Advertisement

ಭಯೋತ್ಪಾದನೆ ನಿರ್ಮೂಲನೆಗೆ ಕೈ ಜೋಡಿಸಿ

02:48 PM Sep 20, 2017 | Team Udayavani |

ಚಿತ್ರದುರ್ಗ: ದೇಶದ ಭದ್ರತೆಗಾಗಿ ಭಯೋತ್ಪಾದಕ ಕೃತ್ಯ ತಡೆಯುವುದು  ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಪೊಲೀಸ್‌ ಮತ್ತು ಸರ್ಕಾರಗಳ ಜವಾಬ್ದಾರಿ. ಅಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಿದೆ. ಈ ಬಗ್ಗೆ ಅರಿವು ಮೂಡಿಸಲು ದೇಶಾದ್ಯಂತ ಬೈಕ್‌ ಜಾಥಾ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಭದ್ರತಾ ಪಡೆಯ ನಾಯಕ ಅಮಿತ್‌ಕುಮಾರ್‌ ಹೇಳಿದರು.

Advertisement

ನಗರದ ಎಸ್‌ಜೆಎಂ ಐಟಿ ಕಾಲೇಜು ಆವರಣದಲ್ಲಿ ಜಾಥಾದ ಮಹತ್ವದ ಬಗ್ಗೆ ಮಾತನಾಡಿದ ಅವರು, ನಾಗರಿಕರು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳೊಂದಿಗೆ ಕೈಜೋಡಿಸಬೇಕು. ಅದರಲ್ಲೂ ಯುವಕ-ಯುವತಿಯರು, ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದರು.

ದೇಶದ ರಕ್ಷಣೆಗಾಗಿ ಮತ್ತು ಭಯೋತ್ಪಾದಕರ ವಿರುದ್ಧದ ಹೋರಾಟಕ್ಕಾಗಿ 1984ರಲ್ಲಿ ಆರಂಭವಾದ ರಾಷ್ಟ್ರೀಯ
ಭದ್ರತಾ ಪಡೆ 33 ವರ್ಷಗಳನ್ನು ಪೂರೈಸಿದೆ. ದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗಳನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2008ರಲ್ಲಿ ನಡೆದ ಮುಂಬೈ ದಾಳಿ ಮತ್ತು ಕಳೆದ ವರ್ಷ ಪಠಾಣ್‌ ಕೋಟ್‌ನಲ್ಲಿ ನಡೆದ ಉಗ್ರರ ದಾಳಿ ನಿಗ್ರಹಿಸುವಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದರು.

ನಾಗರಿಕರು ಈ ದೇಶದ ಕಣ್ಣು ಮತ್ತು ಕಿವಿ ಇದ್ದಂತೆ. ಆದ್ದರಿಂದ ನಾಗರಿಕರಿಂದಲೇ ಭಯೋತ್ಪಾದನೆ ವಿರುದ್ಧ ಹೋರಾಟ ಆರಂಭವಾಗಬೇಕು. ನಮ್ಮ ಸುತ್ತಮುತ್ತ ನಡೆಯುವ ಸಮಾಜಘಾತುಕ ಕೃತ್ಯಗಳ ಮೇಲೆ ಕಣ್ಣಿಟ್ಟಿರಬೇಕು. ಅದನ್ನು ಸ್ಥಳೀಯ ಪೊಲೀಸರಿಗೆ ತಿಳಿಸುವ ಮೂಲಕ ಘಟನೆ ನಡೆಯದಂತೆ ತಡೆಯಬೇಕಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಬೈಕ್‌ ಜಾಥಾದಮುಖ್ಯ ಉದ್ದೇಶ ಎಂದರು.

ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಭ್ರಷ್ಟಾಚಾರ, ಭಯೋತ್ಪಾದನೆ ತಡೆ, ಎನ್‌ಎಸ್‌ಜಿಗೆ ಸೇರುವ ವಿಧಾನಗಳ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆದರು. ನಿಮ್ಮ ತಂಡದಲ್ಲಿ ಕೇವಲ ಪುರುಷರಷ್ಟೇ ಇದ್ದಾರೆ, ಮಹಿಳಾ ಕಮಾಂಡೋಗಳಿಲ್ಲವೇ, ಸ್ಲೀಪಿಂಗ್  ಸೆಲ್‌ಗ‌ಳಿಂದಲೇ ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ, ಅದನ್ನು ನಿಗ್ರಹಿಸುವುದು ಹೇಗೆ ಎಂಬ ಪ್ರಶ್ನೆಗಳನ್ನೂ ಮುಂದಿಟ್ಟರು.

Advertisement

ಮಹಿಳಾ ಕಮಾಂಡೂಗಳೂ ರಾಷ್ಟ್ರೀಯ ಭದ್ರತಾ ಪಡೆಯಲ್ಲಿದ್ದಾರೆ. ನಾಗರಿಕರು ಎಚ್ಚರ ವಹಿಸಿದರೆ ಭ್ರಷ್ಟಾಚಾರದ ಜೊತೆಗೆ ಎಲ್ಲ ತರಹದ ಭಯೋತ್ಪಾದನೆಯನ್ನೂ ನಿಗ್ರಹಿಸಬಹುದು. ಅದು ಶಾಲಾ-ಕಾಲೇಜುಗಳಿಂದಲೇ ಪ್ರಾರಂಭವಾಗಬೇಕು ಎಂದು ಅಮಿತ್‌ ಕುಮಾರ್‌ ಹೇಳಿದರು.

ನಗರ ಪೊಲೀಸ್‌ ಠಾಣೆ ನಿರೀಕ್ಷಕ ಎಸ್‌ .ಟಿ. ಒಡೆಯರ್‌, ಕೋಟೆ ಠಾಣೆ ವಿಭಾಗದ ವೃತ್ತ ನಿರೀಕ್ಷಕ ಮಹಮ್ಮದ್‌ ಫೈಜುಲ್ಲಾ ಹಾಗೂ ಸಿಬ್ಬಂದಿ, ಎಸ್‌ಜೆಎಂ ಐಟಿ ಕಾಲೇಜು ಪ್ರಾಧ್ಯಾಪಕರು ಇದ್ದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ಜಾಥಾ ನಡೆಸಲಾಯಿತು. ಡಿವೈಎಸ್‌ಪಿ ಲಕ್ಷ್ಮಣ ನಿಂಬರಗಿ ಸಾಥ್‌ ನೀಡಿದರು.

7 ಸಾವಿರ ಕಿಮೀ ಕ್ರಮಿಸುವ ಗುರಿ
ಬೈಕ್‌ ಜಾಥಾ 40 ದಿನಗಳಲ್ಲಿ 13 ರಾಜ್ಯಗಳ ಒಟ್ಟು 7 ಸಾವಿರ ಕಿಮೀ ದೂರವನ್ನು ಕ್ರಮಿಸಲಿದೆ. ದೆಹಲಿಯಿಂದ ಆರಂಭಗೊಂಡಿರುವ ಜಾಥಾ, ಜೈಪುರ, ಅಜ್ಮೀರ್ , ಉದಯಪುರ, ಅಹ್ಮದಾಬಾದ್‌, ಸೂರತ್‌, ಮುಂಬೈ, ಸತಾರಾ, ಬೆಳಗಾವಿ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದೆ. ಇಲ್ಲಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್‌, ಭುವನೇಶ್ವರ್‌, ಕೋಲ್ಕತ್ತಾಕ್ಕೆ ಹೋಗಿ ನಂತರ ದೆಹಲಿ ತಲುಪಲಿದೆ. ತಂಡದಲ್ಲಿ ಒಟ್ಟು 32 ಕಮಾಂಡೋಗಳಿದ್ದು, 20 ಬೈಕ್‌ ಸವಾರರು, 12 ಸಹಾಯಕರು ಇದ್ದಾರೆ ಎಂದು ಅಮಿತ್‌ಕುಮಾರ್‌ ಮಾಹಿತಿ ನೀಡಿದರು. ಜಾಥಾದ ಮೂಲಕ ಆಯಾ ಭಾಗದ ಶಾಲಾ-ಕಾಲೇಜುಗಳು, ವಕೀಲರ ಸಂಘ, ಯುವಕ ಸಂಘಗಳನ್ನು ಭೇಟಿಯಾಗಿದ್ದೇವೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ಮಾಡಿ ಬೀಳ್ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next