ಬೆಂಗಳೂರು: ಬಿಜೆಪಿ ತನ್ನ ಕೇಡರ್ ಬಲವನ್ನೇ ನೆಚ್ಚಿಕೊಂಡು ಚುನಾವಣಾ ಸಮರದಲ್ಲಿ ಹೋರಾಡಲು ಮುಂದಾಗಿದೆ. ಈಗಾಗಲೇ ಬಿಜೆಪಿಯಲ್ಲಿ ಹಲವು ಸಿನಿಮಾ ನಟ-ನಟಿಯರು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಇವರನ್ನು ಬಿಟ್ಟರೆ, ತಾವಾಗಿಯೇ ಪಕ್ಷಕ್ಕೆ ಬರುವವರಿಗಷ್ಟೇ ಆದ್ಯತೆ. ಇದರ ಹೊರತಾಗಿ ಬೇರೆ ನಟ-ನಟಿಯರನ್ನು ಓಲೈಸದಿರಲು ಬಿಜೆಪಿ ತೀರ್ಮಾನಿಸಿದೆ.
ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಸಿನಿಮಾ ನಟ-ನಟಿಯರ ಸಂಖ್ಯೆ ಹೆಚ್ಚಾಗಿದೆ. ನಟ ಜಗ್ಗೇಶ್, ನಟಿಯರಾದ ತಾರಾ ಅನುರಾಧ, ಶೃತಿ, ಮಾಳವಿಕಾ, ಶಿಲ್ಪಾ ಗಣೇಶ್ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಿಂದೊಮ್ಮೆ ಚಿತ್ರರಂಗದಲ್ಲಿ ಮಿಂಚಿ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿರುವ ಸಿ.ಪಿ. ಯೋಗೀಶ್ವರ್ ಇದೀಗ ಬಿಜೆಪಿ ಸೇರಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇದರ ಜತೆಗೆ ನಟ ಜೈಜಗದೀಶ್, ಸಾಯಿಕುಮಾರ್, ಬುಲೆಟ್ ಪ್ರಕಾಶ್ ಕೂಡ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಬರುತ್ತಾರೆ.
ಚುನಾವಣೆಗಷ್ಟೇ ಬರುವ ಸಿನಿಮಾ ನಟರನ್ನು ಬಳಸಿಕೊಂಡು ಅವರಿಗೆ ಆದ್ಯತೆ ನೀಡುವ ಬದಲು ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿದರೆ ಪಕ್ಷದ ಕೇಡರ್ ಸ್ಟ್ರೆಂಥ್ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದು ಪಕ್ಷದ ಸಿದ್ಧಾಂತ. ಅದನ್ನೇ ಮುಂದುವರಿಸಲು ಬಿಜೆಪಿ ನಿರ್ಧರಿಸಿದೆ.
ನಟ-ನಟಿಯರು ರಾಜಕಾರಣದಲ್ಲಿ ಯಶಸ್ವಿಯಾಗಿಲ್ಲ: ಬಿಜೆಪಿಯ ಈ ತೀರ್ಮಾನಕ್ಕೆ ಇನ್ನೊಂದು ಕಾರಣ ಎಂದರೆ ಚಿತ್ರರಂಗದಲ್ಲಿ ಮಿಂಚಿದ ಸ್ಟಾರ್ ನಟ-ನಟಿಯರು ಸಿನಿಮಾ ರಂಗದಂತೆ ರಾಜಕೀಯ ಕ್ಷೇತ್ರದಲ್ಲಿ ಯಶಸ್ವಿಯಾದ ಉದಾಹರಣೆ ರಾಜ್ಯದಲ್ಲಿ ಇಲ್ಲ. ಡಾ.ರಾಜ್ ರಂತಹ ಮೇರುನಟ ರಾಜಕೀಯದಿಂದ ದೂರ ಉಳಿದಿದ್ದರು. ವಿಷ್ಣುವರ್ಧನ್ ಕೂಡ ರಾಜಕೀಯಕ್ಕೆ ಬರಲಿಲ್ಲ. ಅಂಬರೀಷ್ ರಾಜಕೀಯಕ್ಕೆ ಬಂದರೂ ಯಶಸ್ವಿಯಾಗಲಿಲ್ಲ. ಅದೇ ರೀತಿ ರಾಜ್ಯದ ಜನ ಕೂಡ ಅಂಥವರನ್ನು ಪರದೆ ಮೇಲೆ ಹೀರೋಗಳು ಎಂದು ಪರಿಗಣಿಸುತ್ತಾರೆಯೇ ಹೊರತು ರಾಜಕೀಯದಲ್ಲಿ ಹೀರೋ ಎಂದು ಭಾವಿಸುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಸ್ಟಾರ್ ನಟ-ನಟಿಯರನ್ನು ಕೇವಲ ಪ್ರಚಾರಕ್ಕೆ ಬಳಸಿಕೊಳ್ಳುವುದು ಬೇಡ ಎಂಬುದು ಪಕ್ಷದ ಯೋಚನೆ ಎಂದು ಹೇಳಲಾಗಿದೆ.
– ಎಂ. ಪ್ರದೀಪ ಕುಮಾರ್