Advertisement

ಕೃಷ್ಣಾ ಮೇಲ್ದಂಡೆ ಯೋಜನೆ ಬೇಡಿಕೆಗೆ ಸಿಎಂ ಅಸ್ತು

09:51 AM Mar 07, 2020 | Sriram |

ವಿಧಾನಸಭೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಹತ್ತು ಸಾವಿರ ಕೋಟಿ ರೂ. ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

Advertisement

ಶುಕ್ರವಾರ ಸದನ ಪ್ರಾರಂಭವಾಗುತ್ತಿದ್ದಂತೆ ಸ್ವಯಂ ಎದ್ದು ನಿಂತು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುರುವಾರ ಸಹ ಸಭೆ ನಡೆಸಿದ್ದೇನೆ ಎಂದು ಹೇಳಿದರು.

ಯೋಜನೆಯ ಅನುಷ್ಟಾನಕ್ಕೆ ಹತ್ತು ಸಾವಿರ ಕೋಟಿ ರೂ. ನಿಗದಿಪಡಿಸಲಾಗುವುದು. ಮೂರು ವರ್ಷಗಳಲ್ಲಿ ಬಾಧಿತ 27 ಹಳ್ಳಿಗಳ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನೀವು ಘೋಷಿಸಿರುವುದರಿಂದ ಖುಷಿಯಾಗಿದೆ. ಬಜೆಟ್‌ನಲ್ಲಿ ಯಾಕೆ ಪ್ರಕಟಿಸಿಲ್ಲ, ಆಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು. ಹತ್ತು ಸಾವಿರ ಕೋಟಿ ರೂ. ಹೇಳಿದ್ದೀರಿ, ಅದಕ್ಕೆ ನನ್ನ ತಕಾರರು ಇಲ್ಲ, ದುಡ್ಡು ಎಲ್ಲಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಯಡಿಯೂರಪ್ಪ ಅವರು ಹೊಂದಾಣಿಕೆ ಮಾಡಲಾಗುವುದು. ಕೇಂದ್ರಕ್ಕೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೂ ಪ್ರಯತ್ನಿಸಲಾಗುವುದು. ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಹೇಳಬಹುದಿತ್ತು, ಆದರೆ, ಇದು ಭರವಸೆ ಆಗಬಾರದು . ನಾನೂ ಕೂಡ ಬಾಗಲಕೋಟೆ ಜಿಲ್ಲೆಯವರನೇ, ಬಾದಾಮಿ ಕ್ಷೇತ್ರ ಪ್ರತಿನಿಧಿಸುವವನೇ ಎಂದು ಹೇಳಿದರು.

Advertisement

ಆಗ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಹಿಂದಿನ ಸರ್ಕಾರಗಳು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಹಣ ಮೀಸಲಿಟ್ಟಿದ್ದರೆ ಈಗ ಇಂತಹ ಸ್ಥಿತಿ ಇರುತ್ತಿರಲಿಲ್ಲ. ಈಗಲಾದರೂ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಗುರುವಾರ ಬಜೆಟ್‌ ಮಂಡನೆಯ ನಂತರ ಎಂ.ಬಿ.ಪಾಟೀಲ್‌ ಸಹಿತ ಆ ಭಾಗದ ಶಾಸಕರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಕುರಿತು, ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಗಳ ಬಗ್ಗೆ ಯಾಕೆ ಮಾತನಾಡಿಲ್ಲ, 20 ಸಾವಿರ ಕೋಟಿ ರೂ. ಬೇಡಿಕೆ ಇತ್ತು ಎಲ್ಲಿ ಎಂದು ಪ್ರಶ್ನಿಸಿ ಲೇವಡಿ ಮಾಡಿದ್ದರು.

ಇದಾದ ನಂತರ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಗೆ ಹಣ ಹೊಂದಿಸುವ ಕುರಿತು ಮನವಿ ಮಾಡಿದ್ದರು. ಇಲ್ಲದಿದ್ದರೆ ಆ ಭಾಗದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ, ಯಡಿಯೂರಪ್ಪ ಅವರು ಶುಕ್ರವಾರ ಸದನ ಪ್ರಾರಂಭವಾಗುತ್ತಿದ್ದಂತೆ ಘೋಷಿಸಿದರು. ನಂತರ ಟ್ವೀಟ್‌ ಸಹ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next