Advertisement

ಹೊಸ ವಿವಿಗಳ ಸ್ಥಾಪನೆಗೆ ಪಕ್ಷಾತೀತ ವಿರೋಧ; ಡೀಮ್ಡ್ ವಿವಿ ಕಾರ್ಯಶೈಲಿಗೂ ಆಕ್ಷೇಪ

11:50 PM Sep 21, 2022 | Team Udayavani |

ಬೆಂಗಳೂರು: ಎಂಟು ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸು ವುದರಿಂದ ನಮಗೆ ಎಂಟು ಕುಲಪತಿ, ಎಂಟು ರಿಜಿಸ್ಟ್ರಾರ್‌, ಡೀನ್‌ಗಳ ನೇಮಕ ಮಾಡಿಕೊಳ್ಳುವ ಅವಕಾಶ ಸಿಗಬಹುದು. ಇದರ ಬದಲು ತಾಲೂಕಿಗೊಂದು ವಿಶ್ವವಿದ್ಯಾನಿಲಯ ಮಾಡಿ ಬಿಡಿ’ – ಇದು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ಮಸೂದೆ ಮಂಡನೆ ಚರ್ಚೆ ಯಲ್ಲಿ ಭಾಗಿಯಾದ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಕುಟುಕಿದ ಬಗೆ.ಈ ಮಸೂದೆಗೆ ಆಡಳಿತ ಪಕ್ಷವಾದ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.

Advertisement

ಚರ್ಚೆಯಲ್ಲಿ ಭಾಗವಹಿಸಿದ ಮೂರೂ ಪಕ್ಷಗಳ ಸದಸ್ಯರು, ಈಗಿರುವ ವಿವಿಗಳ ಸಮಸ್ಯೆ ಬಗ್ಗೆ ಸದನದ ಗಮನ ಸೆಳೆದರು. ಕುಲಪತಿ ಹುದ್ದೆಗೆ 5ರಿಂದ 20 ಕೋಟಿ ರೂ. ಡೀಲ್‌ ನಡೆಯುತ್ತಿದೆ. ಅಯೋಗ್ಯರು ವಿವಿಗಳಿಗೆ ನೇಮಕ ವಾಗುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ಆರೋಪಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಜಿಲ್ಲೆಗೊಂದು ವಿವಿ ಮಾಡಬೇಕು ಎಂದಿದೆ ಎಂಬ ನೆಪದಲ್ಲಿ ರಾಜಕೀಯ ಕಾರಣಕ್ಕೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೊಂದು ವಿವಿ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಹೀಗೆಲ್ಲ ಮಾಡಬೇಡಿ. 2019ರ ಸಿಎಜಿ ವರದಿ, 2021ರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಶ್ವವಿದ್ಯಾನಿಲಯಗಳಲ್ಲಿ ನೇಮಕಾತಿ, ನಿರ್ಮಾಣ ಕಾಮಗಾರಿ ಗಳ ಅವ್ಯವ ಹಾರದ ಬಗ್ಗೆ ವರದಿ ಮಾಡಿದೆ. ಯಾರೂ ಊಹಿಸಲಾಗದಷ್ಟು ಮಟ್ಟಿಗೆ ಅಕ್ರಮಗಳು ನಡೆದಿವೆ. ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಅನರ್ಹರು, ಅನನುಭವಿಗಳನ್ನು ನೇಮಿಸಿಕೊಳ್ಳಲಾಗಿದೆ. ಮೊದಲು ಇರುವ ವಿವಿಗಳ ಸ್ಥಿತಿ ಬದಲಾಯಿಸಿ. ಇಷ್ಟರ ಮೇಲೂ ಹೊಸ ವಿವಿಗಳು ಬೇಕು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಸೂಕ್ಷ್ಮವಾಗಿ ಹೇಳಿದರು.

ಪ್ರತಿಯೊಂದು ವಿವಿಗೆ 2 ಕೋಟಿ ರೂ. ನಿಗದಿಪಡಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಶಾಲೆಯೂ ಈ ಮೊತ್ತದಲ್ಲಿ ನಿರ್ಮಿಸಲು ಕಷ್ಟ. ಒಂದು ಎಂಜಿನಿಯರ್‌ ಕಾಲೇಜು ಸ್ಥಾಪನೆಗೆ 120 ಕೋಟಿ ರೂ., ಕೃಷಿ ವಿವಿಗೆ 400 ಕೋಟಿ ರೂ.ವರೆಗೆ ವೆಚ್ಚ ಆಗುತ್ತದೆ. ರಾಜ್ಯದ ಆರ್ಥಿಕ ಸ್ಥಿತಿ ಗಂಭೀರ ವಾಗಿದೆ ಎಂದರು.

ಮಂಗಳೂರಿನ ಸಭೆ ಬೆಂಗಳೂರಿನಲ್ಲಿ: ಖಾದರ್‌
ಮಂಗಳೂರು ವಿಶ್ವವಿದ್ಯಾನಿಲಯದ ಪರಿಸ್ಥಿತಿ ಬಗ್ಗೆ ವಿವರಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್‌, ಅಲ್ಲಿ 500 ಮಂಜೂರಾತಿ ಹುದ್ದೆ ಇದ್ದರೆ 780 ಹೊರಗುತ್ತಿಗೆ ಹುದ್ದೆಗಳಿಗೆ ಅವರಿಗೆ ಇಷ್ಟ ಬಂದಂತೆ ವೇತನ ನಿಗದಿ ಮಾಡಲಾಗಿದೆ. ಅಲ್ಲಿನ ಸಿಂಡಿಕೇಟ್‌ ಸದಸ್ಯರು ಬೆಂಗಳೂರಿನ ಪಂಚತಾರಾ ಹೊಟೇಲ್‌ಗೆ ಬಂದು ಸಭೆ ಮಾಡುತ್ತಾರೆ. ಅವರಿಗೆ ವಿದ್ಯಾರ್ಥಿಗಳು, ಶಿಕ್ಷಣದ ಗುಣಮಟ್ಟ ಕ್ಕಿಂತ ಸಭೆ ಭತ್ತೆ ಹೆಚ್ಚಿಸಿಕೊಳ್ಳುವುದರಲ್ಲೇ ಆಸಕ್ತಿ ಎಂದು ದೂರಿದರು.

Advertisement

ಕಾಂಗೆಸ್‌ನ ಎಂ.ಬಿ.ಪಾಟೀಲ್‌ ಅವರು ಕರ್ನಾಟಕ ವಿಶ್ವವಿದ್ಯಾನಿಲಯ, ಮಹಿಳಾ ವಿಶ್ವವಿದ್ಯಾನಿಲಯದ ಪರಿಸ್ಥಿತಿ ವಿವರಿಸಿದರೆ, ಪರಮೇಶ್ವರ ನಾಯಕ್‌ ಕೃಷ್ಣದೇವರಾಯ ವಿವಿ ಸ್ಥಿತಿಗತಿ ಬಗ್ಗೆ ಸದನದ ಗಮನ ಸೆಳೆದರು. ಹಾಲಿ ಇರುವ ಎಂಜಿನಿಯರಿಂಗ್‌ ಕಾಲೇಜು ಮುಚ್ಚುತ್ತಿರುವ ಸ್ಥಿತಿ ಎದುರಾಗಿ ರುವ ಬಗ್ಗೆಯೂ ಸದನದಲ್ಲಿ ಪ್ರಸ್ತಾವವಾಯಿತು.

ಬಿಎಸ್‌ಪಿಯ ಮಹೇಶ್‌, ಬಿಜೆಪಿಯ ವೇದವ್ಯಾಸ ಕಾಮತ್‌, ಕಾಂಗ್ರೆಸ್‌ನ ದದ್ದಲ್‌ ಮತ್ತಿತರರು ಕೂಡ ವಿವಿಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುಂತೆ ಆಗ್ರಹಿಸಿದರು.ಚರ್ಚೆ ಬಳಿಕ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರು, ಮಸೂದೆಗೆ ಅನುಮೋದನೆ ಪಡೆದುಕೊಂಡರು.

ನೇಮಕಾತಿ ಹೊಣೆಗಾರಿಕೆ ಕೊಡಬಾರದು
ವಿವಿಗಳಿಗೆ ನೇಮಕಾತಿ ಹಾಗೂ ನಿರ್ಮಾಣದ ಹೊಣೆ ನೀಡಬಾರದು. ಅದರಿಂದಲೇ ಹೆಚ್ಚು ಅಕ್ರಮಗಳು ನಡೆಯುತ್ತಿವೆ. ಅದಕ್ಕಾಗಿಯೇ ಕುಲಪತಿ, ರಿಜಿಸ್ಟ್ರಾರ್‌ ಆಗಲು ಪೈಪೋಟಿ ಹಾಗೂ ಲಾಬಿ ನಡೆಯುತ್ತದೆ ಎಂದು ಬಿಜೆಪಿಯ ಅರವಿಂದ ಬೆಲ್ಲದ ಹೇಳಿದರು. ಸಂಗೀತ, ಜಾನಪದ ಹೀಗೆ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಿಮಿಗಳನ್ನು ಒಂದುಗೂಡಿಸಿ ಎಂದು ಸಲಹೆ ನೀಡಿದರು.

ಇತ್ತೀಚೆಗೆ ನಾನು ಕೆನಡಾಕ್ಕೆ ಹೋಗಿದ್ದಾಗ ನಮ್ಮ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿರುವುದು ತಿಳಿಯಿತು. ಹಾಗಾದರೆ ನಮ್ಮ ವಿವಿಗಳಲ್ಲಿ ಕೊಡದ ಶಿಕ್ಷಣ ಅಲ್ಲಿ ಕೊಡುತ್ತಿದ್ದಾರಾ? ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೇ? ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ವಿವಿಗಳ ಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಬೇಕು.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next