Advertisement

ಈ ಶಿಕ್ಷಕಿಯದ್ದು ಅವಿರತ ಸೇವೆ…25 ಕಿ.ಮೀ ನಡಿಗೆ…ಮನೆ, ಮನೆಗೆ ತೆರಳಿ ಪಾಠ ಹೇಳ್ತಾರೆ!

05:44 PM Oct 01, 2022 | Team Udayavani |

ಪ್ರತಿಯೊಬ್ಬರು ಹುಟ್ಟುವಾಗಲೇ ಗುರುವನ್ನು ಪಡೆಯುತ್ತಾರೆ. ಅದು ಅವರ ತಂದೆ -ತಾಯಿಯ ರೂಪದಲ್ಲಿ. ಬಾಲ್ಯದ ಅಂಬೆಗಾಲಿನಲ್ಲಿ ಎಡವಿ ಬಿದ್ದಾಗ ಕೈ ಹಿಡಿದು ನಡೆಸುವ ಗುರು ಅಮ್ಮ. ಯೌವನದಲ್ಲಿ ತಪ್ಪು ದಾರಿಯತ್ತ ಹೆಜ್ಜೆಯಿಟ್ಟಾಗ ಗದರಿಸಿ ಬುದ್ದಿ ಹೇಳುವ ಗುರುವಾಗಿ ಕಾಣುವ ತಂದೆ.

Advertisement

ಜೀವನದ ಎಲ್ಲಾ ಹಂತದಲ್ಲಿ ನಮಗೆ ಒಂದೊಂದು ಪರಿಸ್ಥಿತಿಯಲ್ಲೂ ಗುರುವಾಗಿ ತುಂಬಾ ಜನ ಕಾಣ ಸಿಗುತ್ತಾರೆ. ಸಿಕ್ಕವರೆಲ್ಲಾ ಒಂದಲ್ಲ ಒಂದು ಪಾಠವನ್ನು ಹೇಳಿ ಹೋಗುತ್ತಾರೆ. ಶಾಲಾ ಅಥವಾ ಶಿಕ್ಷಣ ಕಲಿಯುವಾಗಿನ ದಿನದಲ್ಲಿ ಬರುವ ಗುರುಗಳ ಮಹತ್ವ, ಋಣ ಎಂದಿಗೂ ಮರೆತು ಹೋಗುವಂಥದ್ದಲ್ಲ.

ಕಾಸರಗೋಡು ಮೂಲದ ಶಿಕ್ಷಕಿಯೊಬ್ಬರ ನಿಜ ಜೀವನದ ಕಥೆಯಿದು. ಇವರ ವಯಸ್ಸಿನಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಅವರು ಇಷ್ಟು ಹೊತ್ತಿಗೆ ನಿವೃತ್ತಿ ಆಗಿ ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಆಡುತ್ತಾ, ಬೆಳಗಿನ ಜಾವ ಪೇಪರ್‌ ಓದುತ್ತಾ ದಿನ ಕಳೆಯುತ್ತಿದ್ದರು ಆದರೆ, 65 ವರ್ಷದ ಕೆ.ವಿ. ನಾರಾಯಣಿ ಹೀಗಲ್ಲ. ಇವರ ಬೆಳಗ್ಗೆ ಆರಂಭವಾಗುವುದು ವಿದ್ಯಾರ್ಥಿಗಳಿಗಾಗಿ, ಸೂರ್ಯ ಮುಳುಗುವ ಸಂಜೆ ಅಂತ್ಯವಾಗುವುದು ವಿದ್ಯಾರ್ಥಿಗಳಿಂದ.

ವಯಸ್ಸು 60 ದಾಟಿದೆ, ಬೆನ್ನು ವಯೋ ಸಹಜ ಎಂಬಂತೆ ಬಗ್ಗಿ ಹೋಗಿದೆ. ಕೈಯಲ್ಲೊಂದು ಕೊಡೆ,ಒಂದು ಬ್ಯಾಗ್‌, ಅದರೊಳಗೆ ಒಂದು ಪುಸ್ತಕ, ನೋಟ್ಸ್‌, ಪೆನ್‌, ಪೆನ್ಸಿಲ್‌, ಕಣ್ಣಿಗೊಂದು ಕನ್ನಡಕ. ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುತ್ತಾರೆ. ತಪ್ಪು ಮಾಡಿದರೆ ತಿದ್ದುತ್ತಾರೆ. ಜೋರು ಮಾಡುವ ಹಾಗೆ ಮಾಡುತ್ತಾರೆ. ನಾರಾಯಣಿ ಟೀಚರ್‌ ಅಂದರೆ ಆಯಿತು. ಮಕ್ಕಳಿಗೆ ಅಚ್ಚು ಮೆಚ್ಚು.

ಇಲ್ಲಿ ಮಕ್ಕಳೆಂದರೆ ಅಥವಾ ನಾರಾಯಣಿ ಟೀಚರ್‌ ಅವರ ವಿದ್ಯಾರ್ಥಿಗಳೆಂದರೆ ಶಾಲೆಯಲ್ಲಿರುವ ವಿದ್ಯಾರ್ಥಿಗಳಲ್ಲ. ನಾರಾಯಣಿ ಟೀಚರ್‌ ಟ್ಯೂಷನ್‌ ಟೀಚರ್. ಮನೆ ಮನೆಗೆ ಹೋಗಿ ಪಾಠ ಹೇಳಿ ಕೊಡುವ ಟ್ಯೂಷನ್‌ ಟೀಚರ್.

Advertisement

1971 ರಲ್ಲಿ 10ನೇ ತರಗತಿ ಮುಗಿಸಿದ ನಾರಾಯಣಿ ಆ ಬಳಿಕ ಕಾಲೇಜು ಮೆಟ್ಟಿಲು ಹತ್ತಿಲ್ಲ. ಹೆಚ್ಚು ಕಲಿಯದೇ ಇದ್ದರೂ ನಾರಾಯಣಿ ಇಂಗ್ಲಿಷ್‌, ಮಲಯಾಳಂ, ಹಿಂದಿ ಹಾಗೂ ಸಂಸ್ಕೃತ್‌ ಭಾಷೆಯಲ್ಲಿ ಹೆಚ್ಚು ಚತುರೆ. ಈ ನಾಲ್ಕು ಭಾಷೆಯಲ್ಲಿ ಬುದ್ದಿವಂತೆ ಆಗಿದ್ದ ನಾರಾಯಣಿ ತಮ್ಮ 15 ನೇ ವಯಸ್ಸಿನಲ್ಲಿ ಮನೆ ಪಕ್ಕದ ಮಕ್ಕಳಿಗೆ ಟ್ಯೂಷನ್‌ ಕೊಡಲು ಮುಂದಾಗುತ್ತಾರೆ.

ದಿನ ಕಳೆದಂತೆ ನಾರಾಯಣಿ ಅವರ ಟ್ಯೂಷನ್‌ ಗೆ ಮಕ್ಕಳು ಹೆಚ್ಚಾಗುತ್ತಾರೆ. ನೇರವಾಗಿ ಮಕ್ಕಳ ಮನೆಗೆ ಹೋಗಿ ಟ್ಯೂಷನ್‌ ನೀಡುತ್ತಾರೆ. ಪ್ರತಿನಿತ್ಯ ಮುಂಜಾನೆ 4:30 ಕ್ಕೆ ಎದ್ದು ಟ್ಯೂಷನ್‌ ಕೊಡಲು ಹೋಗುತ್ತಾರೆ. ಹಾಗೇ ಟ್ಯೂಷನ್‌ ಕೊಡಲು ಇವರು ಸಾಗುವುದು 25 ಕಿ.ಮೀ. ದೂರ. ನಾರಾಯಣಿ ಹೀಗೆ ಹೋಗುವುದು ಬಸ್‌ ಅಥವಾ ರಿಕ್ಷಾದಲ್ಲಲ್ಲ, ಅವರು ನಿತ್ಯ 25 ಕಿ.ಮೀ ಹೋಗುವುದು ನಡೆದುಕೊಂಡೇ.!

ಮುಂಜಾನೆ 4:30 ಕ್ಕೆ ಎದ್ದು ಹೋದರೆ, 6:30 ಕ್ಕೆ ಮೊದಲ ವಿದ್ಯಾರ್ಥಿ ಮನೆಗೆ ಹೋಗುತ್ತಾರೆ. ಆದಾದ ಬಳಿಕ ಎರಡನೇ ವಿದ್ಯಾರ್ಥಿ.. ಹೀಗೆ ಸಂಜೆ 6:30 ರವರೆಗೆ ಹತ್ತು ಹಲವಾರು ಮಂದಿ ವಿದ್ಯಾರ್ಥಿಗಳ ಮನೆಗೆ ಹೋಗಿ ಟ್ಯೂಷನ್‌ ಕೊಡುತ್ತಾರೆ. ಇಂಗ್ಲೀಷ್‌ ನಾರಾಯಣಿ ಅವರ ಮೆಚ್ಚುಗೆಯ ವಿಷಯ.

ನಡಿಗೆ ನನ್ನ ದಿನನಿತ್ಯದ ಹವ್ಯಾಸ ನನ್ನ ಆರೋಗ್ಯ ಎಲ್ಲಿಯವರೆಗೆ ಅನುಮತಿ ನೀಡುತ್ತದೆ ಅಲ್ಲಿಯವರೆಗೆ ನಾನು ನಡೆದುಕೊಂಡು ಹೋಗಿ ಮಕ್ಕಳಿಗೆ ಟ್ಯೂಷನ್‌ ಕೊಡುತ್ತೇನೆ. ಕೋವಿಡ್‌ ಸಮಯದ ಲಾಕ್ ಡೌನ್‌ ನಲ್ಲೂ ನಾನು ವಿದ್ಯಾರ್ಥಿಗಳ ಮನೆಗೆ ಹೋಗಿ ಟ್ಯೂಷನ್‌ ಕೊಟ್ಟಿದ್ದೇನೆ ಎನ್ನುತ್ತಾರೆ ನಾರಾಯಣಿ.

ಚೆರುವತ್ತೂರುನಲ್ಲಿ ಹಾಸಿಗೆ ಹಿಡಿದ ತನ್ನ ಗಂಡನೊಂದಿಗೆ ಬಾಡಿಗೆ ಮನೆಯಲ್ಲಿರುವ ನಾರಾಯಣಿ ಅವರಿಗೆ ತಮ್ಮ ಸ್ವಂತ ಮನೆಯಯನ್ನು ಮಾಡುವ ಕನಸೊಂದು ಇದೆ. ಅದಕ್ಕಾಗಿ ಈ ಇಳಿ ವಯಸ್ಸಿನಲ್ಲೂ ನಡೆದುಕೊಂಡೇ ತೆರಳಿ ಪಾಠ ಮಾಡುವುದು ಇವರ ದಿನಚರಿಯಾಗಿದೆ. ನಾರಾಯಣಿ ಟೀಚರ್‌ 50 ವರ್ಷದಿಂದ ನಡೆದುಕೊಂಡು ಹೋಗಿ ಟ್ಯೂಷನ್‌ ನೀಡುತ್ತಿದ್ದಾರೆ. ಟ್ಯೂಷನ್‌ ನಿಂದ ಬಂದ ಹಣದಿಂದ ಅವರು ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಗಂಡನ ಚಿಕಿತ್ಸೆಗೆ ಹಾಗೂ ನಿತ್ಯದ ಖರ್ಚಿಗೆ ಬಳಸುತ್ತಾರೆ.

ಟ್ಯೂಷನ್‌ ಕೊಟ್ಟ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಗಳಿಸಿದ್ದಾರೆ. ಅಂಕಗಳಿಸಿ ಎಲ್ಲರೂ ಧನ್ಯವಾದವನ್ನು ಹೇಳುತ್ತಾರೆ. ನಾನು ಕೊಟ್ಟ ಟ್ಯೂಷನ್‌ ಮಕ್ಕಳಿಗೆ ಉಪಯೋಗವಾಗುತ್ತಿದೆ ಎಂದು ತಮ್ಮ ಸಂತಸವನ್ನು ನಾರಾಯಣಿ ಟೀಚರ್‌ ಹಂಚಿಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೂ ನಡೆದುಕೊಂಡೇ ಹೋಗಿ ಟ್ಯೂಷನ್‌ ನೀಡುವ ನಾರಾಯಣಿ ಟೀಚರ್‌ ನೂರಾರು ವಿದ್ಯಾರ್ಥಿಗಳ ಬಾಳಿಗೆ ತಮ್ಮ ಶಿಕ್ಷಣದ ಮೂಲಕ ಆಸರೆಯಾಗಿದ್ದಾರೆ.

-ಸುಹಾನ್‌ ಶೇಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next