Advertisement

ವಿಧಾನಸಭಾ ರಿಸಲ್ಟ್; ಪಾಲಿಕೆ ಚುನಾವಣೆ ಮೇಲೆ ಎಫೆಕ್ಟ್ !

09:50 AM May 17, 2018 | Team Udayavani |

ಮಹಾನಗರ: ಕೆಲವೇ ತಿಂಗಳಿನಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಈಗಾಗಲೇ ರಾಜಕೀಯ ಲೆಕ್ಕಾಚಾರ, ಚರ್ಚೆಗಳು ಪಾಲಿಕೆ ವರಾಂಡದಲ್ಲಿ ಆರಂಭವಾಗಿವೆ. ಪಾಲಿಕೆ ವ್ಯಾಪ್ತಿಯ ಎರಡು ವಿಧಾನಸಭೆಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಕೂಡ ರಾಜಕೀಯವಾಗಿ ಹೊಸ ಆಯಾಮ ಪಡೆದುಕೊಳ್ಳುವ ಸಾಧ್ಯತೆಯಿದೆ.

Advertisement

2013 ಮಾರ್ಚ್‌ 7ರಂದು ಪಾಲಿಕೆ ಚುನಾವಣೆ ನಡೆದಿದ್ದು, ಮುಂದಿನ ಚುನಾವಣೆ 2019ರ ಮಾರ್ಚ್‌ ವೇಳೆಗೆ ನಡೆಯುವ ಸಾಧ್ಯತೆ ಇದೆ. ಮಂಗಳೂರಿನ ಪ್ರತಿಷ್ಠಿತ ಈ ಚುನಾವಣೆ ರಾಜಕೀಯವಾಗಿ ಹೊಸ ಭಾಷ್ಯ ಬರೆಯಲಿದ್ದು, ಇದೇ ಸಮಯದಲ್ಲಿ ಲೋಕಸಭಾ ಚುನಾವಣೆ ಕೂಡ ನಡೆಯಲಿರುವುದರಿಂದ ಪಾಲಿಕೆ ಚುನಾವಣೆಗೆ ವಿಶೇಷ ಆದ್ಯತೆ ದೊರೆಯಲಿದೆ.

ಮನಪಾ ಚುನಾವಣೆಯ ಅಖಾಡ ಈಗ ಸಿದ್ಧಗೊಳ್ಳುತ್ತಿದೆ. ರಾಜಕೀಯ ಚಟುವಟಿಕೆಗಳು ಇನ್ನೇನು ಕೆಲವೇ ತಿಂಗಳಿನಲ್ಲಿ ಆರಂಭವಾಗಲಿವೆ. ಪಾಲಿಕೆ ಕಾರ್ಪೊರೇಟರ್‌ಗಳು ಮತ್ತೆ ಬ್ಯೂಸಿ ಯಾಗಲಿದ್ದಾರೆ. ಇದಕ್ಕೆ ಪೂರಕವಾಗಿ ಮಂಗಳವಾರ ಪ್ರಕಟವಾದ ವಿಧಾನಸಭಾ ಚುನಾವಣೆಯ ಫಲಿತಾಂಶ ಕೂಡ ಚರ್ಚೆಗೆ ಇನ್ನಷ್ಟು ರೂಪ ಒದಗಿಸಿದೆ. ರಾಜ್ಯದಲ್ಲಿ ಅತಂತ್ರ
ಸ್ಥಿತಿ ಮುಂದುವರಿದರೆ, ಬಿಜೆಪಿ ಸರಕಾರ ರಚಿಸಿದರೆ, ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರವಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಕುರಿತಂತೆಯೂ ರಾಜಕೀಯ ಲೆಕ್ಕಾಚಾರ ಪಾಲಿಕೆಯಲ್ಲಿ ಕೇಳಿಬರುತ್ತಿದೆ.

ಈಗ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್‌ 35 ಸ್ಥಾನಗಳನ್ನು ಪಡೆದು ಸ್ವಷ್ಟ ಬಹುಮತ ಪಡೆದುಕೊಂಡಿದೆ. ಉಳಿದಂತೆ ಬಿಜೆಪಿ 20, ಜೆಡಿಎಸ್‌ 2, ಸಿಪಿಎಂ 1, ಪಕ್ಷೇತರ 1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ38 ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ಪಾಲಿಕೆಯ ವಾರ್ಡ್‌ಗಳಿವೆ.

ಕಾಂಗ್ರೆಸ್‌ ಯೋಚನೆಯೇನು?
ಪಾಲಿಕೆಯಲ್ಲಿ ಕಳೆದ 5 ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳು, ಈ ಹಿಂದಿನ ಸರಕಾರ (ಮುಖ್ಯಮಂತ್ರಿ ಸಿದ್ದರಾಮಯ್ಯ) ಮಂಗಳೂರಿಗೆ ನೀಡಿದ ಯೋಜನೆ ಸಹಿತ ಇನ್ನಿತರ ವಿಚಾರಗಳನ್ನು ಮುಂದಿಟ್ಟು ಕಾಂಗ್ರೆಸ್‌ ಮತ್ತೆ ಮತ ಕೇಳಲು ನಿರ್ಧರಿಸಿದೆ. ತಮ್ಮ ಅವಧಿಯಲ್ಲಿ ಆಗಿರುವ ಸಾಧನೆಯನ್ನು ಬಣ್ಣಿಸಿ ಮತ್ತೆ ಪಾಲಿಕೆ ಅಧಿಕಾರ ಪಡೆಯಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಬಿಜೆಪಿಗೆ ಲಾಭವೇನು?
ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ಘೋಷಣೆ ಸಹಿತ ಕೇಂದ್ರದಿಂದ ದೊರೆತ ಯೋಜನೆಗಳನ್ನು ಬಿಜೆಪಿ ಜನರ ಮುಂದಿಡಲಿದೆ. ಜತೆಗೆ 5 ವರ್ಷ ಪಾಲಿಕೆಯಲ್ಲಿ ಕಾಂಗ್ರೆಸ್‌ ದುರಾಡಳಿತ ನಡೆಸಿದೆ ಎಂದು ಆರೋಪಿಸಿ ಪಟ್ಟಿಮಾಡಿ ಜನತೆಗೆ ಮುಂದಿಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಪೂರಕವಾಗಿ ಮಂಗಳೂರು ದಕ್ಷಿಣ- ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿರುವುದು ಬಿಜೆಪಿಗೆ ವರದಾನವಾಗಬಹುದು ಎಂಬ ಲೆಕ್ಕಾಚಾರವಿದೆ. 

ಪಾಲಿಕೆ ಎದುರಿಸಿದ ಚುನಾವಣೆಗಳು
ನಗರಸಭೆಯಿಂದ ನಗರಪಾಲಿಕೆಯಾಗಿ ಮಂಗಳೂರು ವಿಸ್ತಾರಗೊಂಡು ಮೊದಲ ಚುನಾವಣೆ ನಡೆದು 1984ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ 1990ರಲ್ಲಿ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಧಿಕಾರ ಪಡೆದಿತ್ತು. 1995ರಿಂದ 1997ರ ವರೆಗೆ ಮಂಗಳೂರು ಪಾಲಿಕೆ ಆಡಳಿತ ಆಡಳಿತಾಧಿಕಾರಿ ಕೈಯಲ್ಲಿತ್ತು.

1997 ಚುನಾವಣೆಯಲ್ಲಿ ಪೂರ್ಣ ಬಹುಮತ ಯಾರಿಗೂ ಸಿಗದಿದ್ದಾಗಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. 2002ರಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್‌ 40 ಸ್ಥಾನ ಪಡೆದ ಕಾರಣದಿಂದ ಕಾಂಗ್ರೆಸ್‌ ಮತ್ತೆ ಅಧಿಕಾರ ಪಡೆದುಕೊಂಡಿತ್ತು. ಆದರೆ, 2007ರಲ್ಲಿ ಬಿಜೆಪಿ ಇಲ್ಲಿ ಜಯಿಸಿತ್ತು. ಬಿಜೆಪಿಗೆ 35 ಹಾಗೂ ಕಾಂಗ್ರೆಸ್‌ಗೆ 20 ಸ್ಥಾನ ದೊರಕಿತ್ತು. ವಿಪರ್ಯಾಸವೆಂದರೆ, ಈ ಅವಧಿಯ ಕೊನೆಯ ವರ್ಷ ಬಹುಮತವಿದ್ದರೂ ಬಿಜೆಪಿಯ ಲೋಪದಿಂದಾಗಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಲಭಿಸಿತ್ತು. ಆದರೆ, 2007ರಲ್ಲಿ ಬಿಜೆಪಿ ಕೈಯಲ್ಲಿದ್ದ ಪಾಲಿಕೆಯನ್ನು 2013ರಲ್ಲಿ ಕಾಂಗ್ರೆಸ್‌ ತನ್ನ ಕೈವಶ ಮಾಡಿಕೊಂಡಿತ್ತು.

ಪಾಲಿಕೆಗೆ ಪರಿಣಾಮವಿಲ್ಲ
ಕಳೆದ 5 ವರ್ಷಗಳಲ್ಲಿ ಪಾಲಿಕೆಯಲ್ಲಿ ಕಾಂಗ್ರೆಸ್‌ ಮಾಡಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಮುಖ್ಯ ನೆಲೆಯಲ್ಲಿರಿಸಿ ನಾವು ಮುಂದಿನ ಚುನಾವಣೆ ಎದುರಿಸಲಿದ್ದೇವೆ. ವಿಧಾನಸಭೆಯ ಫಲಿತಾಂಶವು ಪಾಲಿಕೆ ಚುನಾವಣೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್‌ ಸರಕಾರವಿದ್ದ ಕಾಲದಲ್ಲಿ ಮಾಡಿದ ಜನಪರ ಯೋಜನೆಗಳಿಗಾಗಿ ಮತದಾರರು ಆಶೀರ್ವಾದ ಮಾಡಲಿದ್ದಾರೆ.
– ಭಾಸ್ಕರ್‌ ಕೆ., ಮೇಯರ್‌, ಮನಪಾ

ಆಡಳಿತದ ನಿರೀಕ್ಷೆ
ಮಂಗಳೂರು ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಚಂಡ ಜಯ ದಾಖಲಿಸುವ ಮೂಲಕ ಪಾಲಿಕೆಯ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಮನಪಾ ವ್ಯಾಪ್ತಿಯಲ್ಲಿ ಆದ ಅಭಿವೃದ್ಧಿ ಕಾರ್ಯವನ್ನು ಮಂಗಳೂರಿನ ಜನತೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದಿನ ಬಾರಿಗೆ ಪಾಲಿಕೆಯಲ್ಲಿ ಬಿಜೆಪಿಗೆ ಆಡಳಿತ ದೊರೆಯಲಿದೆ.
– ಪ್ರೇಮಾನಂದ ಶೆಟ್ಟಿ,
ವಿಪಕ್ಷ ನಾಯಕ, ಮನಪಾ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next