Advertisement

ಗಗನಯಾತ್ರಿ ತರಬೇತಿ ಕೇಂದ್ರ ಶೀಘ್ರ ಆರಂಭ

11:48 PM Nov 26, 2021 | Team Udayavani |

ಬೆಂಗಳೂರು: ತನ್ನ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಗಗನಯಾತ್ರಿಗಳನ್ನು ಸಿದ್ಧ ಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಬೆಂಗಳೂರಿನಲ್ಲಿ ತಾತ್ಕಾಲಿಕ ಗಗನಯಾತ್ರಿಗಳ ತರಬೇತಿ ಕೇಂದ್ರ ವನ್ನು ಸ್ಥಾಪಿಸಿದೆ.

Advertisement

ಡಿಸೆಂಬರ್‌ ಮೊದಲ ವಾರದಿಂದಲೇ ಇದು ಕಾರ್ಯಾರಂಭಿಸುವ ನಿರೀಕ್ಷೆಯಿದೆ.ಆರಂಭದಲ್ಲಿ ಬೆಂಗಳೂರಿನ ಹಳೆ ಏರ್‌ಪೋರ್ಟ್‌ ರಸ್ತೆಯ ಸಮೀಪ ತಾತ್ಕಾಲಿಕ ಕೇಂದ್ರ ಕಾರ್ಯಾ ರಂಭಗೊಳ್ಳಲಿದ್ದು, ಬಳಿಕ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪೂರ್ಣಪ್ರಮಾಣದ ಕೇಂದ್ರ ಸ್ಥಾಪಿಸಲು ಇಸ್ರೋ ನಿರ್ಧರಿಸಿದೆ. ಸದ್ಯ ತಾತ್ಕಾಲಿಕ ಕೇಂದ್ರದಲ್ಲಿ ಕನಿಷ್ಠ 3 ರೀತಿಯ ಸಿಮ್ಯುಲೇಟರ್‌ಗಳು ಮತ್ತು ಇತರ ತರಬೇತಿ ವ್ಯವಸ್ಥೆಗಳಿದ್ದು, ಪಠ್ಯಕ್ರಮವೂ ಸಿದ್ಧವಾಗಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ:ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಪಠ್ಯಕ್ರಮ ಅಂತಿಮ
ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿ ಐಎಎಂ ಮತ್ತು ಇಸ್ರೋ ಸ್ಯಾಟಲೈಟ್‌ ಇಂಟಿಗ್ರೇಷನ್‌ ಆ್ಯಂಡ್‌ ಟೆಸ್ಟಿಂಗ್‌ ಎಸ್ಟಾಬ್ಲಿಷ್‌ಮೆಂಟ್‌ (ಐಎಸ್‌ಐಟಿಇ) ಸಮೀಪದಲ್ಲೇ ಇರುವ ಯುಆರ್‌ಎಸ್‌ಎಸಿಗೆ ಸೇರಿರುವ ಪ್ರದೇಶದಲ್ಲಿ ತಾತ್ಕಾಲಿಕ ಕೇಂದ್ರ ಸ್ಥಾಪನೆಯಾಗಲಿದೆ. ಇಲ್ಲೇ ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಬೇರೆ ಬೇರೆ ರೀತಿಯ ಸಿಮ್ಯುಲೇಟರ್‌ಗಳಿದ್ದು, ಥಿಯರಿ ತರಗತಿಗಳಿಗೆ ಅಗತ್ಯವಿರುವಷ್ಟು ಸ್ಥಳಾವಕಾಶವೂ ಇದೆ ಎಂದು ಇಸ್ರೋ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ (ಎಚ್‌ಎಸ್‌ಎಫ್ಸಿ) ನಿರ್ದೇಶಕ ಎಸ್‌. ಉಣ್ಣಿಕೃಷ್ಣನ್‌ ನಾಯರ್‌ ಹೇಳಿದ್ದಾರೆ. ತರಬೇತಿಗೆ ಅಗತ್ಯವಿರುವ ಪಠ್ಯಕ್ರಮ ಸಿದ್ಧವಾಗಿದೆ. ಬೋಧಕ ಸಿಬಂದಿಯ ಸಮಿತಿಯಲ್ಲಿ ಐಎಎಂ, ಐಐಎಸ್‌ಸಿ, ಐಐಟಿಯಂಥ ಸಂಸ್ಥೆಯ ಸದಸ್ಯರು, ರಾಕೇಶ್‌ ಶರ್ಮಾರಂಥ ಮಾಜಿ ಗಗನಯಾತ್ರಿಗಳು, ಇಸ್ರೋದ ಮಾಜಿ ನಿರ್ದೇಶಕರು, ಉಪನಿರ್ದೇಶಕರು ಇರಲಿದ್ದಾರೆ ಎಂದಿದ್ದಾರೆ.

ಮುಂದಿನ ತಿಂಗಳಲ್ಲೇ ಗಗನಯಾತ್ರಿಗಳ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದೇವೆ. ಆದರೆ, ಇದೊಂದು ತಾತ್ಕಾಲಿಕ ಕೇಂದ್ರವಾಗಿದ್ದು, ವಿಶೇಷವಾಗಿ ಗಗನಯಾನ ಯೋಜನೆಗಾಗಿ ಸ್ಥಾಪಿಸಲಾಗಿದೆ.
– ಕೆ. ಶಿವನ್‌, ಇಸ್ರೋ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next