Advertisement

ಜೆಡಿಎಸ್‌ ಪ್ರತಿಭಟನೆಯಿಂದ ಕಲಾಪ ಮೊಟಕು

08:38 PM Sep 23, 2022 | Team Udayavani |

ವಿಧಾನಸಭೆ: ಬಿಎಂಎಸ್‌ ಶಿಕ್ಷಣ ಟ್ರಸ್ಟ್‌ನ ಆಜೀವ ಸದಸ್ಯತ್ವವನ್ನು ಖಾಸಗಿ ವ್ಯಕ್ತಿಗೆ ನೀಡಿರುವುದು ಸೇರಿ ಟ್ರಸ್ಟ್‌ನಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸುವಂತೆ ಎರಡನೇ ದಿನವಾದ ಶುಕ್ರವಾರವೂ ಜೆಡಿಎಸ್‌ ಧರಣಿ ಮುಂದುವರಿಸಿತು. ಸರ್ಕಾರ ತನಿಖೆಗೆ ಒಪ್ಪದ ಕಾರಣ ಗದ್ದಲದ ವಾತಾವರಣ ಉಂಟಾಗಿದ್ದರಿಂದ ಸದನ ಅರ್ನಿಷ್ಟಾವಧಿಗೆ ಮುಂದೂಡಲಾಯಿತು.

Advertisement

ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ ಜೆಡಿಎಸ್‌ ಸದಸ್ಯರು, ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಘೋಷಣೆ ಕೂಗಿ, ಪೋಸ್ಟರ್‌ ಪ್ರದರ್ಶಿಸಿದರು. ಈ ವೇಳೆ ಸದಸ್ಯ ಕೆ.ಅನ್ನದಾನಿ ಪೋಸ್ಟರ್‌ ಹಿಡಿದು ಸ್ಪೀಕರ್‌ ಪೀಠದ ಬಳಿಗೆ ಬಂದರು. ಮಾರ್ಷಲ್‌ಗ‌ಳು ಅವರನ್ನು ತಡೆದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿ, ಅನ್ನದಾನಿಯವರೇ ನೀವು ಪ್ರಾಧ್ಯಾಪಕರಾಗಿದ್ದವರು. ಏನು ಮಾಡಿದರೂ ನಡೆಯುತ್ತದೆ ಎನ್ನುವುದು ಸರಿಯಲ್ಲ. ಹೀಗೆಲ್ಲ ಮಾಡಬಾರದು. ಪೀಠಕ್ಕೆ ಅದರದ್ದೇ ಆದ ಗೌರವವಿದೆ. ಇಂತಹವುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಗರಂ ಆದರು.

ಪ್ರಶ್ನೋತ್ತರ ಅನಂತರ ಅಥವಾ ಸನದ ಹೊರಗೆ ಪ್ರತಿಭಟನೆ ಮುಂದುವರಿಸುವಂತೆ ಸ್ಪೀಕರ್‌ ಮನವಿ ಮಾಡಿದರೂ ಜೆಡಿಎಸ್‌ ಸದಸ್ಯರು ಪಟ್ಟು ಬಿಡಲಿಲ್ಲ. ಹೀಗಾಗಿ ಸದನವನ್ನು ಹತ್ತು ನಿಮಿಷ ಮುಂದೂಡಿದರು.

ಸಂಧಾನ ವಿಫ‌ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿಯವರನ್ನು ಸ್ಪೀಕರ್‌ ತಮ್ಮ ಕೊಠಡಿಗೆ ಕರೆದು ಸಂಧಾನ ಮಾಡುವ ಪ್ರಯತ್ನ ನಡೆಸಿದರು. ಆದರೆ, ಸರ್ಕಾರ ಈ ವಿಚಾರವಾಗಿ ಯಾವುದೇ ತನಿಖೆಗೆ ಒಪ್ಪದೇ ಇದ್ದಾಗ ಕಲಾಪ ಪುನರ್‌ ಆರಂಭವಾಗುತ್ತಿದ್ದಂತೆ ಜೆಡಿಎಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಸ್ವೀಕರ್‌ ನಡೆಸಿದ ಸಂಧಾನವೂ ಫ‌ಲ ಕೊಡಲಿಲ್ಲ.

Advertisement

ತನಿಖೆ ಆಗಲೇ ಬೇಕು: ಬಿಎಂಎಸ್‌ ಟ್ರಸ್ಟ್‌ನ ಆಜೀವ ಸದಸ್ಯತ್ವವನ್ನು ದಯಾನಂದ ಪೈ ಅವರಿಗೆ ಕಾನೂನು ಬಾಹಿರವಾಗಿ ನೀಡಲಾಗಿದೆ. ಕೋಟ್ಯಂತರ ರೂ.ಅವ್ಯವಹಾರ ಆಗಿರುವ ಅಥವಾ ಆಗುವ ಸಾಧ್ಯತೆಯಿದೆ. ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ನೀಡಬೇಕು. ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ಎಡವಿದೆ. ಸಚಿವರಿಂದ ಸರಿಯಾದ ಉತ್ತರ ಬಂದಿಲ್ಲ. ಸಮಗ್ರ ತನಿಖೆ ನಡೆಸಲೇ ಬೇಕು ಎಂದು ಎಚ್‌.ಡಿ.ಕುಮಾರ ಸ್ವಾಮಿ ಆಗ್ರಹಿಸಿದರು.

ಸದಸ್ಯ ಎಚ್‌.ಡಿ. ರೇವಣ್ಣ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳನ್ನು ದಾಖಲೆ ಸಮೇತವಾಗಿ ಸದನದ ಮುಂದಿಡಲಿದ್ದೇನೆ. ಆರೋಪ ಸಾಬೀತಾಗದೇ ಇದ್ದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ, ಆರೋಪ ಸಾಬೀತಾದರೆ ಸಚಿವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.

ಯಾವುದೇ ತನಿಖೆ ಮಾಡಲ್ಲ: ಟ್ರಸ್ಟ್‌ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿದೆ. ನ್ಯಾಯಾಲಯದ ತೀರ್ಪಿನಂತೆ ಮತ್ತು ಕಾನೂನು ಪ್ರಕಾರವೇ ನಡೆದುಕೊಂಡಿದೆ. ಟ್ರಸ್ಟ್‌ನ ಆಸ್ತಿ ಯಾವೊಬ್ಬ ವ್ಯಕ್ತಿಯ ಪಾಲು ಆಗುವುದಿಲ್ಲ. ಸರ್ಕಾರದ ಅಧಿಕಾರವೂ ಮೊಟಕುಗೊಳ್ಳುವುದಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಯಾವ ತನಿಖೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು. ಇದಾದ ನಂತರ ಸದಸ್ಯರು ಧರಣಿಗೆ ಮುಂದಾದಾಗ ಗದ್ದಲ ಉಂಟಾಯಿತು.

ವಿಧೇಯಕಕ್ಕೆ ಅನುಮೋದನೆ: ಜೆಡಿಎಸ್‌ ಸದಸ್ಯರ ಪ್ರತಿಭಟನೆ, ಘೋಷಣೆಯ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ-2022ಕ್ಕೆ ಅನುಮೋದನೆ ನೀಡಲಾಯಿತು.

ಎಚ್‌ಡಿಕೆ ಪ್ರಸ್ತಾಪಕ್ಕೆ ಸಿದ್ದು ಸಾಥ್‌
ಬಿಎಂಎಸ್‌ ಟ್ರಸ್ಟ್‌ ವಿಚಾರದ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್‌ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿಯವರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ನಿರ್ಧಾರ ಪ್ರಕಟಿಸುತ್ತಿಲ್ಲ, ಇದರಿಂದ ಸಮಯ ವ್ಯರ್ಥವಾಗಿದೆ. ಸರ್ಕಾರದ ಭ್ರಷ್ಟಾಚಾರ, 40 ಪರ್ಸಂಟ್‌ ಕಮಿಷನ್‌ ವಿಷಯ ಚರ್ಚೆಗೆ ಬರಬಾರದು ಎಂಬ ದುರುದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ.

ಉದ್ದೇಶಪೂರ್ವಕವಾಗಿಯೇ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೂ ಮುನ್ನ ಸದನದಲ್ಲಿ ಸಿದ್ದರಾಮಯ್ಯ ಅವರು ಕುಮಾರಸ್ವಾಮಿಯವರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next