ಮಂಗಳೂರು: ಯಾವುದೇ ರೋಗಲಕ್ಷಣಗಳಿಲ್ಲದ ಕೋವಿಡ್ 19 ಸೋಂಕಿತರನ್ನು ಅವರ ಮನೆಯಲ್ಲಿಯೇ ನಿಗಾವಣೆಯಲ್ಲಿ ಇಡಲಾಗುತ್ತಿದ್ದು, ಅವರ ಮೇಲ್ವಿಚಾರಣೆಯನ್ನು ಸಹಾಯವಾಣಿ ಮೂಲಕ ಮಾಡಲಾಗುತ್ತದೆ.
ರೋಗಿಗಳಿಗೆ ವೈದ್ಯರು ಸಲಹೆ ಮತ್ತು ಮಾರ್ಗದರ್ಶನ ನೀಡಿ ಅವರಿಂದ ನಿರಂತರ ಮಾಹಿತಿ ಪಡೆಯಲಿದ್ದಾರೆ.
ಕೋವಿಡ್ 19 ಸೋಂಕಿತರ ಸಹಾಯಕ್ಕಾಗಿ ಜಿಲ್ಲೆಯ ಎಲ್ಲ ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾರ್ಗದರ್ಶನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೇಲುಸ್ತುವಾರಿಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
ಈಗಾಗಲೇ ಬಂಟ್ವಾಳ, ಉಳ್ಳಾಲ, ಸೋಮೇಶ್ವರ, ಸುಳ್ಯ, ಪುತ್ತೂರು, ಮೂಡುಬಿದಿರೆ ನಗರ ಸಂಸ್ಥೆಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಸುಳ್ಯ, ಪುತ್ತೂರು, ಮೂಡುಬಿದಿರೆಗಳಲ್ಲಿ ಕಡಿಮೆ ಸಂಖ್ಯೆಯ ರೋಗಿಗಳಿದ್ದು, ಬಂಟ್ವಾಳ ಉಳ್ಳಾಲ ಹಾಗೂ ಸೋಮೇಶ್ವರದಲ್ಲಿ ಅಧಿಕ ಸಂಖ್ಯೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಕೋವಿಡ್ ಸೋಂಕಿತರಿದ್ದಾರೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ತಿಳಿಸಿದರು. ಈ ಸಹಾಯವಾಣಿಯಲ್ಲಿ ಪುರಸಭೆಗಳು ಹಾಗೂ ಇತರ ಸಿಬಂದಿ ಇರಲಿದ್ದು, ಮನೆಯಲ್ಲಿರುವ ರೋಗಿಗಳ ಮಾಹಿತಿಯನ್ನು ವೀಡಿಯೋ ಕಾಲ್ ಮೂಲಕ ಪಡೆಯುತ್ತಾರೆ.
ಉಳ್ಳಾಲ ಆರೋಗ್ಯ ಕೇಂದ್ರ ಆಕ್ಸಿಜನ್ ಸೆಂಟರ್: ಖಾದರ್
ದ.ಕ. ಜಿಲ್ಲೆಯಲ್ಲಿ ಮತ್ತು ಉಳ್ಳಾಲ ನಗರಸಭಾ ಸೇರಿದಂತೆ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ -19 ಆಕ್ಸಿಜನ್ ಸೆಂಟರ್ ಆಗಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.