Advertisement

ಕರ್ತವ್ಯ ನಿರತ ಪಿಡಿಒ ಮೇಲೆ ಹಲ್ಲೆ ಪ್ರಕರಣ: 4 ಮಂದಿ ಆರೋಪಿಗಳ ಬಂಧನ

04:20 PM May 27, 2021 | Team Udayavani |

ಮಂಗಳೂರು: ಮಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ  ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಟ್ವಾಳ ತಾಲೂಕು ಪರಂಗಿಪೇಟೆಯ ಮುಹಮ್ಮದ್ ಇದಾಯತುಲ್ಲಾ (25), ಅಹ್ಮದ್ ಬಶೀರ್  (30), ಅಬ್ದುಲ್ ಸಿದ್ದೀಕ್ (33) ಮತ್ತು ಕುತ್ತಾರು ಮದನಿ ನಗರದ ಅಬೂಬಕರ್ ಸಿದ್ದೀಕ್ (26) ಬಂಧಿತರು.

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ  ವಿವರ ನೀಡಿದರು.

ಘಟನೆಯ ಹಿನ್ನೆಲೆ: ಮೇ 25ರಂದು ಮಧ್ಯಾಹ್ನ 1.45ರ ಸುಮಾರಿಗೆ ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ರಾಜೇಂದ್ರ ಶೆಟ್ಟಿ  ಅವರು ಕಚೇರಿಯಲ್ಲಿ  ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ  ಪಂಚಾಯತ್ ಕಚೇರಿಯ ಹೊರಗಡೆ ರಸ್ತೆ ಬದಿಯಲ್ಲಿ ನಾಲ್ಕು ಮಂದಿ ಯುವಕರು ಮಾಸ್ಕ್ ಧರಿಸದೆ ನಿಂತಿರುವುದನ್ನು ಗಮನಿಸಿದ್ದರು. ಬಳಿಕ ಪಿಡಿಒ ಆ ಯುವಕರಿದ್ದಲ್ಲಿಗೆ ತೆರಳಿ  ಮಾಸ್ಕ್ ಧರಿಸುವಂತೆ ಅವರಿಗೆ ತಿಳಿಸಿದ್ದರು ಹಾಗೂ ಬಳಿಕ ಮೊಬೈಲ್‌ನಿಂದ ಫೋಟೋ ವೀಡಿಯೋ ತೆಗೆಯಲು ಮುಂದಾಗಿದ್ದರು. ಆಗ ಯುವಕರು ಪಿಡಿಒ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಬಲ ಕೆನ್ನೆಗೆ ಮತ್ತು ಮುಖಕ್ಕೆ ಹಲ್ಲೆ ನಡೆಸಿದ್ದರು. ಇದನ್ನು ಕಂಡು ಪಂಚಾಯತ್ ಕಚೇರಿಯಲ್ಲಿದ್ದ ಸಿಬಂದಿ ಮತ್ತು ಅಧ್ಯಕ್ಷರು ಬಂದಾಗ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ  ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.

ಘಟನೆಯ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬಂದಿ ಗುರುವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆರೋಪಿಗಳಾದ ಮುಹಮ್ಮದ್ ಇದಾಯತುಲ್ಲಾ  ಮತ್ತು ಅಹ್ಮದ್ ಬಶೀರ್ ವಿರುದ್ಧ ಈ ಹಿಂದೆ ಮಂಗಳೂರಿನ ಗ್ರಾಮಾಂತರ, ಬಂದರ್ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿ ದರೋಡೆ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ  ಶಶಿ ಕುಮಾರ್ ವಿವರಿಸಿದರು.

ಇನ್ನೋರ್ವ ಆರೋಪಿ ಮನ್ಸೂರ್ ಅಲಿ ಬಂಧನಕ್ಕೆ ಬಾಕಿ ಇದ್ದು, ತನಿಖೆ ಮುಂದುವರಿದಿದೆ ಎಂದರು.

ನಿಯಮ ಉಲ್ಲಂಸಿದರೆ ಕ್ರಮ

ಕೊರೊನಾ 2ನೇ ಅಲೆ ತೀವ್ರತರ ಹಾಗೂ ಗಂಭೀರವಾದ ಪರಿಣಾಮ ಬೀರಿದ್ದು, ಅಲೆಯನ್ನು ತುಂಡರಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದು ಅತೀ ಅಗತ್ಯವಾಗಿದೆ. ನಿಯಮ ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ  ನಿಯಮ ಪಾಲನಾ ಅಧಿಕಾರಿಗಳು ನೀಡುವ ಎಚ್ಚರಿಕೆಯನ್ನು ಪರಿಗಣಿಸಿ ಸಹಕರಿಸ ಬೇಕು. ದುರ್ನಡತೆ ಅಥವಾ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಲು ಮುಂದಾದರೆ ಸೂಕ್ತ ಕ್ರಮ ಜರಗಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಮೈದಾನಗಳಲ್ಲಿ ಕ್ರಿಕೆಟ್, ವಾಲಿಬಾಲ್ ಆಡುವುದರ ಬಗ್ಗೆ ನಿಗಾ

ಮೈದಾನಗಳಲ್ಲಿ ಕ್ರಿಕೆಟ್, ವಾಲಿಬಾಲ್ ಆಡುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಗಳ ಸಿಬಂದಿಗೆ ನಿಗಾ ವಹಿಸಲು ಸೂಚಿಸಲಾಗುವುದು. ಕೊರೊನಾ ನಿಯಮ ಉಲ್ಲಂಘಿಸಿ ಆಟವಾಡುವುದು ಕಂಡು ಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next