ಕನ್ನಡದಲ್ಲಿ ಅನೇಕ ಶೀರ್ಷಿಕೆಗಳ ಕುರಿತು ಸಿನಿಮಾಗಳು ಬಂದಿವೆ. ಶೀರ್ಷಿಕೆಗಳ ಮೂಲಕವೇ ಗಮನಸೆಳೆದ ಅದೆಷ್ಟೋ ಸಿನಿಮಾಗಳೂ ಇವೆ. ಕೇವಲ ಶೀರ್ಷಿಕೆಯಷ್ಟೇ ಅಲ್ಲ, ಸಿನಿಮಾ ಬಿಡುಗಡೆಯಾದ ನಂತರವೂ ಸಾಕಷ್ಟು ಗಮನಸೆಳೆದ ಉದಾಹರಣೆಗಳೂ ಇವೆ. ಈಗ ಇಷ್ಟೊಂದು ಪೀಠಿಕೆ ಯಾಕೆ ಅನ್ನುವುದಕ್ಕೆ ಇಲ್ಲೊಂದು ಹೊಸ ಬಗೆಯ ಶೀರ್ಷಿಕೆಯ ಸಿನಿಮಾವೊಂದು ಅನೌನ್ಸ್ ಆಗಿದೆ. ಆ ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ.
ಅಂದಹಾಗೆ, ಆ ಚಿತ್ರಕ್ಕಿಟ್ಟಿರುವ ಹೆಸರು “ಅಸಿಸ್ಟೆಂಟ್ ಡೈರೆಕ್ಟರ್ ‘. ಈ ಶೀರ್ಷಿಕೆ ಕೇಳಿದವರಿಗೆ ಇದೊಂದು ಸಿನಿಮಾದೊಳಗಿನ ಸಿನಿಮಾ ಇರಬಹುದೇ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ನಿಜ, ಇದು ಸಿನಿಮಾ ರಂಗದ ಸಹನಿರ್ದೇಶಕರ, ಸಹಾಯಕ ನಿರ್ದೇಶಕರ ಕುರಿತಾದ ಕಥಾಹಂದರ ಹೊಂದಿರುವಂಥದ್ದು. ಕನ್ನಡ ಸಿನಿಮಾ ಮಾತ್ರವಲ್ಲ, ಚಿತ್ರರಂಗದಲ್ಲೇ ಈ ಅಸಿಸ್ಟೆಂಟ್ ಡೈರೆಕ್ಟರ್‌ಗಳದ್ದು ಮಹತ್ವದ ಪಾತ್ರ ಇದ್ದೇ ಇರುತ್ತೆ. ಒಂದು ನೀಟ್ ಸಿನಿಮಾ ಆಗೋಕೆ ಮುಖ್ಯವಾಗಿ ಈ ಅಸಿಸ್ಟೆಂಟ್ ಡೈರೆಕ್ಟರ್‌ಗಳು ಬೇಕೇ ಬೇಕು.
ಪ್ರೀ ಪ್ರೊಡಕ್ಷನ್‌ನಿಂದ ಹಿಡಿದು, ಪೋಸ್ಟ್ ಪ್ರೊಡಕ್ಷನ್‌ವರೆಗೂ ಇವರು ಇರಬೇಕು. ಕಥೆ, ಚಿತ್ರಕಥೆ ಸೇರಿದಂತೆ ಚಿತ್ರೀಕರಣ ಶುರುವಾಗಿ, ಮುಗಿಯೋತನಕ ಇವರ ಶ್ರಮ ಇರುತ್ತೆ. ಅವರ ನೋವು-ನಲಿವು, ತಲ್ಲಣ, ನಿರ್ದೇಶಕರಾಗಬೇಕು ಎಂಬ ತನ್ನೊಳಗಿರುವ ಆಸೆ ಆಕಾಂಕ್ಷೆ ಅಪಾರ. ಆದರೆ, ಅವೆಲ್ಲವನ್ನು ಸಾಕಾರಗೊಳಿಸಿಕೊಳ್ಳಲು ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಅಂತಹ ನೂರಾರು ಸಮಸ್ಯೆ ಅನುಭವಿಸಿ ಅಸಿಸ್ಟೆಂಟ್ ಡೈರೆಕ್ಟರ್ ಕುರಿತ ಒಂದೊಳ್ಳೆಯ ಚಿತ್ರ ತಯಾರಾಗುತ್ತಿದೆ.
ಅಂದಹಾಗೆ, ಈ ಚಿತ್ರಕ್ಕೆ ದಿವಾಕರ್ ಡಿಂಡಿಮ ನಿರ್ದೇಶಕರು. ಇವರು ಕನ್ನಡ ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದಲೂ ಇದ್ದವರು. ಸಾಕಷ್ಟು ಅನುಭವ ಪಡೆದುಕೊಂಡೇ ಇದೀಗ ಅಸಿಸ್ಟೆಂಟ್ ಡೈರೆಕ್ಟರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ಳೋಕೆ ಅಣಿಯಾಗುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸಂತೋಷ್ ಆಶ್ರಯ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.ಸದ್ಯಕ್ಕೆ ಒಂದು ಪೋಸ್ಟರ್ ಮಾತ್ರ ಬಿಡುಗಡೆ ಮಾಡಿರುವ ನಿರ್ದೇಶಕರು, ತಾಂತ್ರಿಕ ವರ್ಗ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿರುವ ಈ ಚಿತ್ರ ಲಾಕ್‌ಡೌನ್ ನಂತರ ತನ್ನ ಕೆಲಸಕ್ಕೆ ಮುಂದಾಗಲಿದೆ.