ಕಲಬುರಗಿ: ಕೋಲಿ ಸಮಾಜದ ಮುಖಂಡ ದುಂಡಪ್ಪ ಜಮಾದಾರ ಮೇಲೆ ನಗರದ ಚೌಕ್ ಪೊಲೀಸ್ ಠಾಣೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದು, ಅಲ್ಲಿನ ಇನ್‌ಸ್ಪೆಕ್ಟರ್ ಮತ್ತು ಆರು ಜನ ಸಿಬ್ಬಂದಿ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ನಗರದಲ್ಲಿ ಕರ್ನಾಟಕ ಕೋಲಿ ಕಬ್ಬಲಿಗ ಸಮನ್ವಯ ಸಮಿತಿ, ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅ.24ರಂದು ದುಂಡಪ್ಪ ಜಮಾದಾರ ಅವರನ್ನು ಚೌಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಆರ್.ನಾಯಕ ಹಾಗೂ ಆರು ಮಂದಿ ಸಿಬ್ಬಂದಿ ಸೇರಿಕೊಂಡು ಠಾಣೆಗೆ ಕರೆದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನೂರಾರು ಜನರು ಜಗತ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.
ಅವತ್ತು ಮದುವೆಗೆಂದು ದುಂಡಪ್ಪ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಂದಿಲ್ಲ ಎಂದು ಕುಟುಂಬದವರು ಹುಡುಕಾಟ ನಡೆಸಿದ್ದರು. ಮರುದಿನ ಪೊಲೀಸರೇ ದುಂಡಪ್ಪ ಮೊಬೈಲ್‌ನಿಂದ ಸಹೋದರ ಲಚ್ಚಪ್ಪ ಜಮಾದಾರಗೆ ಕರೆ ಮಾಡಿ ಎಂಪಿಎಂಸಿ ಯಾರ್ಡ್‌ಗೆ ಬರುವಂತೆ ತಿಳಿಸಿದ್ದರು. ಅಂತೆಯೇ ಲಚ್ಚಪ್ಪ ಅಲ್ಲಿಗೆ ಹೋದಾಗ ನಾಡ ಪಿಸ್ತೂಲ್ ಸಂಬಂಧ ತನಿಖೆ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದರು. ಆದರೆ, ದುಂಡಪ್ಪನ ತಲೆಗೆ ಪೊಲೀಸರು ಬಂದೂಕು ಇಟ್ಟು ಮೊಬೈಲ್ ಗಳನ್ನು ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಹೋಗಿ ಅಮಾನುಷವಾಗಿ ಹಲ್ಲೆ ಮಾಡಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ದುಂಡಪ್ಪ ಮೇಲೆ ಯಾವುದೇ ಕ್ರಿವಿನಲ್ ಪ್ರಕರಣವೂ ಇಲ್ಲ. ಆದರೂ, ಚೌಕ್ ಪೊಲೀಸ್ ಠಾಣೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈಗ ಆತ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬ್ರಹ್ಮಪುರ ಠಾಣೆ ಪೊಲೀಸರು ದುಂಡಪ್ಪನಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ, ಆರೋಪಿತ ಪೊಲೀಸರ ವಿರುದ್ಧ ಇದುವರೆಗೂ ಎಫ್‌ಐಆರ್ ದಾಖಲಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಚಾರ ಶಕ್ತಿ ಹೆಚ್ಚಿಸುತ್ತದೆ ಚಿತ್ರಕಲೆ
ತಕ್ಷಣವೇ ಚೌಕ್ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಎಸ್.ಆರ್.ನಾಯಕ, ಸಿಬ್ಬಂದಿಗಳಾದ ಕೇಶವ, ರಾಜು, ಅಶೋಕ, ಉಮೇಶ ಸೇರಿದಂತೆ ದುಂಡಪ್ಪನನ್ನು ಕರೆದೋಯ್ದು ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರೋಪಿತ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ, ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮುಖಂಡರಾದ ಮಹಾಂತೇಶ ಕೌಲಗಿ, ಬಸವರಾಜ ಬೂದಿಹಾಳ, ಲಚ್ಚಪ್ಪ ಜಮಾದಾರ, ಭೀಮಶಾ ಖನ್ನಾ, ಬೈಲಪ್ಪ ನೇಲೋಗಿ, ಶಿವಶರಣಪ್ಪ ಕೋಬಾಳ, ಪಿಡ್ಡಪ್ಪ ಜಾಲಗಾರ, ಶಂಕರ ಕಟ್ಟಿ ಸಂಗಾವಿ, ಮಲ್ಲಿಕಾರ್ಜುನ ಗುಡಬಾ, ಶಂಕು ಮ್ಯಾಕೇರಿ, ಗುಂಡು ಐನಾಪುರ, ಹಣಮಯ್ಯ ಆಲೂರ, ಸಾಯಿಬಣ್ಣ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.