ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನ ಸಭಾ ಚುನಾವಣೆ ನಡೆಸುವ ಕುರಿತು ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದು, “ನಾವು ಅಸೆಂಬ್ಲಿ ಚುನಾವಣೆಗಳನ್ನು ನಡೆಸುತ್ತೇವೆ. ಡಿಸೆಂಬರ್ ನಂತರ ಚುನಾವಣೆ ನಡೆಸಲು ಕಾನೂನುಬದ್ಧವಾಗಿ ಹಕ್ಕು ಪಡೆದಿದ್ದೇವೆ” ಎಂದು ಹೇಳಿದ್ದಾರೆ.
ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಹಲವಾರು ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದೇವೆ. ಆಡಳಿತಾತ್ಮಕ ಸಭೆಗಳನ್ನು ನಡೆಸಿದ ನಂತರ, ಎಲ್ಲಾ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಭಾರೀ ಭದ್ರತೆಯ ಬೇಡಿಕೆ ಇರುತ್ತದೆ ಎಂದು ಹೇಳಿದ್ದಾರೆ ಎಂದರು.
ಲೋಕಸಭಾ ಚುನಾವಣೆಗಳು ನಡೆಯುತ್ತಿರುವಾಗ ಇಡೀ ದೇಶದಲ್ಲಿ ಭದ್ರತೆಯ ಬೇಡಿಕೆ ಇರುವುದರಿಂದ, ಅದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿ ಚುನಾವಣೆಗೆ ಭದ್ರತೆಯನ್ನು ಒದಗಿಸುವುದು ಕಷ್ಟಕರವಾಗಿರುತ್ತದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ನಾವು ಗಂಭೀರವಾಗಿ ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಕಚೇರಿಯು 20 ಜೂನ್ 2018 ರಿಂದ ಖಾಲಿಯಾಗಿದ್ದು, 2018 ಡಿಸೆಂಬರ್ 19 ರವರೆಗೆ ರಾಜ್ಯವು ರಾಜ್ಯಪಾಲರ ಆಳ್ವಿಕೆಯಲ್ಲಿತ್ತು ನಂತರ 2019 ಅಕ್ಟೋಬರ್ 30 ರವರೆಗೆ ರಾಷ್ಟ್ರಪತಿ ಆಳ್ವಿಕೆಯಲ್ಲಿತ್ತು.
ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ನಂತರ 2019 ಅಕ್ಟೋಬರ್ ನಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ನಡೆಸಲಾಗುತ್ತಿದ್ದು ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.