ತಾಳಿಕೋಟೆ: ಮಗುವಿನ ಲೀವರ್ ನಲ್ಲಿ ಕಾಣಸಿಕೊಂಡ ದೋಷದಿಂದ ಅಘಾತಗೊಂಡು ಹಣ ಸಂಗ್ರಹಕ್ಕಾಗಿ ಅಲೆದಾಡುತ್ತಿರುವ ಕುಟುಂಬಕ್ಕೆ ಮಾನವೀಯತೆಯ ನೆರವು ಒದಗಿಸಲು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಬೀದಿ ಬೀದಿಯಲ್ಲಿ ಹಣ ಸಂಗ್ರಹಕ್ಕೆ ಚಾಲನೆ ನೀಡಿದರು.
ಮಗುವಿನ ಸಮಸ್ಯೆ ಕುರಿತು ಪತ್ರಿಕೆಯಲ್ಲಿ ಕರುಳ ಕುಡಿ ಆಲೆದಾಟ ಎಂಬ ಶಿರ್ಷಿಕೆಯಡಿ ರೇಣುಕಾ ಪರಮಾನಂದ ಕಲ್ಲೂರ ದಂಪತಿಯ ಕರುಳ ಕುಡಿ ಸುದರ್ಶನನ ನೆರವಿನ ಮೊರೆಗಾಗಿ ಮನಕುಲಕುವ ವರದಿ ಪ್ರಕಟಿಸಿದ ಪರಿಣಾಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ರಸ್ತೆ ಬದಿಯಲ್ಲಿಯ ಫುಟ್‌ಪಾತ್ ವ್ಯಾಪಾರಸ್ಥರ ಬಳಿ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ ಕೈಲಾದ ಮಟ್ಟಿಗೆ ನೆರವಿನ ಹಸ್ತ ಚಾಚಲು ವಿನಂತಿಸಿದರು.
ಮಗನ ಲೀವರ್‌ನಲ್ಲಿ ಕಾಣಿಸಿಕೊಂಡಿರುವ ದೋಷದಿಂದ ಲೀವರ್ ಬದಲಾವಣೆ ಅವಶ್ಯವಾಗಿದ್ದು ತಾಯಿಯೇ ತನ್ನ ಜೀವ ಒತ್ತೆ ಇಟ್ಟು ಲೀವರ್ ನೀಡಲು ಮುಂದಾಗಿದ್ದಾರೆ. ಲೀವರ್ ಬದಲಾವಣೆಗೆ ಸುಮಾರು 15ರಿಂದ 20 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಹಣ ಹೊಂದಿಸುವ ಸಲುವಾಗಿ ಪಾಲಕರು ದಾನಿಗಳ ಮನೆ ಬಾಗಿಲಿಗೆ ತಿರುಗಾಡುತ್ತಿದ್ದರೂ ದಾನಿಗಳಿಂದ ಸ್ಪಂದನೆ ಅಷ್ಟಕಷ್ಟೆಯಾಗುತ್ತಿದೆ. ದೊಡ್ಡ ಮೊತ್ತದ ಹಣ ಸಂಗ್ರಹ ಆಗುತ್ತದೆ ಇಲ್ಲವೋ ಎಂಬ ಅಘಾತ ನಮ್ಮಲ್ಲಿ ಕಾಡುತ್ತಿದೆ ಎಂದು ಸುದರ್ಶನನ ತಾಯಿ ರೇಣುಕಾ ಕಲ್ಲೂರ ಅವರು ಪತ್ರಿಕೆ ಸಂಪರ್ಕಿಸಿದಾಗ ತಿಳಿಸಿದ್ದಾರೆ.
ಮಗನನ್ನು ಬದುಕಿಸಿಕೊಳ್ಳಲು ಅಲೆದಾಡುತ್ತಿರುವ ಕಲ್ಲೂರ ಕುಟುಂಬಕ್ಕೆ ನೆರವು ಒದಗಿಸುವ ಸಲುವಾಗಿ ಮಾನವೀಯತೆ ಆಧಾರದ ಮೇಲೆ ಕರವೇ ಕಾರ್ಯಕರ್ತರೆಲ್ಲರೂ ಬೀದಿ ಬೀದಿಯಲ್ಲಿ ದೇಣಿಗೆ ಸಂಗ್ರಹದ ಡಬ್ಬಿಯೊಂದಿಗೆ ಸಂಚರಿಸಿ ಹಣ ಸಂಗ್ರಹಿಸಲು ಮುಂದಾಗಿದ್ದು ಮಾನವೀಯ ಮೌಲ್ಯ ಎತ್ತಿ ಹಿಡಿಯುವಂತಹ ಕಾರ್ಯ ಎಂಬ ಮಾತುಗಳು ಕೇಳಿ ಬಂದವು.
ನಿಸಾರ್ ಬೇಪಾರಿ, ಜೈಭೀಮ ಮುತ್ತಗಿ, ಪ್ರಭು ಪಾಟೀಲ, ಸೌರಭ ಕುಲಕರ್ಣಿ, ರಾಘವೇಂದ್ರ ಸೋನಾರ, ನಭಿ ಲಾಹೋರಿ, ಸಾವಿತ್ರಿ ತಳವಾರ, ಶ್ವೇತಾ ಯರಗಲ್ಲ, ಅಬುಬಕರ ಲಾಹೋರಿ, ಸತೀಶ ಮೋಹಿತೆ, ನಾಗರಾಜ ಪತ್ತಾರ, ಭವಾನಿ ಅಂಬಿಗೇರ, ಮನೋಜ್ ಹಂಚಾಟೆ, ಗಿರೀಶ ಕನಕರಡ್ಡಿ, ಅನಿಲ ಬಡಿಗೇರ, ಟಿಪ್ಪು ಕಾಳಗಿ, ಅಜೀಜ್ ಮನ್ಸೂರ್, ಮುತ್ತು ಧೂಳೇಕರ, ಮಡಿವಾಳ ಕೊಂಡಗೂಳಿ,
ರಾಜು ಮೂಕಿಹಾಳ ಭಾಗವಹಿಸಿದ್ದರು.
ಮಗನನ್ನು ಬದುಕಿಸಿಕೊಳ್ಳಲು ಕಲ್ಲೂರ ಕುಟುಂಬದವರ ಅಲೆದಾಟದ ವಿಷಯ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡೆವು. ನಮ್ಮ ಸಂಘಟನೆ ಪರ ಸಹಾಯ ಹಸ್ತ ನೀಡಬೇಕೆಂಬ ಉದ್ದೇಶದೊಂದಿಗೆ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಹಣ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ಆರ್ಥಿಕ ನೆರವು ನೀಡುವವರು ಕರವೇ ಕಾರ್ಯಕರ್ತರನ್ನು ಸಂಪರ್ಕಿಸಿ ನೆರವು ನೀಡಬಹುದು.
ನಿಸಾರ್ ಬೇಪಾರಿ, ಕರವೇ ತಾಲೂಕಾಧ್ಯಕ್ಷ