Advertisement

ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿದೆ ನಾಯಕರ ನಕಾರಾತ್ಮಕ ನಿಲುವು

01:06 AM Feb 08, 2023 | Team Udayavani |

ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿ ಮಾಡಲು ಭಾರತೀಯ ಚುನಾವಣ ಆಯೋಗ ಸಜ್ಜಾಗಿದೆ. ರಾಜಕೀಯ ಪಕ್ಷಗಳ ನಾಯಕರು ಈಗಾಗಲೇ ಎರಡು ಹಂತಗಳ ಪ್ರಚಾರ ಕಾರ್ಯವನ್ನು ಪೂರ್ಣಗೊಳಿಸಿ ಮೂರನೇ ಹಂತದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ರಾಜ್ಯದ ಜನತೆಯ ದುರ ದೃಷ್ಟವೋ ಏನೋ ನಾಯಕರೆನಿಸಿಕೊಂಡವರು ಬೇಕಾಬಿಟ್ಟಿಯಾಗಿ ನಾಲಗೆ ಹರಿಯ ಬಿಡುವ ಚಾಳಿಯಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ.

Advertisement

ಓರ್ವ ನಾಯಕ ನೀಡಿದ ನಕಾರಾತ್ಮಕ ಹೇಳಿಕೆಗೆ ವಿಪಕ್ಷ ನಾಯಕರು ಪ್ರತಿಯಾಗಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೆಸರಿಗೆ ಕಲ್ಲೆಸೆಯುವ ಕಾಯಕದಲ್ಲಿಯೇ ನಿರತವಾಗಿದ್ದು ರಾಜ್ಯದ ವಾಸ್ತವ ವಿಚಾರಗಳು, ಅಭಿವೃದ್ಧಿ ಯೋಜನೆಗಳು, ಒಂದಿಷ್ಟು ದೂರಾಲೋಚನೆ ಮತ್ತು ದೂರದೃಷ್ಟಿಯಿಂದ ಕೂಡಿದ ಯೋಜನೆ, ಚಿಂತನೆಗಳ ಬಗೆಗೆ ಯಾವೊಬ್ಬ ನಾಯಕನೂ ರಾಜ್ಯದ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಇವರೆಲ್ಲರೂ ಬರೀ ನಕಾರಾತ್ಮಕ ಧೋರಣೆಗೇ ಜೋತುಬಿದ್ದಿದ್ದಾರೆ. ರಾಜಕೀಯದಲ್ಲಿ ಇಂತಹ ಧೋರಣೆಯನ್ನು ಅನುಸರಿಸು ವುದು ಸಹಜವಾದರೂ ಈ ಬಾರಿ ಚುನಾವಣ ದಿನಾಂಕ ನಿಗದಿಗೂ ಮುನ್ನವೇ ಇಂತಹ ಕಾರ್ಯತಂತ್ರವನ್ನು ರಾಜಕೀಯ ಪಕ್ಷಗಳ ನಾಯಕರೆಲ್ಲರೂ ಮೈಗೂಡಿಸಿ ಕೊಂಡಂತೆ ಕಾಣುತ್ತಿದೆ.

ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ನಡೆಯುತ್ತಿದ್ದ ಇಂತಹ ವಾಕ್ಸಮರದ ಚಾಳಿ ಈಗ ಜೆಡಿಎಸ್‌ ನಾಯಕರಿಗೂ ಅಂಟಿಕೊಂಡಂತೆ ಕಾಣುತ್ತಿದೆ. ಈ ಮೂರೂ ಪಕ್ಷಗಳ ನಾಯಕರು ವಿವಿಧ ಧರ್ಮ, ಮತ, ಜಾತಿ, ವರ್ಗ, ಪಂಗಡಗಳ ಓಲೈಕೆಯ ಭರದಲ್ಲಿ ಅನ್ಯರನ್ನು ವಿನಾಕಾರಣ ಗುರಿಯಾಗಿಸಿ ಹೇಳಿಕೆಗಳನ್ನು ನೀಡ ಲಾರಂಭಿಸಿದ್ದಾರೆ. ಪ್ರಸ್ತುತತೆಗೆ ಒಂದಿಷ್ಟೂ ಕನ್ನಡಿ ಹಿಡಿಯದ, ಜನಜೀವನ, ರಾಜ್ಯದ ಅಭಿವೃದ್ಧಿ… ಹೀಗೆ ಯಾವುದೇ ದೃಷ್ಟಿಯಿಂದಲೂ ಕಿಂಚಿತ್‌ ಪ್ರಯೋಜನಕಾರಿಯಾಗದ ವಿಷಯಗಳನ್ನು ಪ್ರಸ್ತಾವಿಸಿ, ಅವುಗಳನ್ನು ಸಮರ್ಥಿಸಲು ಧರ್ಮ, ಜಾತಿ, ಪಂಗಡಗಳ ಲೇಪನ ಹಚ್ಚುವ ಈ ನಾಯಕರು ಇನ್ನೂ ಪಾಠ ಕಲಿಯುತ್ತಿಲ್ಲ ಎಂದರೆ ಇದಕ್ಕೇನೆನ್ನಬೇಕೋ? ತಿಳಿಯದು.

ರಾಜಕೀಯ, ಚುನಾವಣೆ ಎಂದಾದ ಮೇಲೆ ಒಂದಿಷ್ಟು ಟೀಕೆ, ಟಿಪ್ಪಣಿ, ನಕಾರಾತ್ಮಕ ನಿಲುವುಗಳು ಸಹಜ. ಇವೆಲ್ಲವೂ ಸೀಮಿತವಾಗಿದ್ದರಷ್ಟೇ ಅದಕ್ಕೊಂದು ಶೋಭೆ. ಇಡೀ ಚುನಾವಣೆಯನ್ನೇ ಇದೇ ಧೋರಣೆಯಿಂದ ಎದುರಿಸುವುದಾದರೆ ರಾಜ್ಯದ ಮತ್ತು ಜನತೆಯ ಭವಿಷ್ಯದ ಬಗೆಗೆ ಚಿಂತಿಸುವವರಾದರೂ ಯಾರು ಎಂಬ ಪ್ರಶ್ನೆ ಜನರನ್ನು ಕಾಡುತ್ತದೆ. ಓರ್ವ ನಾಯಕ ನೀಡಿದ ಆಭಾಸಕಾರಿ ಹೇಳಿಕೆಗೆ ಪ್ರತಿಯಾಗಿ ತನ್ನ ನಾಲಗೆ ಚಪಲವನ್ನು ತೀರಿಸಲೆಂದೋ, ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದವೆಂದೋ ಇನ್ನೊಂದು ಅನರ್ಥಕಾರಿ ಹೇಳಿಕೆ ನೀಡಿದಲ್ಲಿ ಈರ್ವರನ್ನೂ ತಕ್ಕಡಿಯ ಒಂದೇ ತಟ್ಟೆಯಲ್ಲಿಟ್ಟು ತೂಗಬೇಕಷ್ಟೆ.

ಆಡಳಿತ ಪಕ್ಷವಿರಲಿ, ವಿಪಕ್ಷವಿರಲಿ ಚುನಾವಣೆಯಲ್ಲಿ ಪ್ರಸ್ತಾವಿಸಲು ನೂರಾರು ವಿಷಯಗಳಿವೆ. ಯಾವ ವಿಷಯಗಳನ್ನು ಮುಂದಿಟ್ಟು ಮತದಾರರನ್ನು ತಮ್ಮತ್ತ ಸೆಳೆಯಬಹುದು ಎಂಬ ಕನಿಷ್ಠ ಪ್ರಜ್ಞೆ ನಮ್ಮ ನಾಯಕರಾದವರಿಗೆ ಇಲ್ಲ ಎಂದಾದರೆ ಅದು ತೀರಾ ಅಸಹನೀಯವೇ. ಪ್ರತಿಯೊಂದು ಹಂತದಲ್ಲಿಯೂ ನಕಾರಾತ್ಮಕ ವಿಷಯಗಳನ್ನು ಪ್ರಸ್ತಾವಿಸಿ ಆ ಮೂಲಕ ಒಂದಿಷ್ಟು ಗದ್ದಲ, ಚರ್ಚೆಗಳು ನಡೆದಲ್ಲಿ ನನ್ನ ಗುರಿ ಮತ್ತು ಉದ್ದೇಶ ಈಡೇರಿತು ಎಂಬ ಲೆಕ್ಕಾಚಾರ ಈ ನಾಯಕರದ್ದಾಗಿರಬಹುದು. ಆದರೆ ಇವೆಲ್ಲವೂ ತಮ್ಮ ಚೌಕಟ್ಟನ್ನು ಮೀರಿದ್ದೇ ಆದಲ್ಲಿ ಅದು ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನಾಯಕರಾದವರು ಮೊದಲು ಅರ್ಥೈಸಿಕೊಳ್ಳಬೇಕು. ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ನೀಡುವ ಇಂಥ ಅತಿರೇಕ ಮತ್ತು ಅಸಾಂದರ್ಭಿಕ ಹೇಳಿಕೆಗಳಿಂದ ಈ ರಾಜ್ಯ, ಸಮಾಜಕ್ಕೆ ಒಂದಿಷ್ಟೂ ಒಳಿತಾಗದು. ನಾಯಕರ ಇಂಥ ನಡೆಗಳೇ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆ. ಹೀಗಾಗಿ ನಾಯಕರೆನಿಸಿಕೊಂಡವರು ಇಂಥ ಹೊಣೆಗೇಡಿ ವರ್ತನೆಗಳಿಂದ ದೂರವುಳಿಯುವುದು ಅತ್ಯಗತ್ಯ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next