ಬೆಂಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಮಹಿಳೆಯ ಮರಣೊತ್ತರ ಪರೀಕ್ಷಾ ವರದಿಯಿಂದ ಕೊಲೆಗಾರ ಸಿಕ್ಕಿಬಿದ್ದ ಪ್ರಕರಣ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೆದ್ದಲಹಳ್ಳಿ ನಿವಾಸಿ ಗೌರಿ (43) ಎಂಬವರ ಕೊಲೆ ಪ್ರಕರಣ ಸಂಬಂಧ ಕೆಎಸ್‌ಆರ್‌ಟಿಸಿ ಸೇವೆಯಿಂದ ಅಮಾನತುಗೊಂಡಿದ್ದ ಚಾಲಕ ಲಕ್ಷ್ಮೀನಾರಾಯಣ (38) ಎಂಬಾತನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಆರೋಪಿ ಲಕ್ಷ್ಮೀನಾರಾಯಣ ಈ ಹಿಂದೆ ಕೆಎಸ್‌ಆರ್‌ಟಿಸಿ ಚಾಲಕ ಹಾಗೂ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ. ಆದರೆ, ಕರ್ತವ್ಯಕ್ಕೆ ಪದೇ ಪದೆ ಗೈರುಹಾಜರಾಗುತ್ತಿದ್ದರಿಂದ ಸೇವೆಯಿಂದ ಅಮಾನತುಗೊಂಡಿದ್ದ. ಒತ್ತೆಯಿಟ್ಟಿದ್ದ ಚಿನ್ನದ ಒಡವೆ ಬಿಡಿಸಿಕೊಡುವಂತೆ ಹಠ ಮಾಡಿದ್ದಕ್ಕೆ ಗೌರಿ ಅವರನ್ನು ಕೊಲೆ ಮಾಡಿದ್ದಾಗಿ ಆರೋಪಿ ಲಕ್ಷ್ಮೀನಾರಾಯಣ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿ ಅವರು ಗೆದ್ದಲಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಮನೆಕೆಲಸ ಮಾಡಿಕೊಂಡಿದ್ದರು. ಅವರ ಮಗ ಅರುಣ್ ಮೈಸೂರಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರು. ಐದಾರು ವರ್ಷಗಳಿಂದ ಗೌರಿ ಅವರಿಗೆ ಲಕ್ಷ್ಮೀನಾರಾಯಣ್ ಪರಿಚಯವಿತ್ತು. ಆಗಾಗ ಮನೆಗೂ ಬಂದು ಹೋಗುತ್ತಿದ್ದ. ಈ ಮಧ್ಯೆ ಗೌರಿ ಅವರ ಬಳಿ ಚಿನ್ನಾಭರಣ ಪಡೆದಿದ್ದ ಆತ, ಗಿರವಿ ಅಂಗಡಿಯಲ್ಲಿ ಒತ್ತೆಯಿಟ್ಟಿದ್ದು ಬಿಡಿಸಿಕೊಟ್ಟಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು.
ಅ.1ರಂದು ರಾತ್ರಿ ಲಕ್ಷ್ಮೀನಾರಾಯಣ್ ಮನೆಗೆ ಬಂದಾಗ ಒಡವೆ ಬಿಡಿಸಿಕೊಡುವ ವಿಚಾರಕ್ಕೆ ಜಗಳ ನಡೆದಿದೆ. ಹೀಗಾಗಿ, ಮಲಗಿದ್ದ ಗೌರಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಆತ, ಆಕೆಯ ಫೋನ್ ಸ್ವಿಚ್ ಆಫ್ ಮಾಡಿಟ್ಟು ಹೊರಗಡೆಯಿಂದ ಬೀಗ ಹಾಕಿಕೊಂಡು ಹೊರಟುಹೋಗಿದ್ದ. ಅ.4ರಂದು ಗೌರಿ ಅವರ ಮನೆಯಿಂದ ಕೆಟ್ಟವಾಸನೆ ಬರುತ್ತಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಸಂಬಂಧಿಕರು ಬೀಗ ಒಡೆದು ನೋಡಿದಾಗ ಅರ್ಧಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಸಂಬಂಧ ಸಂಜಯ ನಗರ ಪೊಲೀಸರು ಮೊದಲಿಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಗೌರಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಎಂ.ಎಸ್. ರಾಮಯ್ಯ ಆಸ್ಪತ್ರೆ ವೈದ್ಯರು, ಬಲವಾದ ಹಲ್ಲೆ ನಡೆದಿರುವುದರಿಂದ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದರು.
ಈ ವರದಿ ಆಧರಿಸಿ ಕೊಲೆಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿ ಲಕ್ಷ್ಮೀನಾರಾಯಣ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಗೌರಿ ಅವರ ಕೊಲೆಯ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.