Advertisement

ಚಂದನವನದಲ್ಲಿ ಅಸ್ಸಾಮಿ ಚೆಲುವೆ

10:02 AM Dec 30, 2019 | Team Udayavani |

ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರ ಆಗಮನ ಹೊಸದೇನಲ್ಲ. ಹಲವು ದಶಕಗಳಿಂದ ಭಾರತದ ಬೇರೆ ಬೇರೆ ಮೂಲೆಗಳಿಂದ ನಟಿಯರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು, ತಮ್ಮ ಪರಿಶ್ರಮ ಮತ್ತು ಪ್ರತಿಭೆಯ ಮೂಲಕವೇ ಕನ್ನಡ ಸಿನಿಪ್ರಿಯರ ಮನಗೆದ್ದು, ಚಂದನವನದಲ್ಲಿ ಭದ್ರವಾಗಿ ನೆಲೆಯೂರಿರುವ ಹಲವು ಉದಾಹರಣೆಗಳಿವೆ. ಈಗ ಈ ಸಾಲಿಗೆ ಖಯಾದು ರೋಹರ್‌ ಎಂಬ ಅಸ್ಸಾಮಿ ಚೆಲುವೆಯ ಹೆಸರು ಸೇರ್ಪಡೆಯಾಗುತ್ತಿದೆ.

Advertisement

ಈಗಷ್ಟೇ ಚಂದನವನಕ್ಕೆ ಕಾಲಿಟ್ಟು ಬಂದಿರುವ ಖಯಾದು, ಮುಗಿಲ್‌ ಪೇಟೆ ಚಿತ್ರದಲ್ಲಿ ರವಿಚಂದ್ರನ್‌ ಪುತ್ರ ಮನುರಂಜನ್‌ ಅವರಿಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹಾಗಂತ, ಖಯಾದು ಅವರಿಗೆ ಸಿನಿಮಾ ಹೊಸದಲ್ಲ. ಇದಕ್ಕೂ ಮುನ್ನ ಅವರು ಮರಾಠಿ ಭಾಷೆಯ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಆ ಚಿತ್ರ ಇನ್ನೇನು ಬಿಡುಗಡೆಯ ಹಂತದಲ್ಲಿದೆ. ಆ ಸಿನಿಮಾ ರಿಲೀಸ್‌ಗೆ ಮುನ್ನವೇ, ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿರುವ ಖಯಾದು ಕನ್ನಡ ಚಿತ್ರರಂಗದ ಮೂಲಕ ಸೌಥ್‌ ಸಿನಿ ದುನಿಯಾಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಖಯಾದು ಅಭಿನಯಿಸಿರುವ ಚಿತ್ರ ಇನ್ನೂ ಚಿತ್ರೀಕರಣದಲ್ಲಿ ಇರುವಾಗಲೇ, ಚಿತ್ರದಲ್ಲಿ ಅವರ ಗೆಟಪ್‌ ತೋರಿಸುವ ಕೆಲ ಪೋಟೋಗಳು ಹೊರಬಿದ್ದಿವೆ. ಇದರಲ್ಲಿ ಖಯಾದು ಅವರ ಲುಕ್‌, ಸ್ನಿಗ್ಧ ಸೌಂದರ್ಯ ನೋಡುಗರ ಗಮನ ಸೆಳೆಯುತ್ತಿದ್ದು, ಈ ಪೋಟೋಗಳನ್ನು ಹೊರಬರುತ್ತಿದ್ದಂತೆ ಒಂದಷ್ಟು ಹೊಸಚಿತ್ರಗಳ ಬೇರೆ ಬೇರೆ ಆಫ‌ರ್ ಅವರನ್ನು ಹುಡುಕಿಕೊಂಡು ಬರುತ್ತಿವೆಯಂತೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾ ಯಾನ ಶುರು ಮಾಡಿರುವುದರ ಬಗ್ಗೆ ಮಾತನಾಡುವ ಖಯಾದು, “ನನಗೆ ಇದು ಮೊದಲ ಕನ್ನಡ ಸಿನಿಮಾ. ಮೊದಲ ಸಿನಿಮಾವೇ ಒಳ್ಳೆಯ ಅನುಭವ ತಂದು ಕೊಡುತ್ತಿದೆ. ಇನ್ನು ಕನ್ನಡ ಭಾಷೆ ಅಂದ್ರೆ ನನಗಿಷ್ಟ. ಸದ್ಯಕ್ಕೆ ಕನ್ನಡ ಭಾಷೆ ಅರ್ಥವಾಗುತ್ತೆ. ಆದ್ರೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಕನ್ನಡ ಭಾಷೆ ಕಲಿಯಲು ತರಬೇತಿ ಕ್ಲಾಸ್‌ಗೆ ಹೋಗುತ್ತಿದ್ದೇನೆ. ಆದಷ್ಟು ಬೇಗ ಕನ್ನಡ ಕಲಿತು ಇಲ್ಲೇ ಇನ್ನಷ್ಟು ಸಿನಿಮಾ ಮಾಡುತ್ತೇನೆ’ ಎನ್ನುತ್ತಾರೆ.

ಒಟ್ಟಾರೆ, ಇಲ್ಲಿಯವರೆಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಹುತೇಕ ಎಲ್ಲ ಭಾಷೆಯ ನಟಿಯರೂ ಕನ್ನಡ ಚಿತ್ರರಂಗಕ್ಕೆ ಬಂದು ಹೋಗಿದ್ದಾರೆ. ಹೀಗೆ ಬಂದ ನೂರಾರು ಸಂಖ್ಯೆಯ ನಟಿಯರಲ್ಲಿ ಕೆಲವೇ ಕೆಲವರು ಮಾತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ನೆಚ್ಚಿನ ನಟಿಯರಾಗಿ ತಮ್ಮದೇ ಆದ ಅಚ್ಚು ಮೂಡಿಸಿದ್ದಾರೆ. ಸದ್ಯ ಆರಂಭದಲ್ಲೇ ಒಂದಷ್ಟು ಭರವಸೆ ಮೂಡಿಸಿರುವ ಖಯಾದು ಅಂತಹ ನಾಯಕಿಯರಂತೆ ತಾನು ಕೂಡ ಕಮಾಲ್‌ ಮಾಡಲು ಯಶಸ್ವಿಯಾಗುತ್ತಾರಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next