Advertisement

ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಕೆಇಎ: 1,209 ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

09:24 PM Mar 04, 2023 | Team Udayavani |

ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 26 ಬೋಧನಾ ವಿಷಯಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಸಲಾದ ಅಂತಿಮ ನೇಮಕಾತಿ ಪಟ್ಟಿಯನ್ನು ಶುಕ್ರವಾರ (ಮಾರ್ಚ್ 3) ಪ್ರಕಟಿಸಲಾಗಿದೆ. ಇದನ್ನು ಮುಂದಿನ ಪ್ರಕ್ರಿಯೆಗಳಿಗೆ ಅನುಕೂಲವಾಗುವಂತೆ ಸೋಮವಾರದಂದು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

Advertisement

ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂತಿಮ ಪಟ್ಟಿಯಲ್ಲಿ 1,209 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದ 33 ಹುದ್ದೆಗಳಿಗೆ ಸರಕಾರಿ ಮಾನದಂಡಗಳು ಮತ್ತು ಮೀಸಲಾತಿ ನಿಯಮಗಳ ಪ್ರಕಾರ ಸೂಕ್ತ/ಅರ್ಹ ಅಭ್ಯರ್ಥಿಗಳು ಲಭ್ಯ ಇರುವುದಿಲ್ಲ. ಹೀಗಾಗಿ ಈ ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ಇವುಗಳನ್ನು ಬೇರೆ ವರ್ಗದ ಅಭ್ಯರ್ಥಿಗಳಿಗೆ ಕೊಡಲು ನಿಯಮಗಳ ಪ್ರಕಾರ ಅವಕಾಶವಿಲ್ಲ ಎಂದಿದ್ದಾರೆ.

ಖಾಲಿ ಇರುವ ಹುದ್ದೆಗಳಲ್ಲಿ ಜೀವ ರಸಾಯನಶಾಸ್ತ್ರ 1, ಸಸ್ಯಶಾಸ್ತ್ರ 1, ರಸಾಯನಶಾಸ್ತ್ರ 6, ಕಂಪ್ಯೂಟರ್ ಸೈನ್ಸ್ 3, ಅರ್ಥಶಾಸ್ತ್ರ 4, ಫ್ಯಾಶನ್‌ ತಂತ್ರಜ್ಞಾನ 1, ಹಿಂದಿ 1, ಇತಿಹಾಸ 2, ಗಣಿತ 4, ಮೈಕ್ರೋಬಯಾಲಜಿ 2, ಭೌತಶಾಸ್ತ್ರ 1, ರಾಜ್ಯಶಾಸ್ತ್ರ 2, ಸ್ಟ್ಯಾಟಿಸಿಕ್ಸ್ 1 ಮತ್ತು ಉರ್ದು ವಿಷಯದಲ್ಲಿ 4 ಹುದ್ದೆಗಳು (ಒಟ್ಟು 33) ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೆಇಎ ಈ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ನೆಟ್‌/ಸ್ಲೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಪರಿಗಣಿಸಲಾಗಿದೆ. ಗರಿಷ್ಠ ಅಂಕ ಗಳಿಸಿದವರು ಸರಕಾರದ ನಿಯಮಗಳನುಸಾರ ರೋಸ್ಟರ್ ಮಾನದಂಡದಂತೆ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ನೇಮಕವಾದವರಲ್ಲಿ 522 ಅಭ್ಯರ್ಥಿಗಳು ನೆಟ್ (NET), 609 ಮಂದಿ ಸ್ಲೆಟ್ (SLET), 78 ಮಂದಿ ಪಿಎಚ್ ಡಿ ಮಾಡಿದವರು ಇದ್ದಾರೆ ಎಂದು ಅವರು ವಿವರಿಸಿದ್ದಾರೆ.

Advertisement

ಈ ನೇಮಕಾತಿ ಪ್ರಕ್ರಿಯೆಗೆ 2021ರ ಅಕ್ಟೋಬರ್ 10ರಂದು ಚಾಲನೆ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ನಂತರ 2022ರ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ 2022ರ ಸೆ.10ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ದಾಖಲಾತಿಗಳ ಪರಿಶೀಲನೆಯ ನಂತರ, ಈ ವರ್ಷದ ಜ.30ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಈಗ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪರೀಕ್ಷಾ ಪ್ರಾಧಿಕಾರಕ್ಕೆ ಸಚಿವರ ಮೆಚ್ಚುಗೆ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದಕ್ಷತೆಯು ಅಭಿನಂದನಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಎಷ್ಟೋ ವರ್ಷಗಳಿಂದ ನಡೆದೇ ಇಲ್ಲ. ಇದು ಬೋಧನಾಂಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನು ಪರಿಗಣಿಸಿ, ಪ್ರಸ್ತುತ ಸರಕಾರವು ಈ ನೇಮಕಾತಿ ನಡೆಸುವ ನಿರ್ಧಾರ ತೆಗೆದುಕೊಂಡಿತು. ಈ ಇಡೀ ಪ್ರಕ್ರಿಯೆಯನ್ನು ಯಾವ ಅಕ್ರಮಕ್ಕೂ ಆಸ್ಪದ ಕೊಡದಂತೆ, ನಡೆಸಲಾಗಿದೆ. ಇದರ ಲಾಭ ವಿದ್ಯಾರ್ಥಿ ಸಮುದಾಯಕ್ಕೆ ಸಿಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸಹಸ್ರನಾರಿಕೇಳ ಯಾಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next