ಕುಷ್ಟಗಿ: ಕುಷ್ಟಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು, ಕುರುಕ್ಷೇತ್ರ ದೊಡ್ಡಾಟದಲ್ಲಿ ದುರ್ಯೋಧನ ಪಾತ್ರದಿಂದ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.
ಇಲ್ಲಿಗೆ ಸಮೀಪದ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದಲ್ಲಿ ಯುಗಾದಿ ಪಾಡ್ಯ ಪ್ರಯುಕ್ತ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದಲ್ಲು ಕುರುಕ್ಷೇತ್ರ ದೊಡ್ಡಾಟ ಆಯೋಜಿಸಲಾಗಿತ್ತು. ಇದರಲ್ಲಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಪಾತ್ರ ನಿರ್ವಹಿಸಿರುವುದೇ ವಿಶೇಷ.
ರಾಘವೇಂದ್ರ ಕೊಂಡಗುರಿ ಅವರು ದುರ್ಯೋಧನ ಪಾತ್ರದಲ್ಲಿ ಅಬ್ಬರಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡಾಟ ಕಲೆ ಗಂಡು ಕಲೆಯಾಗಿದೆ. ಇದರ ಕಲಿಕೆಗೆ ಬಹಳ ಗಟ್ಟಿತನ, ಶಕ್ತಿ, ಜ್ಞಾನಬೇಕು. ಇದನ್ನು ಕಲಿತರೆ ಇದರ ಕಲೆ, ಸಾಹಿತ್ಯ, ಸಂಗೀತದಲ್ಲಿ ದುಃಖ ಮರೆಸುವಂತಹ, ಕಷ್ಟವನ್ನು ಮರೆಸುವಂತಹ ಶಕ್ತಿ ಇದೆ. ಆದರೆ ಇಂದಿನ ಯುವಕರು ದೊಡ್ಡಾಟ,ಸಣ್ಣಾಟ ಜಾನಪದ ಪ್ರಕಾರಗಳಿಂದ ವಿಮುಖರಾಗುವ ದಿನಮಾನದಲ್ಲಿ ಅಧಿಕಾರಿಯಾಗಿ ದೊಡ್ಡಾಟದಲ್ಲಿ ಪಾತ್ರ ಮಾಡಿರುವುದು ಸಣ್ಣ ವಿಷಯವಲ್ಲ. ಈ ಕುರುಕ್ಷೇತ್ರ ದೊಡ್ಡಾಟಕ್ಕೆ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಹಾಗೂ ಪ್ರೇಕ್ಷಕರಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಸಹಾಯಕ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು, ದೊಡ್ಡಾಟ ಮೊದಲಿನಿಂದಲೂ ಅಭಿನಯಿಸುವ ಅಭಿಲಾಷೆ ಇತ್ತು. 2015 ರಲ್ಲಿ ಇದೇ ದುರ್ಯೋಧನ ಪಾತ್ರ ನಿರ್ವಹಿಸಿದ್ದೆ. ಇದೀಗ 7 ವರ್ಷದ ಬಳಿಕ ಅದೇ ಪಾತ್ರ ನಿರ್ವಹಿಸಿದ್ದೇನೆ. ಮಾರ್ಚ ಕೊನೆಯ ಆರ್ಥಿಕ ವರ್ಷದಲ್ಲಿ ಕಛೇರಿಯ ಕೆಲಸದ ಒತ್ತಡದಲ್ಲೂ ಐದಾರು ದಿನದ ತಾಲೀಮು ನಡೆಸಿದ್ದೇ ಎಂದರು.
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ