Advertisement

ಬೆಳೆವಿಮೆಯಲ್ಲಿ ರಾಜ್ಯದ ರೈತರಿಗೆ ಅನ್ಯಾಯ ಸಾವಿರಾರು ಕೋಟಿ ರೂ. ವಿಮೆ ಕಂಪನಿಗಳ ಪಾಲು

08:31 PM Sep 16, 2022 | Team Udayavani |

ವಿಧಾನಸಭೆ: ರಾಜ್ಯದಲ್ಲಿ ಪ್ರವಾಹ ಸೇರಿ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಮಾಡಿಸುವ ಬೆಳೆವಿಮೆ ವಿಚಾರದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಬೆಳೆವಿಮೆಗಾಗಿ ವಾರ್ಷಿಕವಾಗಿ ಪಾವತಿಸುವ ಸಾವಿರಾರು ಕೋಟಿ ರೂ. ವಿಮೆ ಕಂಪನಿಗಳ ಪಾಲಾಗುತ್ತಿದ್ದು, ಕ್ಲೈಮ್‌ ಅತ್ಯಂತ ಕಡಿಮೆ ಬರುತ್ತಿದೆ.

Advertisement

ಉದಾಹರಣೆಗೆ ರಾಜ್ಯದ ಇತಿಹಾಸದಲ್ಲಿ ತೀವ್ರ ವಿಕೋಪ ಎಂದು ದಾಖಲಾದ 2019-20 ನೇ ಸಾಲಿನಲ್ಲಿ ರೈತರು 2,276 ಕೋಟಿ ರೂ. ಪ್ರೀಮಿಯಂ ಪಾವತಿಸಿದ್ದು 9,830 ಕೋಟಿ ರೂ.  ಮೊತ್ತವಾಗಿದ್ದರೂ ರೈತರಿಗೆ ಪಾವತಿಯಾಗಿದ್ದು 1,235 ಕೋಟಿ ರೂ. ಮಾತ್ರ.

ಅದೇ ರೀತಿ 2017-18ರಲ್ಲಿ ರೈತರು 1,830 ಕೋಟಿ ರೂ. ಪಾವತಿಸಿದ್ದು 8,723 ಕೋಟಿ ರೂ. (ಸಮ್‌ ಅಶ್ಯೂರ್‌x) ಖಾತರಿ ಮೊತ್ತವಾಗಿದ್ದರೂ ರೈತರಿಗೆ ಪಾವತಿಯಾಗಿದ್ದು 856.84 ಕೋಟಿ ರೂ. ಮಾತ್ರ.

2020-21ರಲ್ಲಿ 6500 ಕೋಟಿ ರೂ. ಸಮ್‌ ಅಶ್ಯೂರ್‌ ಖಾತರಿ ಮೊತ್ತದ ಪೈಕಿ 621 ಕೋಟಿ ರೂ. ಪಾವತಿಯಾಗಿದ್ದರೆ, 2021-22 ರಲ್ಲಿ 6621 ಕೋಟಿ ರೂ. ಸಮ್‌ ಅಶ್ಯೂರ್‌ ಖಾತರಿ ಮೊತ್ತದ ಪೈಕಿ 757 ಕೋಟಿ ರೂ. ಪಾವತಿಯಾಗಿದೆ.

ಶುಕ್ರವಾರ ಸದನದಲ್ಲಿ ನೆರೆ ಸಮಸ್ಯೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ್‌ ಅವರು, ಬೆಳೆ ವಿಮೆ ಕಂಪನಿಗಳಿಂದ ರೈತರಿಗೆ ಧೋಖಾ ಆಗುತ್ತಿದೆ. ರಾಜ್ಯ ಸರ್ಕಾರವೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಇದೊಂದು ರೀತಿ ಮಿಲಾಪಿ ವ್ಯವಹಾರ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಬೆಳೆ ವಿಮೆ ಕಂಪನಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಆಂಕಿ-ಅಂಶ ಸಮೇತ ವಿವರಿಸಿದರು.

ಗದಗ ಜಿಲ್ಲೆಯಲ್ಲೇ 500 ಕೋಟಿ ರೂ. ಮೊತ್ತದ ನಷ್ಟವಾಗಿದೆ. ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಅತಿ ದೊಡ್ಡ ಸಂಕಷ್ಟ ಎದುರಾಗಿದೆ. ಸರ್ಕಾರದ ಪರಿಹಾರ ತಲುಪಿಲ್ಲ. ಕ್ಷೇತ್ರದ ಜನತೆಗೆ ನ್ಯಾಯ ದೊರಕಿಸಿಕೊಡಲು ಆಗುತ್ತಿಲ್ಲ. ಕನಿಷ್ಠ 200 ಕೋಟಿ ರೂ. ನನ್ನ ಕ್ಷೇತ್ರಕ್ಕೆ ಅನುದಾನ ಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ಹಾಗೂ ಕೃಷ್ಣ ಬೈರೇಗೌಡರು ಸಹ ಇದೇ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿ ವಾರ್ಷಿಕವಾಗಿ 10 ರಿಂದ 15 ಲಕ್ಷ ರೈತರು ಬೆಳೆವಿಮೆ ಪಾವತಿಸಿದರೂ ಕಂಪನಿಗಳಿಂದ ನ್ಯಾಯಾಯುತ ಕ್ಲೈಮ್‌ ಸಿಗುತ್ತಿಲ್ಲ ಎಂದು ಹೇಳಿ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಗಮನಸೆಳೆದರು.

ಕೇಂದ್ರದಿಂದ ರಾಜ್ಯಕ್ಕೆ ಬಂದ ತಂಡ ಹೈವೇ ಸವಾರಿ ಮಾಡಿ ಹೋಗಿದೆ. ರೈತರ ಹೊಲ ಗದ್ದೆಗಳಿಗೆ ಭೇಟಿ ನೀಡಿ ವಾಸ್ತವಾಂಶದ ಮಾಹಿತಿ ಸಂಗ್ರಹಿಸಿಲ್ಲ. ಸರ್ಕಾರ ಕೇವಲ ಬೆಂಗಳೂರು ಹಾಗೂ ಉದ್ಯಮಿಗಳನ್ನು ಮಾತ್ರ ನೋಡುತ್ತದೆ. ರೈತರನ್ನು ನೋಡುತ್ತಿಲ್ಲ ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸಾಲಮನ್ನಾ ಮಾಡಲು ಆಗ್ರಹ
ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರವಾಹ ಉಂಟಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಶೂನ್ಯ ಬಡ್ಡಿ ದರದಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳಲು ಹೊಸದಾಗಿ ಸಾಲ ವಿತರಿಸಬೇಕು ಎಂದು ಎಚ್‌.ಕೆ.ಪಾಟೀಲ್‌ ಆಗ್ರಹಿಸಿದರು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚು ಅನುದಾನ ಪಡೆಯುವ ಕೆಲಸ ಆಗಬೇಕು. ಸರ್ವ ಪಕ್ಷ ನಿಯೋಗ ಕೊಂಡೊಯ್ಯಿರಿ ಎಂದು ಸಲಹೆ ನೀಡಿದರು.

ಕೇಂದ್ರಕ್ಕೆ ತೆರಿಗೆ ಮೂಲಕ ಕರ್ನಾಟಕದಿಂದ 1 ಲಕ್ಷ ರೂ. ಸಂಗ್ರಹವಾದರೆ ನಮಗೆ ಬರುತ್ತಿರುವುದು 20 ಸಾವಿರ ರೂ. ಮಾತ್ರ. ಆದರೆ, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಆರು ಸಾವಿರ ರೂ. ಸಂಗ್ರಹವಾದರೆ ಅವರಿಗೆ 1 ಲಕ್ಷ ರೂ. ಅನುದಾನ ಸಿಗುತ್ತಿದೆ. ಸಂಕಷ್ಟ ಸಮಯದಲ್ಲಿ ಬಿಟ್ಟು ಇನ್ಯಾವಾಗ ಕೇಳುತ್ತೀರಿ ಎಂದು ಪ್ರಶ್ನಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next