Advertisement

ಅಪ್ಪ-ಮಕ್ಕಳ ಲಾಬಿ; ವಿಧಾನಸಭೆ ಚುನಾವಣೆ ಟಿಕೆಟ್‌ಗೆ ಆರಂಭವಾಯಿತು ಸರ್ಕಸ್‌

12:52 AM Nov 13, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಆರಂಭಗೊಂಡ ಬೆನ್ನಲ್ಲೇ ಮೂರೂ ಪಕ್ಷಗಳಲ್ಲಿ “ನನಗೊಂದು ಟಿಕೆಟ್‌, ನನ್ನ ಕುಟುಂಬಕ್ಕೆ ಇನ್ನೊಂದು ಟಿಕೆಟ್‌’ ಎಂಬ ಬೇಡಿಕೆ ಸೃಷ್ಟಿಯಾಗಿದೆ.
ಕಾಂಗ್ರೆಸ್‌ ಈಗಾಗಲೇ ಟಿಕೆಟ್‌ಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಹಲವರು ಎರಡೆರಡು ಅರ್ಜಿಗಳನ್ನು ಪಡೆದಿರುವ ಬಗ್ಗೆ ವರದಿಯಾಗಿದೆ. ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಮಾತುಗಳ ಹಿನ್ನೆಲೆಯಲ್ಲಿ ಹಾಲಿ ಶಾಸಕರು ತಮ್ಮ ಪುತ್ರ-ಪುತ್ರಿ, ಕುಟುಂಬ ಸದಸ್ಯರನ್ನು ಅಖಾಡಕ್ಕಿಳಿಸಲು ತೀರ್ಮಾನಿಸಿ ಕ್ಷೇತ್ರದಲ್ಲಿ ಓಡಾಡಿಸುತ್ತಿದ್ದಾರೆ. ಜೆಡಿಎಸ್‌ನಲ್ಲಿಯೂ ಕುಟುಂಬ ಸದಸ್ಯರಿಗೆ ಟಿಕೆಟ್‌ ಬೇಡಿಕೆ ಇದ್ದು, ಕೆಲವು ಕ್ಷೇತ್ರಗಳ ಮಟ್ಟಿಗೆ ಅದೇ ವಿಚಾರ ನಾಯಕರಿಗೆ ತಲೆನೋವು ತರುವ ಸಾಧ್ಯತೆಯಿದೆ.

Advertisement

ಕಾಂಗ್ರೆಸ್‌ನಲ್ಲೇ ಹೆಚ್ಚು
ಕಾಂಗ್ರೆಸ್‌ನಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್‌ ಬೇಡಿಕೆ ಹೆಚ್ಚಾಗಿದೆ. ಕೆಪಿಸಿಸಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲು ಬಯಸಿದವರಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಒಂದೊಂದು ಕುಟುಂಬದಿಂದ ಎರಡೆರಡು ಅರ್ಜಿ ಪಡೆದಿದ್ದಾರೆ. ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದಲೇ ಆರಂಭವಾಗಿದ್ದು, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆಗೆ ತೀರ್ಮಾನಿಸಿದರೆ ಪುತ್ರ ಡಾ| ಯತೀಂದ್ರ ವರುಣಾದಲ್ಲಿ ಟಿಕೆಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ.
ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್‌ ಮತ್ತು ಅವರ ಪುತ್ರಿ ಸಂಯುಕ್ತಾ ಪಾಟೀಲ್‌ ವಿಜಯಪುರ ನಗರ ಕ್ಷೇತ್ರಕ್ಕೆ ಅರ್ಜಿ ಪಡೆದಿದ್ದಾರೆ. ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಟಿ. ನರಸೀಪುರಕ್ಕೆ ಮತ್ತು ಅವರ ಪುತ್ರ ಸುನಿಲ್‌ ಬೋಸ್‌ ನಂಜನಗೂಡು ಕ್ಷೇತ್ರಕ್ಕೆ ಅರ್ಜಿ ಪಡೆದಿದ್ದಾರೆ.

ವಿಜಯನಗರ ಕ್ಷೇತ್ರದಿಂದ ಹಾಲಿ ಶಾಸಕ ಕೃಷ್ಣಪ್ಪ, ಗೋವಿಂದ ರಾಜನಗರದಿಂದ ಅವರ ಪುತ್ರ ಪ್ರಿಯಾ ಕೃಷ್ಣಾ ಆಕಾಂಕ್ಷಿಗಳಾಗಿದ್ದಾರೆ. ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ ಅರ್ಜಿ ಪಡೆದಿದ್ದು, ಪುತ್ರ ಮಲ್ಲಿಕಾರ್ಜುನರನ್ನು ಮತ್ತೊಂದು ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಮಾರ್ಗರೆಟ್‌ ಆಳ್ವ ಪುತ್ರ ನಿವೇದಿತ್‌ ಶಿರಸಿ ಕ್ಷೇತ್ರದಿಂದ ಅರ್ಜಿ ಪಡೆದಿದ್ದಾರೆ. ಆರ್‌.ವಿ. ದೇಶಪಾಂಡೆ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸದಿದ್ದರೆ ಅವರ ಪುತ್ರ ಸ್ಪರ್ಧಿಸಬಹುದು ಎನ್ನಲಾಗಿದೆ.

ಬಾದಾಮಿಯಿಂದ ಮಾಜಿ ಸಚಿವ ಚಿಮ್ಮನಕಟ್ಟಿ ಹಾಗೂ ಅವರ ಪುತ್ರ ಅರ್ಜಿ ಪಡೆದಿದ್ದಾರೆ. ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ, ಮಾಜಿ ಶಾಸಕ ಮಂಚನಹಳ್ಳಿ ಮಹದೇವ್‌ ಪುತ್ರಿ ಐಶ್ಚರ್ಯಾ ಮಹದೇವ್‌ ಸ್ಪರ್ಧೆಗೆ ಮುಂದಾಗಿದ್ದಾರೆ.

ಬಿಜೆಪಿಯಲ್ಲಿ ಸಿಗಲಿದೆಯೇ ಟಿಕೆಟ್‌
ಬಿಜೆಪಿಯಲ್ಲಿ ಕುಟುಂಬಕ್ಕೊಂದೇ ಟಿಕೆಟ್‌ ಎಂಬ ನಿಯಮ ಇದೆಯಾ ದರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ವಿ. ಸೋಮಣ್ಣ ಅವರ ಪುತ್ರ ಡಾ| ಅರುಣ್‌ ಸೋಮಣ್ಣ ಆಕಾಂಕ್ಷಿಗಳಾಗಿದ್ದಾರೆ. ವಿ. ಸೋಮಣ್ಣ ಅವರು ಇತ್ತೀಚೆಗಿನ ರಾಜಕೀಯ ವಿದ್ಯಮಾನಗಳಿಂದ ಬೇಸರಗೊಂಡಿದ್ದು, ತಾವು ಸ್ಪರ್ಧಿಸದೆ ಪುತ್ರನಿಗೆ ಟಿಕೆಟ್‌ ಪಡೆಯಬಹುದು. ಯಡಿಯೂರಪ್ಪ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ ವಿಜಯೇಂದ್ರ ಅವರಿಗೆ ಶಿಕಾರಿಪುರ ಟಿಕೆಟ್‌ ಸಿಗುವುದು ಖಚಿತ ಎನ್ನ ಲಾಗುತ್ತಿದೆ.

Advertisement

ಶಿವಮೊಗ್ಗದಲ್ಲಿ ಕೆ.ಎಸ್‌. ಈಶ್ವರಪ್ಪ ಅವರ ಪುತ್ರ ಕಾಂತೇಶ್‌, ಚಿತ್ರದುರ್ಗದಿಂದ ತಿಪ್ಪಾರೆಡ್ಡಿ ಪುತ್ರ ಡಾ| ಸಿದ್ಧಾರ್ಥ್, ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಾಜ್‌ ಪುತ್ರ ನಿತಿನ್‌ ಪುರುಷೋತ್ತಮ್‌, ಗೋಕಾಕ್‌ನಲ್ಲಿ ರಮೇಶ್‌ ಜಾರಕಿಹೊಳಿ ಪುತ್ರ ಅಮರ ನಾಥ್‌ ಜಾರಕಿಹೊಳಿ ಸ್ಪರ್ಧೆಗಿಳಿ ಯುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.

ಜೆಡಿಎಸ್‌ನಲ್ಲೂ ಬೇಡಿಕೆ
ಜೆಡಿಎಸ್‌ನಲ್ಲಿ ಒಂದು ಕುಟುಂಬಕ್ಕೆ ಎರಡು ಟಿಕೆಟ್‌ ಬೇಡಿಕೆ ಇದ್ದು, ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡ, ಹುಣಸೂರಿನಲ್ಲಿ ಹರೀಶ್‌ ಗೌಡರಿಗೆ ಟಿಕೆಟ್‌ ಎಂದು ಈಗಾಗಲೇ ಘೋಷಿಸಲಾಗಿದೆ. ಆದರೆ ಇದು ಇತರ ಟಿಕೆಟ್‌ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ನಾಯಕರಿಗೆ ತಲೆಬಿಸಿ ತಂದಿಟ್ಟಿದೆ.

ಗುರುಮಿಟಕಲ್‌ ಕ್ಷೇತ್ರದ ಹಾಲಿ ಶಾಸಕ ನಾಗನಗೌಡ ಕಂದಕೂರ್‌ ಬದಲಿಗೆ ಪುತ್ರ ಶರಣಗೌಡ ಕಂದಕೂರ್‌ಗೆ ಈ ಬಾರಿ ಟಿಕೆಟ್‌ ದೊರೆಯಲಿದೆ. ಎಚ್‌.ಡಿ. ಕುಮಾರಸ್ವಾಮಿ ಚೆನ್ನಪಟ್ಟಣ ದಲ್ಲಿ ಸ್ಪರ್ದಿಸಿದರೆ ಪುತ್ರ ನಿಖೀಲ್‌ ಕುಮಾರಸ್ವಾಮಿ ಅವರನ್ನು ರಾಮನಗರದಿಂದ ಸ್ಪರ್ಧೆಗೆ ಇಳಿಸಬೇಕು ಎಂಬ ಒತ್ತಾಯ ಇದೆ. ಆದರೆ ನಿಖೀಲ್‌
ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಬೇಕಾಗಿರುವುದರಿಂದ ಈ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂಬುದು ಅನಿತಾ ಕುಮಾರಸ್ವಾಮಿ ನಿಲುವು ಎನ್ನಲಾಗಿದೆ.

ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಈ ಬಾರಿ ಹಾಸನ, ಮಂಡ್ಯ ಅಥವಾ ಮೈಸೂರಿನ ಯಾವುದಾದರೂ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಇದೆ. ಆದರೆ ಇದಕ್ಕೆ ದೇವೇಗೌಡರು, ಕುಮಾರಸ್ವಾಮಿ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.

ಕೊಟ್ಟರೂ ಕಷ್ಟ , ಕೊಡದಿದ್ದರೂ ಕಷ್ಟ
ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಕೆಲವು ಪ್ರಭಾವಿ ಶಾಸಕರಿದ್ದು, ಅವರ ಕುಟುಂಬ ಸದಸ್ಯರಿಗೆ ಮತ್ತೂಂದು ಟಿಕೆಟ್‌ ನೀಡಿದರೆ ಇನ್ನೊಂದು ಕ್ಷೇತ್ರ ಗೆಲ್ಲಬಹುದು. ಇದರಿಂದ ನಮ್ಮ ಗುರಿ ಮುಟ್ಟಲು ಸಹಕಾರಿಯಾಗುತ್ತದೆ. ಹೀಗಾಗಿ ಕುಟುಂಬಕ್ಕೊಂದೇ ಟಿಕೆಟ್‌ ಎಂದು ಕಡ್ಡಾಯ ಮಾಡಬಾರದು ಎಂಬುದು ರಾಜ್ಯ ನಾಯಕರ ಅನಿಸಿಕೆ. ಆದರೆ ಪಕ್ಷವು ಒಂದು ಟಿಕೆಟ್‌ ನಿಯಮ ಕಡ್ಡಾಯ ಮಾಡದಿದ್ದರೆ ಹೊಸಮುಖಗಳಿಗೆ ಅವಕಾಶ ಸಿಗುವುದಿಲ್ಲ, ನಾವು ಅಧಿಕಾರ ಪಡೆಯುವುದು ಯಾವಾಗ ಎಂಬುದು ಎರಡನೇ ಹಂತದ ಮುಖಂಡರ ಅನಿಸಿಕೆ. ಹೀಗಾಗಿ ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ ಎಂಬಂತಾಗಿದೆ.

-  ಎಸ್‌. ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next