ಬೆಂಗಳೂರು: ರಾಜ್ಯದ ಮೂರು ರಾಜಕೀಯ ಪಕ್ಷಗಳು ಚುನಾವಣೆಗೆ ಸಂಪೂರ್ಣವಾಗಿ ಸನ್ನದ್ಧವಾಗುತ್ತಿದ್ದು, ಬಿರುಸಿನ ಚಟುವಟಿಕೆ ಪ್ರಾರಂಭವಾಗಿದೆ.
ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಬ್ಯುಸಿಯಾಗಿರುವಾಗಲೇ ಅಭ್ಯರ್ಥಿ ಕೇಂದ್ರಿತ ಚಟುವಟಿಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಂದಾಗಿವೆ.
ಶುಕ್ರವಾರ ವರ್ತೂರಿನ ಪ್ರಷ್ಠಿ ವಿಲೇಜ್‌ನಲ್ಲಿ ಮಹತ್ವದ ಸಭೆಯನ್ನು ಕಾಂಗ್ರೆಸ್ ಕರೆದಿದೆ. 12-14 ಜಿಲ್ಲೆಗಳಂತೆ ಒಟ್ಟುಗೂಡಿಸಿ ಮೂರು ಸಭೆ ನಡೆಸಲಾಗುತ್ತಿದೆ. ಈ ಸಭೆಗೆ 2023ರ ವಿಧಾನಸಭೆ ಚುನಾವಣೆಗೆ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳನ್ನು ಆಹ್ವಾನಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿಗಳು, ಸಂಸದರು, ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಆಕಾಂಕ್ಷಿಗಳು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಬೂತ್ ನ ಬಿಎಲ್‌ಎಗಳ ಸಂಪೂರ್ಣ ವಿವರಗಳೊಂದಿಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಸಭೆಗೆ ಹಾಜರಾಗುವ ಮುನ್ನ ಟಿಕೆಟ್ ಆಕಾಂಕ್ಷಿಗಳಿಗೆ ನಮೂನೆ ಕಳಿಸಿದ್ದು, ಅದನ್ನು ಭರ್ತಿ ಮಾಡಿಕೊಂಡು ಬರುವಂತೆಯೂ ತಿಳಿಸಲಾಗಿದೆ.
ಇನ್ನು ನವೆಂಬರ್ 25, 26, 27ರಂದು ರಾಜ್ಯ ಮಟ್ಟದ ಪ್ರಶಿಕ್ಷಣ ವರ್ಗವನ್ನು ಬಿಜೆಪಿ ಶಿವಮೊಗ್ಗದಲ್ಲಿ ಆಯೋಜಿಸಿದೆ. ಚುನಾವಣೆ ಉದ್ದೇಶದಲ್ಲಿ ಇದು ಮಹತ್ವದ ತಾಲೀಮು ಎನಿಸಿದ್ದು, ಮುಖ್ಯಮಂತ್ರಿ ಆದಿಯಾಗಿ ಕೋರ್ ಕಮಿಟಿ ಸದಸ್ಯರಿರುತ್ತಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಕೇಂದ್ರದ ಕೆಲವು ಸಚಿವರೂ ಪಾಲ್ಗೊಳ್ಳುತ್ತಾರೆ.
ಎಲ್ಲ ಮೋರ್ಚಾ ಅಧ್ಯಕ್ಷರು, ವಿಭಾಗ ಪ್ರಭಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರ ವರೆಗೆ ಸಭೆಯಲ್ಲಿ ಹಾಜರಿರುವರು ಮತ್ತು ಆಯ್ದ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಒಟ್ಟು 150 ಮಂದಿ ಭಾಗವಹಿಸುವರು. ಈ ವರ್ಗದಲ್ಲಿ ಇತ್ತೀಚಿನ ಆಗು ಹೋಗುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ನಿರ್ಧಾರಗಳು, ಆಗಿರುವ ಪ್ರಗತಿ, ಸರ್ಕಾರ ಮತ್ತು ಪಕ್ಷದ ಮುಂದಿನ ಕಾರ್ಯಯೋಜನೆ ಬಗ್ಗೆ ಚರ್ಚೆಯಾಗಲಿದೆ.