Advertisement

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

11:56 PM Dec 17, 2024 | Team Udayavani |

ಬೆಳಗಾವಿ: ಹಾಲು ಉತ್ಪಾದಕರಿಗೆ ನೀಡಲು ಬಾಕಿಯಿರುವ ಪ್ರೋತ್ಸಾಹ ಧನ ಪಾವತಿಸಲು 200 ಕೋಟಿ ರೂ. ನೀಡುವುದೂ ಸೇರಿ ವಿವಿಧ ಇಲಾಖೆಗಳಲ್ಲಿನ ಹೊಸ ಸೇವೆ ಹಾಗೂ ಅನುದಾನ ಕೊರತೆ ಹೊಂದಾಣಿಕೆ ದೃಷ್ಟಿಯಿಂದ 5317.83 ಕೋಟಿ ರೂ. ಮೊತ್ತದ ಪೂರಕ ಅಂದಾಜು ಹಾಗೂ ಧನವಿನಿಯೋಗ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಸೂದೆಯನ್ನು ಮಂಡಿಸಿ, ಒಪ್ಪಿಗೆಗಾಗಿ ಸದನದ ಅನುಮತಿ ಕೋರಿದರು. ಎರಡನೇ ಕಂತಿನ ಪೂರಕ ಅಂದಾಜು 5317.83 ಕೋಟಿ ರೂ.ನಷ್ಟಾಗಿದ್ದು, ಇದು ಒಟ್ಟು ಆಯವ್ಯಯ ಗಾತ್ರದ ಶೇ. 1.39ರಷ್ಟಾಗುತ್ತದೆ. ಸಂವಿಧಾನ ಬದ್ಧವಾಗಿ ಪ್ರದತ್ತವಾದ ಅಧಿಕಾರ ಆಧರಿಸಿ 100 ಕೋಟಿ ರೂ.ಗಿಂತ ಹೆಚ್ಚು ಅನುದಾನ ಬೇಡುವ ಇಲಾಖೆಗಳಿಗೆ ಈ ಹಣವನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.

ಪೂರಕ ಅಂದಾಜಿನಲ್ಲಿ 2,540.17 ಕೋಟಿ ರೂ. ರಾಜಸ್ವ ವೆಚ್ಚ ಹಾಗೂ 2,777.66 ಕೋಟಿ ರೂ.ನ್ನು ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಲಾಗುತ್ತದೆ. ಮೀಸಲು ನಿಧಿಯಿಂದ 2,304.95 ಕೋಟಿ ರೂ. ಹಾಗೂ 1,199.94 ಕೋಟಿ ರೂ.ನ್ನು ಕೇಂದ್ರದ ಸಹಾಯಧನದಿಂದ ಭರಿಸಲಾಗುತ್ತದೆ. ಹೊರ ಹೋಗುವ ನಿವ್ವಳ ನಗದು ಮೊತ್ತ 1812.94 ಕೋಟಿ ರೂ.ನಷ್ಟಿದೆ ಎಂದು ಸ್ಪಷ್ಟಪಡಿಸಿದರು.

ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 500 ಕೋಟಿ ರೂ.,ಗ್ರಾಮೀಣ ವಿದ್ಯುತ್‌ ಬಾಕಿ ಚುಕ್ತಾಕ್ಕೆ 400 ಕೋಟಿ ರೂ., ಜಿಲ್ಲಾ ರಸ್ತೆ ಅಭಿವೃದ್ಧಿಗೆ 393 ಕೋಟಿ ರೂ., ವಸತಿ ಶಾಲೆಗಳ ನಿರ್ಮಾಣಕ್ಕೆ 250 ಕೋಟಿ ರೂ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿ ಯೋಜನೆಗೆ 241 ಕೋಟಿ ರೂ., ಪಿಎಂ ಆವಾಸ್‌ ಯೋಜನೆಗೆ 218 ಕೋಟಿ ರೂ., ಹಾಲು ಉತ್ಪಾದಕರ ಬಾಕಿ ಹಣ ನೀಡುವುದಕ್ಕೆ 200 ಕೋಟಿ ರೂ., ಗ್ರಂಥಾಲಯ ಡಿಜಿಟಲೀಕರಣಕ್ಕೆ 132 ಕೋಟಿ ರೂ., ಪ್ರವಾಸಿ ತಾಣ ಅಭಿವೃದ್ಧಿಗೆ 131 ಕೋಟಿ ರೂ., ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 117 ಕೋಟಿ ರೂ., ಸೇರಿ ವಿವಿಧ ಇಲಾಖೆಗಳ ಅಭಿವೃದ್ಧಿ ಚಟುವಟಿಕೆಗೆ ಪೂರಕ ಅಂದಾಜಿನಲ್ಲಿ ನಿಗದಿ ಮಾಡಿದ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ಸದನಕ್ಕೆ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next