Advertisement

ಮಕ್ಕಳಿಗೊಂದು ಇರಲಿ ಟಿಕೆಟ್‌! ಕೈ,ಬಿಜೆಪಿಯಲ್ಲಿ ಭಾರಿ ಪೈಪೋಟಿ

06:00 AM Mar 29, 2018 | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಇದೀಗ, ಟಿಕೆಟ್‌ಗಾಗಿ ಎರಡೂ ಪಕ್ಷಗಳಲ್ಲಿ ಲಾಬಿ ಶುರುವಾಗಿದೆ.

Advertisement

ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರೇ ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿಸಲು ಲಾಬಿ ಶುರು ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ‌, ಹಿರಿಯ ನಾಯಕರಾದ ರಾಮಚಂದ್ರಗೌಡ, ವಿ.ಸೋಮಣ್ಣ ಅವರು ತಮ್ಮ ಮಕ್ಕಳಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಿ ರಾಜಕೀಯವಾಗಿ ಸ್ಥಾನ ಗಟ್ಟಿ ಮಾಡಲು ಶತ ಪ್ರಯತ್ನದಲ್ಲಿ ತೊಡಗಿದ್ದಾರೆ.

ಇನ್ನು ಕಾಂಗ್ರೆಸ್‌ನಲ್ಲೂ ಇದೇ ರೀತಿಯ ಪೈಪೋಟಿ ಕಂಡು ಬಂದಿದ್ದು, ಗೆಲ್ಲುವ ಸಾಮರ್ಥ್ಯ ನೋಡಿ ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿ ಎಂದು ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಟಿ.ಬಿ.ಜಯಚಂದ್ರ ಅವರೂ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ, ಯಡಿಯೂರಪ್ಪ
ಅವರು ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ಹಾಗೂ ರಾಜಕೀಯವಾಗಿ ಪ್ರತಿಷ್ಠೆಯ ಕಣವಾಗಿರುವ ವರುಣಾದಲ್ಲಿ ಟಿಕೆಟ್‌ ಕೊಡಿಸಲು ಪಟ್ಟು ಹಿಡಿದಿದ್ದಾರೆ.

ಮತ್ತೂಂದೆಡೆ ಹಿರಿಯ ನಾಯಕ ರಾಮಚಂದ್ರಗೌಡ ಪುತ್ರ ಸಪ್ತಗಿರಿಗೌಡಗೆ ಮಹಾಲಕ್ಷ್ಮಿ ಲೇಔಟ್‌ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ವಿ.ಸೋಮಣ್ಣ ಅವರು ಒಂದೊಮ್ಮೆ ತಮಗೆ ಟಿಕೆಟ್‌ ಕೊಡಲು ಸಾಧ್ಯವಿಲ್ಲದಿದ್ದರೆ ಪುತ್ರ ಅರುಣ್‌ ಸೋಮಣ್ಣಗೆ ಟಿಕೆಟ್‌ ನೀಡುವಂತೆ ಲಾಬಿ ನಡೆಸಿದ್ದಾರೆ. ಅರಸೀಕೆರೆ ಕ್ಷೇತ್ರಕ್ಕೆ ಟಿಕೆಟ್‌ ನೀಡುವ ಭರವಸೆಯೂ ದೊರೆತಿದೆ ಎಂದು ಹೇಳಲಾಗಿದೆ.

ಆದರೆ, ಅರಸೀಕೆರೆಯಲ್ಲಿ ಇನ್ನೂ ಟಿಕೆಟ್‌ ಗೊಂದಲವಿರುವುದರಿಂದ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ಅರುಣ್‌ಗೆ ಸ್ಪರ್ಧಿಸಲು ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.

Advertisement

ತವರಲ್ಲಿ ಸಿಎಂ ಪ್ರವಾಸ
ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ತವರು ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಮೈಸೂರಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ, 4 ದಿನಗಳ ಕಾಲ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಕೈನಲ್ಲೂ ಹೆಚ್ಚಿದ ಬೇಡಿಕೆ
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ನೋಡಿ ನಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ , ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರಿಗೆ ಬೇಡಿಕೆ ಇಟ್ಟಿದ್ದಾರೆ.

ಅಪ್ಪ ಮಕ್ಕಳಿಗೆ ಟಿಕೆಟ್‌ ನೀಡುವುದು ಹೊಸತೇನಲ್ಲ. ಬೇರೆ ಪಕ್ಷದಲ್ಲಿಯೂ ಅಪ್ಪ ಮಕ್ಕಳಿಗೆ ಟಿಕೆಟ್‌ ನೀಡಲಾಗುತ್ತಿದೆ. ಸೌಮ್ಯ ನನ್ನ ಮಗಳು ಎನ್ನುವ ಕಾರಣಕ್ಕೆ ಟಿಕೆಟ್‌ ನೀಡುವುದು ಬೇಡ, ಅರ್ಹತೆ ನೋಡಿ ಟಿಕೆಟ್‌ ನೀಡಲಿ. ಜಯನಗರ ನನ್ನ ಹಳೆಯ ಕ್ಷೇತ್ರ. ನನ್ನ ಮಗಳು ಅಲ್ಲಿಂದ ಸ್ಪರ್ಧೆ ಬಯಸಿದ್ದಾಳೆ ಟಿಕೆಟ್‌ ನೀಡಿದರೆ ಸಂತೋಷ.
–  ರಾಮಲಿಂಗಾ ರೆಡ್ಡಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next