ಭಾರತವನ್ನು ಗುರಿಯಾಗಿಸಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳಿಗೆ ಪಾಕಿಸ್ಥಾನ ಇನ್ನೂ ಆಶ್ರಯ ನೀಡುತ್ತಲೇ ಬಂದಿದ್ದು ಉಗ್ರ ಸಂಘಟನೆಗಳ ಪ್ರಮುಖ ನಾಯಕರು ಆ ದೇಶದಲ್ಲಿ ಓಡಾಡುತ್ತಿದ್ದಾರೆ ಎಂದು ಭಯೋತ್ಪಾದಕತೆ ಕುರಿತಾಗಿನ ವರದಿಯಲ್ಲಿ ಅಮೆರಿಕ ಹೇಳಿದೆ.
ದಶಕಗಳಿಂದ ಉಗ್ರರ ಸುಭದ್ರ ನೆಲೆಯಾಗಿ ಮಾರ್ಪಟ್ಟಿರುವ ಪಾಕಿಸ್ಥಾನವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಭಾರತದ ವಿರುದ್ಧ ಪಾಕಿಸ್ಥಾನ ನಿರಂತರವಾಗಿ ಉಗ್ರರನ್ನು ಎತ್ತಿಕಟ್ಟಿ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ವಿಚಾರ ಪ್ರಸ್ತಾವವಾದಗಲೆಲ್ಲ ಪಾಕಿಸ್ಥಾನದ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚೀನವನ್ನು ಹೊರತುಪಡಿಸಿದಂತೆ ಅಮೆರಿಕ ಆದಿಯಾಗಿ ವಿಶ್ವದ ಬಹುತೇಕ ಬಲಾಡ್ಯ ರಾಷ್ಟ್ರಗಳು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡುವ ಮತ್ತು ನಿರ್ಬಂಧಗಳನ್ನು ಹೇರುವ ಮೂಲಕ ಉಗ್ರರಿಗೆ ಆಶ್ರಯ ಮತ್ತು ಆರ್ಥಿಕ ನೆರವು ನೀಡುವುದನ್ನು ಸ್ಥಗಿತಗೊಳಿಸುವಂತೆ ಎಚ್ಚರಿಸುತ್ತಲೇ ಬಂದಿವೆ. ಆದರೆ ಪರಿಸ್ಥಿತಿಗನುಗುಣವಾಗಿ ಗೋಸುಂಬೆತನವನ್ನು ಪ್ರದರ್ಶಿಸುತ್ತಾ ಬಂದಿರುವ ಪಾಕ್ ಉಗ್ರರ ಪೋಷಣೆಯನ್ನು ಮುಂದುವರಿಸಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ವಿಶ್ವಶಾಂತಿಗೆ ಭಂಗ ತರುವ ಸಾಧ್ಯತೆಗಳಿವೆ.
ನಿಷೇಧಿತ ಉಗ್ರಗಾಮಿ ಸಂಘಟನೆಯಾಗಿರುವ ಐಸಿಸ್‌ನಲ್ಲಿ ಭಾರತೀಯ ಮೂಲದ 66 ಉಗ್ರರಿದ್ದಾರೆ ಎಂಬ ಕಳವಳಕಾರಿ ವಿಷಯವನ್ನೂ ಅಮೆರಿಕ ತನ್ನ ವರದಿಯಲ್ಲಿ ತಿಳಿಸಿದೆ. ಐಸಿಸ್ ಸಹಿತ ಎಲ್ಲ ಉಗ್ರಗಾಮಿ ಸಂಘಟನೆಗಳ ವಿರುದ್ಧ ಎನ್‌ಐಎ ಸಹಿತ ದೇಶದ ಎಲ್ಲ ಭಯೋತ್ಪಾದನ ನಿಗ್ರಹ ಸಂಸ್ಥೆಗಳು ಹದ್ದುಗಣ್ಣಿರಿಸಿವೆ. ಇದೀಗ ಪಾಕ್ ಪ್ರೇರಿತ ಉಗ್ರಗಾಮಿ ಸಂಘಟನೆಗಳು ಸಂಘಟನೆಗಳಿಗೆ ಸದಸ್ಯರ ಸೇರ್ಪಡೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲ ತಾಣಗಳನ್ನು ಬಳಸತೊಡಗಿರುವುದು ದೇಶದ ತನಿಖಾ ಸಂಸ್ಥೆಗಳ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದೆರಡು ವರ್ಷಗಳಿಂದ ಅಮೆರಿಕ ಮತ್ತು ಭಾರತ ಜತೆಗೂಡಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ನಡುವೆ ಗುಪ್ತಚರ ಮಾಹಿತಿ ವಿನಿಮಯದಲ್ಲಿ ಸಮನ್ವಯದ ಕೊರತೆ ಇರುವುದನ್ನು ವರದಿಯಲ್ಲಿ ಬೆಟ್ಟು ಮಾಡಲಾಗಿದೆ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮತ್ತು 2008ರ ಮುಂಬೈ ದಾಳಿಯ “ಪ್ರೊಜೆಕ್ಟ್ ಮ್ಯಾನೇಜರ್’ ಸಾಜಿದ್ ಮಿರ್ ಸಹಿತ ಹಲವು ಉಗ್ರಗಾಮಿ ನಾಯಕರು ಪಾಕಿಸ್ಥಾನದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ಥಾನ ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಝರಿತವಾಗಿದ್ದರೆ ಬಡಜನರು ಒಂದು ಹೊತ್ತಿನ ಆಹಾರಕ್ಕೂ ಪರದಾಡುತ್ತಿರುವ ಪರಿಸ್ಥಿತಿಯಲ್ಲಿದ್ದರೂ ದೇಶದ ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ಮುಖಂಡರು ತಮ್ಮ ಹಳೆಯ ಚಾಳಿಗೆ ಜೋತು ಬಿದ್ದಂತೆ ಕಂಡುಬರುತ್ತಿದೆ. ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿ ಪಾಕ್ ಉಗ್ರರನ್ನು ಬಳಸಿಕೊಂಡು ಇನ್ನೊಂದು ಷಡ್ಯಂತ್ರ ರೂಪಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಹೀಗಾಗಿ ಭಾರತ ಸರಕಾರ ಮಾತ್ರವಲ್ಲದೆ ಜಾಗತಿಕ ಸಮುದಾಯ ಪಾಕಿಸ್ಥಾನದ ವಿಚಾರದಲ್ಲಿ ಬಿಗು ನಿಲುವನ್ನು ತಾಳಬೇಕಿದೆ.