Advertisement

ಕರ್ನಾಟಕದಲ್ಲಿ ಕಾಂಗ್ರೆಸ್‌ ಹಣಿಯಲು ಲೈಂಗಿಕ ಹಗರಣ ಆರೋಪದ ಅಸ್ತ್ರ

11:15 AM Nov 11, 2017 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮೇಲಿನ ಲೈಂಗಿಕ ಹಗರಣದ ಆರೋಪ ಪ್ರಕರಣವನ್ನ ಮುಂದಿಟ್ಟುಕೊಂಡು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನ ದುರ್ಬಲಗೊಳಿಸುವ ರಾಜಕೀಯ ತಂತ್ರಗಾರಿಕೆಯನ್ನ ಬಿಜೆಪಿ ಈಗ ಹೆಣೆಯತೊಡಗಿದೆ.

Advertisement

ವೇಣುಗೋಪಾಲ್‌ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಮೇಲೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತು ಚುರುಕುಗೊಳ್ಳುತ್ತಿರುವ ಆ ಪಕ್ಷದ ತಂತ್ರಗಾರಿಕೆ ಬಿಜೆಪಿ ನಾಯಕರು ಸ್ವಲ್ಪಮಟ್ಟಿಗೆ ನಿದ್ದೆಗೆಡುವಂತೆ ಮಾಡಿದೆ. ಆದ್ದರಿಂದ ವೇಣುಗೋಪಾಲ್‌ ವಿರುದ್ಧ ಹೋರಾಟ ನಡೆಸುವ ಮೂಲಕ ಕಾಂಗ್ರೆಸ್‌ಗೆ ಮುಜುಗರದ ಪರಿಸ್ಥಿತಿ ಉಂಟುಮಾಡಿ ಆ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ತಂತ್ರ ಈ ಹೋರಾಟದ ಹಿಂದಿದೆ ಎಂದು ಮೂಲಗಳು ಹೇಳಿವೆ.

ವೇಣುಗೋಪಾಲ್‌ ಅವರಿಗಿಂತ ಮುಂಚೆ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ ಸಿಂಗ್‌ ಅವರ ಅವಧಿಯಲ್ಲಿ ಕಾಂಗ್ರೆಸ್‌ ಆಗಾಗೆ ಎಡವುತ್ತಿತ್ತು. ಬಿಜೆಪಿಗೆ ಸರಿಸಮನಾಗಿ ತಂತ್ರಗಾರಿಕೆ ರೂಪಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ವೇಣುಗೋಪಾಲ್‌ ಜವಾಬ್ದಾರಿ ವಹಿಸಿಕೊಂಡ ಮೇಲೆ ಕಾಂಗ್ರೆಸ್‌ನ ಕಾರ್ಯವೈಖರಿಯೇ ಬದಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಪಕ್ಷ ನಡೆಸುತ್ತಿರುವ ತಂತ್ರಗಳಿಗೆ ಕಾಂಗ್ರೆಸ್‌ ಪ್ರತಿತಂತ್ರಗಳನ್ನು ಹೂಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿರುವ ವೇಣುಗೋಪಾಲ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವಂತೆ ಹೋರಾಟ ಮಾಡಿ ಕಾಂಗ್ರೆಸ್‌ಗೆ ಮುಜುರಗದ ಸನ್ನಿವೇಶ ಸೃಷ್ಟಿಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ದಿಗ್ವಿಜಯ್‌ ಸಿಂಗ್‌ ಅವಧಿಯಲ್ಲಿ ಜಡ್ಡುಗಟ್ಟಿದ್ದ ಕಾಂಗ್ರೆಸ್‌ ವೇಣುಗೋಪಾಲ್‌ ಬಂದ ನಂತರ ಹೆಚ್ಚು ಸಕ್ರಿಯವಾಗುತ್ತಿದೆ. ಬಿಜೆಪಿ ರೂಪಿಸುತ್ತಿರುವ ರಾಜಕೀಯ ತಂತ್ರಗಾರಿಕೆಗೆ ಪ್ರತಿತಂತ್ರಗಳನ್ನು ಅಚ್ಚುಕಟ್ಟಾಗಿ ರೂಪಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಸದೃಢವಾಗಲು ಕಾರಣವಾಗಿರುವ “ಕೇಡರ್‌’ಗೆ ಕಾಂಗ್ರೆಸ್‌ ಕೈ ಹಾಕಿದೆ. ಇದು ಹೀಗೆಯೇ ಮುಂದುವರಿದರೆ ತಳಮಟ್ಟದಲ್ಲಿ ಕಾಂಗ್ರೆಸ್‌ ಕೇಡರ್‌ ಭದ್ರವಾಗಲಿದೆ ಎಂಬುದು ಬಿಜೆಪಿ ನಾಯಕರ ಆತಂಕ.

Advertisement

ಈ ಹಿನ್ನೆಲೆಯಲ್ಲಿ ವೇಣುಗೋಪಾಲ್‌ ಅವರನ್ನು ಹೇಗಾದರೂ ಮಾಡಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಜವಾಬ್ದಾರಿಯಿಂದ ದೂರವಿಟ್ಟರೆ ಹೊಸದಾಗಿ ಜವಾಬ್ದಾರಿ ವಹಿಸಿಕೊಳ್ಳುವವರಿಗೆ ಪಕ್ಷವನ್ನು ಹತೋಟಿಗೆ ತೆಗೆದುಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಅಷ್ಟರಲ್ಲಿ ಚುನಾವಣೆ ಸಮೀಪಿಸುವುದರಿಂದ ಅದು ಕಾಂಗ್ರೆಸ್‌ಗೆ ಸಮಸ್ಯೆ ತಂದೊಡಲಿದ್ದು, ಬಿಜೆಪಿಗೆ ಅನುಕೂಲವಾಗುತ್ತದೆ.

ಹೀಗಾಗಿ ವೇಣುಗೋಪಾಲ್‌ ಅವರನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಜವಾಬ್ದಾರಿಯಿಂದ ವಾಪಸ್‌ ಕರೆಸಿಕೊಳ್ಳುವಂತೆ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ. ಆದರೆ, ಹೋರಾಟಕ್ಕೆ ಮಣಿದು ಅವರನ್ನು ಕರೆಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಬಿಜೆಪಿ ನಾಯಕರಿಗೂ ಇಲ್ಲ. ಆದರೂ ವೇಣುಗೋಪಾಲ್‌ ಮತ್ತು ಕಾಂಗ್ರೆಸ್‌ಗೆ ಮುಜುಗರ ತರಲು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ, ಪಕ್ಷದ ರಾಷ್ಟ್ರೀಯ ನಾಯಕರ ಮೇಲೂ ಒತ್ತಡ ತಂದು ದೆಹಲಿ ಮಟ್ಟದಲ್ಲಿ ಈ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡುವ ಮೂಲಕ ಒತ್ತಡ ಹೇರಲು ಕೂಡ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next