ಬೆಂಗಳೂರು: ವೈದ್ಯರು ಮತ್ತು ವೈದ್ಯಕೀಯ ಸಿಬಂದಿ ಮೇಲೆ ಹಿಂಸಾಚಾರ, ಅಪಮಾನ ಮಾಡುವುದನ್ನು ನಿಷೇಧಿಸುವ ಜತೆಗೆ ಈ ಕೃತ್ಯಕ್ಕೆ 3ರಿಂದ 7 ವರ್ಷಗಳ ವರೆಗೆ ಶಿಕ್ಷೆಗೆ ಅವಕಾಶ ಕಲ್ಪಿಸುವ ಹಾಗೂ ವೈದ್ಯಕೀಯ ವೃತ್ತಿ ಪಾಲಿಸುವವರಿಗೆ ನೋಂದಣಿ ಕಡ್ಡಾಯ ಮಾಡುವ ಮಹತ್ವದ ಮಸೂದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ.
ಅಲ್ಲದೆ ನಕಲಿ ವೈದ್ಯರಿಗೆ 10 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ಮಸೂದೆಯನ್ನು ಧ್ವನಿಮತದ ಮೂಲಕ ಸದನ ಅಂಗೀಕರಿಸಿದೆ.
ಈ ಮಸೂದೆ ಪ್ರಕಾರ ವೈದ್ಯರು ವೃತ್ತಿ ನಿರ್ವಹಿಸ ಬೇಕಾದರೆ ವೈದ್ಯಕೀಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿರ ಬೇಕು. ಒಂದು ವೇಳೆ ನೋಂದಾಯಿಸದೆ ಕಾರ್ಯನಿರ್ವಹಿಸುತ್ತಿದ್ದರೆ ಅಂಥವರ ವಿರುದ್ಧ ಪರಿಷತ್ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವೈದ್ಯಕೀಯ ಪರಿಷತ್ತಿಗೆ ರಿಜಿಸ್ಟ್ರಾರ್ ಹಾಗೂ ಉಪ ರಿಜಿಸ್ಟ್ರಾರ್‌ಗಳನ್ನು ನೇಮಕ ಮಾಡುವ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ. ಪರಿಷತ್ತಿಗೆ ಸಭೆ ನಡೆಸುವ ವೇಳೆ, ಸ್ಥಳ ಹಾಗೂ ಕಾರ್ಯ ವಿಧಾನಗಳ ಬಗ್ಗೆಯೂ ವಿವರಿಸಲಾಗಿದೆ. ಅಧ್ಯಕ್ಷರು ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು, ಒಂದು ವೇಳೆ ಇಬ್ಬರು ಲಭ್ಯವಿಲ್ಲದ ಸಂದರ್ಭದಲ್ಲಿ ಸದಸ್ಯರು ಸಭೆಯ ಅಧ್ಯಕ್ಷತೆ ವಹಿಸಬಹುದು ಎಂದು ತಿಳಿಸಲಾಗಿದೆ.