ಬೆಂಗಳೂರು: ವಿಷ ಕುಡಿದು ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿ ಹಲ್ಲೆ ಮಾಡಿದ್ದಾರೆಂಬ ಆರೋಪದ ಕೇಳಿ ಬಂದಿದ್ದು, ಈ ಕುರಿತು ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 24ರ ರಾತ್ರಿ ನೆಲಮಂಗಲ ಮೂಲದ ವೆಂಕಟೇಶ್ ಎಂಬವರು ವಿಷ ಕುಡಿದು ಆಸ್ಪತ್ರೆಯ ಐಸಿಯು ವಾರ್ಡ್‌ಗೆ ದಾಖಲಾಗಿದ್ದರು. ಚಿಕಿತ್ಸೆ ನೀಡುವ ವೇಳೆ ರೋಗಿ ಕೂಗಾಡಿದ ಎನ್ನುವ ಕಾರಣಕ್ಕೆ ವಾರ್ಡ್ ಬಾಯ್‌ಯೊಬ್ಬರು ಬಾಯಿ, ಮೂಗಿನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ಕುರಿತು ವೈದ್ಯರಿಗೂ ಸಹ ಮಾಹಿತಿ ನೀಡಿದ್ದೇವೆ. ಹಲ್ಲೆ ಮಾಡಿದ ವಾರ್ಡ್ ಬಾಯ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಸಿ ಕ್ಯಾಮೆರಾ ಪರಿಶೀಲಿಸುವಂತೆ ಹೇಳಿದರೆ, ಅದು ಕೆಲಸ ಮಾಡುತ್ತಿಲ್ಲ ಎನ್ನುವುದಾಗಿ ಹೇಳುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.
ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಇಂದಿರಾ ಕಬಾಡೆ ಮಾತನಾಡಿ, ರೋಗಿ ವೆಂಕಟೇಶ್ ಮತ್ತು ಅವರನ್ನು ನೋಡಿಕೊಳ್ಳುತ್ತಿರುವ ಅಟೆಂಡರ್ ಗಲಾಟೆ ಮಾಡಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ, ಬೇರೆ ರೋಗಿಗಳಿಗೆ ತೊಂದರೆಯಾಗುತ್ತದೆ ಸುಮ್ಮನಿರುವಂತೆ ಹೇಳಿದ್ದಾರೆ. ಆದರೂ, ಗಲಾಟೆ ಮುಂದುವರಿಸಿದಾಗ, ಅಟೆಂಡರ್ ಅವರನ್ನು ಹೊರಹೋಗುಂತೆ ಹೇಳಿದ್ದಾರೆ.
ಈ ವೇಳೆ ವೆಂಕಟೇಶ್, ಡ್ರಿಪ್‌ಗಳನ್ನು ತೆಗೆಯುವಂತೆ ಕೂಗಾಡಿದ್ದಾನೆ. ಹಾಸಿಗೆಯಿಂದ ಎದ್ದುಹೋಗುವುದಕ್ಕೆ ಮುಂದಾಗಿದ್ದಾನೆ. ಆಸ್ಪತ್ರೆ ಡಿ ದರ್ಜೆ ನೌಕರರು ಸುಮ್ಮನಿ ರಿಸಿದ್ದಾರೆ’. ಈ ಸಂಬಂಧ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಕರೆಸಿ, ರೋಗಿಯ ಸ್ಥಿತಿಗತಿ ಬಗ್ಗೆ ವಿಚಾರಿಸಿದ್ದೇನೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ. 3 ದಿನದಲ್ಲಿ ಆಸ್ಪತ್ರೆ ಯಿಂದ ಬಿಡುಗಡೆ ಮಾಡಬಹುದೆಂದರು.