Advertisement

ಲೀಟರ್‌ ನೀರಿಗೆ 110 ರೂ.! ಅಸ್ಸಾಂನಲ್ಲಿ ಕುಡಿಯುವ‌ ನೀರು ಪೆಟ್ರೋಲ್‌ಗಿಂತಲೂ ದುಬಾರಿ

07:52 AM Jun 26, 2022 | Team Udayavani |

ಗುವಾಹಾಟಿ: ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ನೀರು… ಆದರೆ ಕುಡಿಯಲು ಮಾತ್ರ ಒಂದು ಹನಿ ನೀರೂ ಸಿಗುತ್ತಿಲ್ಲ. ಸಿಕ್ಕರೂ ಪೆಟ್ರೋಲ್‌ಗಿಂತಲೂ ದುಬಾರಿ!

Advertisement

ಹೌದು, ಪ್ರವಾಹಪೀಡಿತ ಅಸ್ಸಾಂನ ಸ್ಥಿತಿಯಿದು. ಜಲಾವೃತಗೊಂಡಿರುವ ನೂರಾರು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸಿಲ್ಚಾರ್‌ನಲ್ಲಂತೂ ಪರಿಸ್ಥಿತಿ ಗಂಭೀರವಾಗಿದ್ದು, ಒಂದು ಲೀಟರ್‌ ನೀರು 110 ರೂ. ಗಳಿಗೆ ಮಾರಾಟವಾಗುತ್ತಿದೆ. ಮಿನರಲ್‌ ವಾಟರ್‌ ಕ್ಯಾನ್‌ಗಳಿಗೆ 300 ರೂ.ಗಳಾಗಿದ್ದರೆ, ಯಾವುದೇ ತರಕಾರಿಯೂ 100 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿಲ್ಲ, ಎಷ್ಟು ಹುಡುಕಾಡಿದರೂ ಕ್ಯಾಂಡಲ್‌ಗ‌ಳು ಕೂಡ ಲಭ್ಯವಾಗುತ್ತಿಲ್ಲ.

ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿರುವ ಕಾರಣ ಜಿಲ್ಲಾಡಳಿತಕ್ಕೂ ನಮ್ಮ ಗ್ರಾಮಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯುತ್‌, ಕುಡಿಯುವ ನೀರಿನ ಸಮಸ್ಯೆಯಿಂದ ನಾವು ಕಂಗೆಟ್ಟಿದ್ದೇವೆ ಎಂದು ಸಿಲ್ಚಾರ್‌ನ ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

“ಕಳೆದ ಸೋಮವಾರದಿಂದಲೂ ಇಲ್ಲಿ ಕರೆಂಟ್‌ ಇಲ್ಲ. ಕುಡಿಯಲೆಂದು ಇಟ್ಟಿದ್ದ ನೀರೆಲ್ಲವೂ ಖಾಲಿಯಾಗಿದೆ. ಕೊನೆಗೆ ನಾನು ಎದೆಮಟ್ಟದ ನೀರಿನಲ್ಲೇ ಕಷ್ಟಪಟ್ಟು 1 ಕಿ.ಮೀ. ದೂರ ಸಾಗಿ, ಒಂದೊಂದು ಲೀಟರ್‌ನ 2 ಬಾಟಲಿ ನೀರನ್ನು ತೆಗೆದುಕೊಂಡು ಬಂದೆ. ಲೀ.ಗೆ 20 ರೂ. ಇದ್ದದ್ದು ಈಗ 110 ರೂ. ಆಗಿದೆ. ಇನ್ನೂ ಕೆಲವು ಕಡೆ 150 ರೂ. ವರೆಗೂ ಹೋಗಿದೆಯಂತೆ. ದುಬಾರಿಯಾ ದರೂ ನೀರು ಖರೀದಿಸದೆ ನನಗೆ ಬೇರೆ ದಾರಿಯಿರಲಿಲ್ಲ’ ಎನ್ನುತ್ತಾರೆ ಸಿಲ್ಚಾರ್‌ನ ಹೈಸ್ಕೂಲ್‌ ಶಿಕ್ಷಕ ದಾಸ್‌.

ವಾಯುಪಡೆಗೂ ಗೊಂದಲ: ಮೇಘಾಲಯ ಮತ್ತು ಮಿಜೋರಾಂನ ಪರ್ವತ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಸ್ಸಾಂನ ಬಾರಕ್‌ ನದಿ ತುಂಬಿ ತುಳುಕುತ್ತಿದೆ. ಹೀಗಾಗಿಯೇ ಸಿಲ್ಚಾರ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಪ್ರವಾಹ ಇಳಿಯುತ್ತಿಲ್ಲ. ಇಲ್ಲಿನ ಜನರು ನೀರು ಹಾಗೂ ಆಹಾರದ ಪ್ಯಾಕೆಟ್‌ಗಳಿಗಾಗಿ ಕಾಯುತ್ತಿದ್ದಾರೆ. ಆದರೆ ವಾಯುಪಡೆಯ ಹೆಲಿಕಾಪ್ಟರ್‌ಗಳು ಆಹಾರ ಸಾಮಗ್ರಿಗಳನ್ನು ಹೊತ್ತು ಸಾಗಿದ್ದರೂ, ಪ್ಯಾಕೆಟ್‌ಗಳನ್ನು ಕೆಳಕ್ಕೆ ಹಾಕಲು ಒಂದೇ ಒಂದು ಒಣ ಪ್ರದೇಶವೂ ಕಾಣಿಸುತ್ತಿಲ್ಲ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿ ಸಿದ್ದಾರೆ. ಪರಿಹಾರ ವಿತರಣೆಗೆ ಡ್ರೋನ್‌ಗಳನ್ನೂ ಬಳಕೆ ಮಾಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

Advertisement

24 ಗಂಟೆಗಳಲ್ಲಿ 10 ಸಾವು: ಸತತ 6 ದಿನಗಳಿಂದಲೂ ಸಿಲ್ಚಾರ್‌ನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಪ್ರವಾಹ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಅಸ್ಸಾಂನಲ್ಲಿ 24 ಗಂಟೆಗಳ ಅವಧಿಯಲ್ಲಿ 10 ಮಂದಿ ಅಸುನೀಗಿದ್ದು, ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ತಿಳಿಸಿದೆ.

ದೇಶದಲ್ಲಿ ಮಳೆ ಕೊರತೆ
ಜೂನ್‌ ಮೊದಲಾರ್ಧದಲ್ಲಿ ದೇಶಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ತಿಂಗಳ ದ್ವಿತೀಯಾರ್ಧದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದ್ದರೂ, ಅನಂತರದಲ್ಲಿ ಮತ್ತೆ ಮಳೆಯ ತೀವ್ರತೆ ಕಡಿಮೆಯಾಗಿದೆ. ಜೂನ್‌ 24ರ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಮಳೆ ಕೊರತೆ -4 ಪ್ರತಿಶತದಷ್ಟಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಜೂ.28ರಿಂದ ಮುಂಗಾರು ಮತ್ತೆ ಚೇತರಿಸಿಕೊಂಡು, ದೇಶಾದ್ಯಂತ ಉತ್ತಮ ಮಳೆಯಾ ಗುವ ನಿರೀಕ್ಷೆಯಿದೆ ಎಂದೂ ಮೂಲಗಳು ತಿಳಿಸಿವೆ.

ಸಿಡಿಲು ಬಡಿದು ಮೂವ ರು ಬಾಲಕಿಯರ ಸಾವು
ಮಧ್ಯಪ್ರದೇಶದ ರೇವಾ ಜಿಲ್ಲೆಯ 5 ಪ್ರದೇಶಗಳಲ್ಲಿ ಶನಿವಾರ ಸಿಡಿಲು ಬಡಿದ ಪರಿಣಾಮ ಮೂವರು ಬಾಲಕಿಯರು ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 4 ದಿನಗಳ ಕಾಲ ಗುಡುಗು-ಮಿಂಚಿನಿಂದ ಕೂಡಿದ ಬಿರುಗಾಳಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಎಲ್ಲೋ ಅಲರ್ಟ್‌ ಘೋಷಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next