Advertisement

ಅರ್ಥಪೂರ್ಣ ಚರ್ಚೆಗಳಿಲ್ಲದೇ ಹಾದಿತಪ್ಪಿದ ಅಧಿವೇಶನ

12:41 AM Mar 26, 2021 | Team Udayavani |

ಮಾರ್ಚ್‌ 4ರಿಂದ ಆರಂಭವಾಗಿ ಮಾರ್ಚ್‌ 31ರ ವರೆಗೆ ನಡೆಯ ಬೇಕಿದ್ದ ಬಜೆಟ್‌ ಮೇಲಿನ ಅಧಿವೇಶನ ಬುಧವಾರಕ್ಕೇ ಮುಕ್ತಾಯ ಗೊಂಡಿದೆ.  ಬಜೆಟ್‌ ಮೇಲಿನ ಚರ್ಚೆಗಿಂತ ಹೆಚ್ಚಾಗಿ ಕಲಾಪದಲ್ಲಿ ಸಿಡಿ ಪ್ರಕರಣ, ಆರು ಸಚಿವರು ಕೋರ್ಟ್‌ನಿಂದ ತಡೆಯಾಜ್ಞೆ ತೆಗೆದುಕೊಂಡ ವಿಚಾರ, ಸಚಿವ ಡಾ| ಸುಧಾಕರ್‌ ನೀಡಿದ ಏಕಪತ್ನಿ ವ್ರತಸ್ಥ ಹೇಳಿಕೆಗಳೇ ಚರ್ಚೆಯಲ್ಲಿ ಮುನ್ನೆಲೆ ಪಡೆದವು.

Advertisement

ವಿಪಕ್ಷಕ್ಕೆ ಅದು ಪ್ರಮುಖ ವಿಚಾರವಾದರೂ ಕೋವಿಡ್‌ನ‌ ಈ ಸಂಕಷ್ಟಕರ ಕಾಲಘಟ್ಟದಲ್ಲಿ  ಬಜೆಟ್‌ ಅಧಿವೇಶನದಲ್ಲಿ ಅರ್ಥ ಪೂರ್ಣವಾದ ಚರ್ಚೆಗಳು ನಡೆಯಬೇಕಿತ್ತು. ಈಗೆಂದಷ್ಟೇ ಅಲ್ಲ, ಪ್ರತೀ ಬಾರಿಯೂ ಕಲಾಪಗಳು ಮುಖ್ಯ ಚರ್ಚೆಯ ವಿಷಯದಿಂದ ಹಾದಿ ತಪ್ಪಿ, ವಾಕ್‌ಸಮರ, ವಾಕೌಟ್‌,  ಗದ್ದಲ, ಧಿಕ್ಕಾರಗಳ ಕೂಗಿನ ನಡುವೆಯೇ ಕಳೆದು ಹೋಗುತ್ತಿರುವುದು ದುರಂತ.  ಅಧಿವೇಶನದ ಮೊದಲನೆಯ ದಿನವೇ ವಿಪಕ್ಷಗಳ ವಿರೋಧದ ನಡುವೆ “ಒಂದು ರಾಷ್ಟ್ರ-ಒಂದು ಚುನಾವಣೆ’ ಕುರಿತ ವಿಶೇಷ ಚರ್ಚೆ ಕೈಗೊಳ್ಳಲು ಸರಕಾರ ಮುಂದಾದದ್ದು, ಇದರಿಂದಾಗಿ ವಿಧಾನಮಂಡಲದ ಉಭಯ ಸದನಗಳಲ್ಲಿ ಗದ್ದಲವೇರ್ಪಟ್ಟು ಇಡೀ ದಿನದ ಕಲಾಪ ಬಲಿ ಆದಾಗ, ರಾಜ್ಯದ ಪ್ರಚಲಿತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವ ಬಗ್ಗೆ ಜನಸಾಮಾನ್ಯರು ಭರವಸೆಯನ್ನೇ ಕಳೆದುಕೊಂಡರು.

ಅಂದುಕೊಂಡಂತೆಯೇ ಬಜೆಟ್‌ ಮೇಲಿನ ಅಧಿವೇಶನ, ರಾಜ್ಯದ ಹಿತಚಿಂತನೆಯ ದೃಷ್ಟಿಯಿಂದ ಅಷ್ಟಾಗಿ ಫ‌ಲಕಾರಿಯಾಗದೇ ಮುಂದೂ ಡಿಕೆಯಾಗಿದೆ. ರಾಜ್ಯದಲ್ಲಷ್ಟೇ ಅಲ್ಲ, ಕೇಂದ್ರದ ಮಟ್ಟದಲ್ಲೂ ಅನ್ಯ ಕಾರಣಗಳಿಗಾಗಿ ಇಂಥ ವಿದ್ಯಮಾನವನ್ನೇ ನಾವು ನೋಡುತ್ತಿದ್ದೇವೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾದರೆ, ಅದಕ್ಕೂ ಮುನ್ನ ಲೋಕಸಭೆಯನ್ನು ಅನಿರ್ದಿಷ್ಟಾ ವಧಿಗೆ ಮುಂದೂಡಲಾಗಿತ್ತು.

ರಾಜ್ಯದ ವಿಚಾರಕ್ಕೆ ಬಂದರೆ, ಆಡಳಿತಾರೂಢ ಪಕ್ಷ ಮತ್ತು ವಿಪಕ್ಷಗಳು ತಮ್ಮನ್ನು ಜನರು ಗಮನಿಸುತ್ತಿದ್ದಾರೆ, ರಾಜ್ಯದ ಆರ್ಥಿಕ ಸ್ಥಿತಿಗೆ ಮರುವೇಗ ನೀಡುವ ತುರ್ತು ಎಷ್ಟಿದೆ ಎನ್ನುವ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲವೇನೋ ಎಂಬಂತಿವೆ ಅವುಗಳ ವರ್ತನೆ.  ಆದರೆ ಅಧಿಕಾರದ ವಿಚಾರಕ್ಕೆ ಬಂದಾಗ ಮಾತ್ರ ಇವು ಸಕ್ರಿಯವಾಗಿಬಿಡುತ್ತವೆ. ಬಜೆಟ್‌ ಅಧಿವೇಶನ ಮುಕ್ತಾಯಗೊಂಡದ್ದೇ ಮೂರೂ ರಾಜಕೀಯ ಪಕ್ಷಗಳು ಮುಂಬರುವ ಉಪ ಚುನಾವಣೆಯತ್ತ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯತ್ತ ಎಲ್ಲಿಲ್ಲದ ಗಮನ ಹರಿಸುವುದು ನಿಶ್ಚಿತ.

ಆದಾಗ್ಯೂ ವಿಧಾನ ಮಂಡಲ ಅಧಿವೇಶನವನ್ನು ಮುಂದೂಡುವ ಮೊದಲು ಬಜೆಟ್‌ಗೆ ಅಂಗೀಕಾರ ನೀಡಲಾಗಿದೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಮುಖ್ಯ ವಿಚಾರಗಳ ಚರ್ಚೆಗಳು ಆಗದಿರುವುದು ಬೇಸರದ ಸಂಗತಿ. ಪದೇ ಪದೆ ಈ ರೀತಿ ಅಧಿವೇಶನಗಳು ತಮ್ಮ ಮುಖ್ಯ ಉದ್ದೇಶದಿಂದ ವಿಮುಖವಾಗುವ ಪರಿಪಾಠ ನಿಲ್ಲಲೇಬೇಕಿದೆ. ಆಡಳಿತ ಹಾಗೂ ವಿಪಕ್ಷ ಎರಡರ ಮೇಲೂ ಈ ಜವಾಬ್ದಾರಿ ಇದೆ. ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನ ಮೊಟಕುಗೊಂಡ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವುದು ಗಮನಾರ್ಹ.

Advertisement
Advertisement

Udayavani is now on Telegram. Click here to join our channel and stay updated with the latest news.

Next