ನವದೆಹಲಿ: ದೇಶದ ಆಸ್ತಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಲಿ ಅಥವಾ ಬಿಜೆಪಿಗೆ ಸೇರಿದ್ದಲ್ಲ. ಅವುಗಳನ್ನು ತಮ್ಮ ಇಚ್ಛೆಗೆ ಬಂದಂತೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ:ಕಾಂಗ್ರೆಸ್ ಅವಧಿಯಲ್ಲಿ ಇಂತಹ ಘಟನೆಗಳು ಆಗಿರಲಿಲ್ವಾ?: ಆರಗ ಜ್ಞಾನೇಂದ್ರ ತಿರುಗೇಟು
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯ(ಎನ್ ಎಂಪಿ)ನ್ನು ಟೀಕಿಸಿರುವ ಮಮತಾ ಬ್ಯಾನರ್ಜಿ, ಇದೊಂದು ಆಘಾತಕಾರಿ ಹಾಗೂ ದುರದೃಷ್ಟಕರ ನಿರ್ಧಾರ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಖಾಸಗಿಯವರಿಗೆ ಈ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿಪಕ್ಷಗಳನ್ನು ಸೋಲಿಸಲು ಹಣ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ಮಮತಾ ಬ್ಯಾನರ್ಜಿ ಆರೋಪಿಸಿದರು.
ಈ ಎಲ್ಲಾ ಆಸ್ತಿಗಳು ದೇಶಕ್ಕೆ ಸೇರಿದ್ದು, ಇದು ಪ್ರಧಾನಿ ಮೋದಿ ಅಥವಾ ಬಿಜೆಪಿ ಪಕ್ಷದ್ದಲ್ಲ. ಕೇಂದ್ರ ಸರ್ಕಾರ ತಮ್ಮ ಇಚ್ಛೆಗೆ ಅನುಗುಣವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಕೇಂದ್ರದ ನಿರ್ಧಾರದ ವಿರುದ್ಧ ಇಡೀ ದೇಶವೇ ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಪಶ್ಚಿಮಬಂಗಾಳ ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ, ಒಂದು ವೇಳೆ ದೇಶದ ಆಸ್ತಿಯ ಬಗ್ಗೆ ಕಾಳಜಿ ಇದ್ದರೆ, ಕಳೆದ ಹತ್ತು ವರ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಹಲವಾರು ಆಸ್ತಿಗಳನ್ನು ಯಾಕೆ ಮಾರಾಟ ಮಾಡಿದೆ? ಈ ಎಲ್ಲಾ ಆಸ್ತಿ ತೃಣಮೂಲ ಕಾಂಗ್ರೆಸ್ ನದ್ದೋ ಅಥವಾ ರಾಜ್ಯ ಸರ್ಕಾರಕ್ಕೆ ಸೇರಿದ್ದೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.