್ಟಿಲು ಬಾವಿಯ ಮೇಲೆ ನಿಂತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸೇವೆಗಳು ಸಮಯಕ್ಕೆ ಸ್ಥಳಕ್ಕೆ ತಲುಪಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Advertisement

ಏತನ್ಮಧ್ಯೆ, ಘಟನೆಯ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಲಾಯಿತು, ನಂತರ ಅವರು ದೇವಾಲಯದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಇಂದೋರ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಘಟನಾ ಸ್ಥಳಕ್ಕೆ ಇಂದೋರ್ ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next